IFFM: ಮೆಲ್ಬರ್ನ್ ಚಲನಚಿತ್ರೋತ್ಸವದಲ್ಲಿ ‘ಪಿಂಕಿ ಎಲ್ಲಿ?’ ಸಿನಿಮಾ ನಿರ್ದೇಶಕ ಪೃಥ್ವಿಗೆ ವಿಶೇಷ ಪ್ರಶಸ್ತಿ; ಸೂರರೈ ಪೊಟ್ರು ಅತ್ಯುತ್ತಮ ಚಿತ್ರ
Soorarai Potru: ಕನ್ನಡದ ಪಿಂಕಿ ಎಲ್ಲಿ? ಚಿತ್ರದ ನಿರ್ದೇಶಕ ಪೃಥ್ವಿ ಅವರಿಗೆ ಮೆಲ್ಬರ್ನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ಲಭಿಸಿದೆ. ತಮಿಳಿನ ಸೂರರೈ ಪೊಟ್ರು ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ನಟನೆಗಾಗಿ ಸೂರ್ಯ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ನಟಿ ವಿದ್ಯಾ ಬಾಲನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಮೆಲ್ಬರ್ನ್ ಭಾರತೀಯ ಚಲನಚಿತ್ರೋತ್ಸವ- 2021(ಐಎಫ್ಎಫ್ಎಂ)ರಲ್ಲಿ ‘ಪಿಂಕಿ ಎಲ್ಲಿ?’ ಚಿತ್ರದ ನಿರ್ದೇಶಕ ಪೃಥ್ವಿ ಕೋಣನೂರು ಅವರಿಗೆ ಅತ್ಯುತ್ತಮ ನಿರ್ದೇಶಕ- ವಿಶೇಷ ಗೌರವ ಪ್ರಶಸ್ತಿ ಲಭಿಸಿದೆ. ಪಿಂಕಿ ಎಲ್ಲಿ ಚಿತ್ರವು ಅತ್ಯುತ್ತಮ ಸ್ವತಂತ್ರ ಚಲನ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಸ್ಪರ್ಧಿಸಿತ್ತು. ಪ್ರಶಸ್ತಿ ಸಮಾರಂಭವು ಇಂದು ಆನ್ಲೈನ್ ಮುಖಾಂತರ ನಡೆದಿದ್ದು, ಟ್ವಿಟರ್ ಮೂಲಕ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಸೂರ್ಯ ನಟನೆಯ, ಕನ್ನಡಿಗ ಜಿ.ಆರ್.ಗೋಪಿನಾಥ್ ಸತ್ಯ ಕಥೆ ಆಧರಿಸಿದ ‘ಸೂರರೈ ಪೊಟ್ರು’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ, ಸೂರ್ಯ ಅವರ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.
ಪಿಂಕಿ ಎಲ್ಲಿ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ ಕುರಿತು ಐಎಫ್ಎಫ್ಎಂ ಘೋಷಿಸಿದ ಟ್ವೀಟ್:
#JustAnnounced ✨HONORARY MENTION- BEST DIRECTOR✨
CONGRATULATIONS TO Prithvi Konanur for Pinki Elli?@PrithviKonanur #PinkiElli? pic.twitter.com/gB6CE7X1W8
— Indian Film Festival of Melbourne (@IFFMelb) August 20, 2021
ವೆಬ್ ಸೀರೀಸ್ವಿಭಾಗದಲ್ಲಿ ಈ ಬಾರಿ ಮೂರು ಪ್ರಶಸ್ತಿಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿತ್ತು. ಅದರಲ್ಲಿ ಉತ್ತಮ ನಟನೆಗಾಗಿ ನಟ ಮನೋಜ್ ಬಾಜಪೇಯಿ ಹಾಗೂ ನಟಿ ಸಮಂತಾ ಅಕ್ಕಿನೇನಿ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅತ್ಯುತ್ತಮ ವೆಬ್ಸೀರೀಸ್ ಪ್ರಶಸ್ತಿಯನ್ನು ಮಿರ್ಜಾಪುರ್ 2 ಪಡೆದುಕೊಂಡಿದೆ. ಚಿತ್ರರಂಗದಲ್ಲಿನ ವೈಶಿಷ್ಟ್ಯಪೂರ್ಣ ಪಾತ್ರ ನಿರ್ವಹಣೆಗಾಗಿ ನಟ ಪಂಕಜ್ ತ್ರಿಪಾಠಿಯವರಿಗೆ ವಿಶೇಷ ಪ್ರಶಸ್ತಿ ಲಭಿಸಿದೆ.
ಶೆರ್ನಿ ಚಿತ್ರದ ನಟನೆಗಾಗಿ ನಟಿ ವಿದ್ಯಾ ಬಾಲನ್ಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭ್ಯವಾಗಿದೆ. ಲುಡೋ ಚಿತ್ರದ ನಿರ್ದೇಶನಕ್ಕಾಗಿ ಅನುರಾಗ್ ಬಸು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಸಮಾನತೆಯ ಆಶಯವನ್ನು ಬಿಂಬಿಸಿದ್ದಕ್ಕೆ ನೀಡಲಾಗುವ ‘ಈಕ್ವಾಲಿಟಿ ಇನ್ ಸಿನಿಮಾ’ ಪ್ರಶಸ್ತಿಗೆ ಮಲಯಾಳಂನ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಹಾಗೂ ‘ಗಾಡ್ ಆನ್ ದಿ ಬಾಲ್ಕನಿ’ ಚಿತ್ರಗಳು ಆಯ್ಕೆಯಾಗಿವೆ.
ಪ್ರಶಸ್ತಿಯಲ್ಲಿ ದಕ್ಷಿಣ ಭಾರತೀಯ ಚಿತ್ರಗಳು ಪ್ರಾಬಲ್ಯ ಮೆರೆದಿದ್ದು, ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಈಶಾನ್ಯ ರಾಜ್ಯಗಳ ಚಿತ್ರಗಳು ಗಮನ ಸೆಳೆದಿವೆ.
ಇದನ್ನೂ ಓದಿ:
ದಳಪತಿ ವಿಜಯ್ ಮತ್ತು ಮಹೇಶ್ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್
ಭಜರಂಗಿ 2 ಚಿತ್ರದ ನೂತನ ಹಾಡಿಗೆ ಮನಸೋತ ಫ್ಯಾನ್ಸ್; ಮತ್ತೊಮ್ಮೆ ಮೋಡಿ ಮಾಡಿದ ಕೈಲಾಶ್ ಕೇರ್- ಅರ್ಜುನ್ ಜನ್ಯ ಜೋಡಿ
(Kannada film Pinki Elli director Prithvi got honorary award and Soorarai Potru got best film award in IFFM)