‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್

ಹಿರಿಯ ನಟಿ ಬಿ. ಸರೋಜಾದೇವಿ ಅವರು 87ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆಗೆ ನಟ ದರ್ಶನ್ ಅವರು ಕಂಬನಿ ಮಿಡಿದಿದ್ದಾರೆ. ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯ ಕ್ಷೇತ್ರದ ಗಣ್ಯರು ಸರೋಜಾದೇವಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಮಂಗಳವಾರ (ಜುಲೈ 15) ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ.

‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್
B Saroja Devi, Darshan Thoogudeepa

Updated on: Jul 14, 2025 | 3:15 PM

ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಬಿ. ಸರೋಜಾದೇವಿ (B Saroja Devi) ಅವರು ನಿಧನರಾಗಿದ್ದು, ಅನೇಕ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ನಟ ದರ್ಶನ್ (Darshan) ಅವರು ಕೂಡ ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ. ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಎಂದು ದರ್ಶನ್ (Darshan Thoogudeepa) ಪೋಸ್ಟ್ ಮಾಡಿದ್ದಾರೆ.

ಬಿ. ಸರೋಜಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ಸೋಮವಾರ (ಜುಲೈ 14) ಅವರು ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಮುಂಜಾನೆ 8.30ರ ಸುಮಾರಿಗೆ ಅವರು ನಿಧನರಾದರು ಎಂಬುದು ತಿಳಿಯಿತು. ಜುಲೈ 15ರಂದು ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ
ಸರೋಜಾ ದೇವಿ ಹುಟ್ಟಿಗೆ ಕಾರಣ ಆಗಿತ್ತು ಸತ್ಯ ನಾರಾಯಣ ಪೂಜೆ ಪ್ರಸಾದ
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

ಸಿಎಂ ಸಿದ್ದರಾಮಯ್ಯ ಕೂಡ ಬಿ. ಸರೋಜಾದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಸದಭಿರುಚಿಯ ಚಿತ್ರಗಳ‌ ಮೂಲಕ ಹಲವು ದಶಕಗಳ‌ ಕಾಲ ಸಿನಿಪ್ರಿಯರನ್ನು ರಂಜಿಸಿದ್ದ ಅವರ ಅಗಲಿಕೆ ಭಾರತೀಯ ಚಿತ್ರರಂಗಕ್ಕಾದ ಬಹುದೊಡ್ಡ ನಷ್ಟ. ಸರೋಜಾದೇವಿಯವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ. ಅವರ ದುಃಖತಪ್ತ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು’ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.

ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಸಹ ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ‘ಅಭಿನಯ ಸರಸ್ವತಿಗೆ ಭಾವಪೂರ್ವಕ ವಿದಾಯ. ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರೀಮತಿ ಬಿ. ಸರೋಜಾದೇವಿ ಅವರು ಇಂದು ನಮ್ಮನ್ನು ಅಗಲಿದ್ದು, ಅವರ ಅಗಲಿಕೆಯಿಂದ ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತಾ, ಅಪಾರ ಅಭಿಮಾನಿಗಳಿಗೆ ಹಾಗೂ ಕುಟುಂಬಸ್ಥರಿಗೆ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ’ ಎಂದು ಸಾಧು ಕೋಕಿಲ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಾಯುವುದಕ್ಕೂ ಮೊದಲು ಸರೋಜಾದೇವಿಗೆ ಏನಾಗಿತ್ತು? ಇಲ್ಲಿದೆ ಕೊನೆಯ ಕ್ಷಣಗಳ ವಿವರ

‘ಮಹಾಕವಿ ಕಾಳಿದಾಸ’ ಸಿನಿಮಾದ ಮೂಲಕ 1955ರಲ್ಲಿ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆಗ ಅವರಿಗೆ 17ರ ಪ್ರಾಯವಾಗಿತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೇ ತಮಿಳು, ಹಿಂದಿ, ತೆಲುಗು ಭಾಷೆಯ ಸಿನಿಮಾಗಳಲ್ಲಿ ಕೂಡ ಸರೋಜಾ ದೇವಿ ನಟಿಸಿದ್ದರು. 200ಕ್ಕೂ ಅಧಿಕ ಸಿನಿಮಾಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.