ವಿಶೇಷವಾಗಿ ಬಿಡುಗಡೆ ಆಯ್ತು ‘ಕೆರೆಬೇಟೆ’ ಟೀಸರ್; ಸಾಥ್ ನೀಡಿದ ಡಾಲಿ, ದಿನಕರ್ ತೂಗುದೀಪ
ನಿರ್ದೇಶಕ ರಾಜ್‌ಗುರು ಅವರು ‘ಕೆರೆಬೇಟೆ’ ಚಿತ್ರದಲ್ಲಿ ಒಂದು ವಿಶೇಷವಾದ ಕಥೆ ಹೇಳಲಿದ್ದಾರೆ. ಗೌರಿ ಶಂಕರ್ ಅವರು ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಂದನವನದ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಟೀಸರ್ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪ್ಪಟ ಕನ್ನಡದ ಮಣ್ಣಿನ ಕಥೆಯನ್ನು ಇಟ್ಟುಕೊಂಡ ಬಂದ ಸಿನಿಮಾಗಳಿಗೆ ಪ್ರೇಕ್ಷಕರು ಮನಸೋಲುತ್ತಿದ್ದಾರೆ. ‘ಕೆರೆಬೇಟೆ’ (Kerebete) ಸಿನಿಮಾದಲ್ಲಿ ಕೂಡ ಅಂಥ ದೇಸಿ ಕಥೆ ಇರಲಿದೆ. ಅದರ ಝಲಕ್ ತೋರಿಸಲು ಇಂದು (ಜನವರಿ 3) ಟೀಸರ್ ಬಿಡುಗಡೆ ಮಾಡಲಾಗಿದೆ. ಮಲೆನಾಡಿನಲ್ಲಿ ಮೀನು ಬೇಟಿಯಾಡುವ ಪದ್ಧತಿ ಇದೆ. ಅದನ್ನೇ ಕೇಂದ್ರವಾಗಿ ಇಟ್ಟುಕೊಂಡು ‘ಕೆರೆಬೇಟೆ’ ಸಿನಿಮಾ ಮಾಡಲಾಗಿದೆ. ಚಿತ್ರದ ಕಾನ್ಸೆಪ್ಟ್ಗೆ ತಕ್ಕಂತೆಯೇ ವಿಶೇಷವಾಗಿ ಬೆಂಗಳೂರಿನ ಮಲ್ಲತ್ತಹಳ್ಳಿ ಕೆರೆಯ ದಂಡೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಗೌರಿ ಶಂಕರ್ (Gowri Shankar) ಅವರು ಹೀರೋ ಆಗಿ ನಟಿಸಿದ್ದಾರೆ. ರಾಜ್‌ಗುರು ನಿರ್ದೇಶನ ಮಾಡಿದ್ದಾರೆ.
‘ಕೆರೆಬೇಟೆ’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಚಂದನವನದ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದಾರೆ. ಡಾಲಿ ಧನಂಜಯ ಹಾಗೂ ದಿನಕರ್ ತೂಗುದೀಪ್ ಅವರು ಟೀಸರ್ ಅನಾವರಣ ಮಾಡಿದ್ದಾರೆ. ನಿರ್ದೇಶಕರಾದ ಪವನ್ ಪಡೆಯರ್, ಗುರು ದೇಶಪಾಂಡೆ, ಜಡೇಶ್ ಅವರು ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಟೀಸರ್ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ‘ಜೋಕಾಲಿ’ ಮತ್ತು ‘ರಾಜಹಂಸ’ ಚಿತ್ರಗಳಲ್ಲಿ ಹೀರೋ ಆಗಿ ನಟಿಸಿದ್ದ ಗೌರಿ ಶಂಕರ್ ಅವರು ಈಗ ‘ಕೆರೆಬೇಟೆ’ ಚಿತ್ರದ ಮೂಲಕ ಡಿಫರೆಂಟ್ ಪಾತ್ರದೊಂದಿಗೆ ಜನರ ಎದುರು ಬರಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ‘ಕೆರೆಬೇಟೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಿರುವ ಹೊಸ ನಟಿ ಬಿಂದು ಶಿವರಾಮ್
ಪವನ್ ಒಡೆಯರ್ ಜೊತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿ ಅನುಭವ ಪಡೆದಿರುವ ನಿರ್ದೇಶಕ ರಾಜ್‌ಗುರು ಅವರು ‘ಕೆರೆಬೇಟೆ’ ಚಿತ್ರದಲ್ಲಿ ಒಂದು ವಿಶೇಷವಾದ ಕಥೆ ಹೇಳಲಿದ್ದಾರೆ. ‘ನಮ್ಮ ನೆಲದ ಸಿನಿಮಾ ಕೆರೆಬೇಟೆ. ಇಂಥ ಚಿತ್ರಗಳು ಎಂದಿಗೂ ಸೋಲಲ್ಲ. ಎಷ್ಟೋ ಜನರಿಗೆ ಕೆರೆಬೇಟೆ ಬಗ್ಗೆ ಗೊತ್ತಿಲ್ಲ. ಈ ಚಿತ್ರದ ಮೂಲಕ ಎಲ್ಲರಿಗೂ ಗೊತ್ತಾಗಲಿದೆ’ ಎಂದಿದ್ದಾರೆ ಡಾಲಿ ಧನಂಜಯ್. ‘ನಾನು ಈಗಾಗಲೇ ಈ ಸಿನಿಮಾ ನೋಡಿದ್ದೇನೆ. ಬಹಳ ಚೆನ್ನಾಗಿದೆ. ಇದು ಖಂಡಿತ ಗೆಲ್ಲುತ್ತದೆ’ ಎಂದು ದಿನಕರ್ ತೂಗುದೀಪ ಹೇಳಿದ್ದಾರೆ.
‘ಕೆರೆಬೇಟೆ’ ಸಿನಿಮಾಗೆ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸಿಗಂದೂರು, ಸೊರಬ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ. ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ‘ನಾವು ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಎಲ್ಲರೂ ಈ ಚಿತ್ರ ನೋಡಬೇಕು’ ಎಂದಿದ್ದಾರೆ ಗೌರಿ ಶಂಕರ್. ಈ ಸಿನಿಮಾದಲ್ಲಿ ನಾಯಕಿಯಾಗಿ ಬಿಂದು ನಟಿಸಿದ್ದಾರೆ. ಇದು ಅವರಿಗೆ ಚೊಚ್ಚಲ ಸಿನಿಮಾ. ಸಂಪತ್, ಗೋಪಾಲ್ ದೇಶಪಾಂಡೆ, ಹರಿಣಿ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ಗಗನ್ ಬಡೇರಿಯಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಜನಮನ ಸಿನಿಮಾ’ ಸಂಸ್ಥೆಯ ಮೂಲಕ ಜೈ ಶಂಕರ್ ಪಟೇಲ್ ಹಾಗೂ ಗೌರಿ ಶಂಕರ್ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ