ನಟಿ ಬಿ. ಸರೋಜಾದೇವಿ ನಿಧನ: ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ

ಹಿರಿಯ ನಟಿ ಬಿ. ಸರೋಜಾದೇವಿ ಅವರು ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದರು. ಈಗ ನೇತ್ರದಾನದ ಮೂಲಕ ಅವರು ನಿಧನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ. ಸರೋಜಾದೇವಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ನಾರಾಯಣ ನೇತ್ರಾಲಯಕ್ಕೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಈ ಮೂಲಕ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ.

ನಟಿ ಬಿ. ಸರೋಜಾದೇವಿ ನಿಧನ: ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ
B Saroja Devi

Updated on: Jul 14, 2025 | 5:28 PM

ಖ್ಯಾತ ನಟಿ ಬಿ. ಸರೋಜಾದೇವಿ (B Saroja Devi) ಅವರು ಇಂದು (ಜುಲೈ 14) ನಿಧನರಾಗಿದ್ದು, ಇಡೀ ಚಿತ್ರರಂಗ ಶೋಕದಲ್ಲಿದೆ. ಅನೇಕ ಸೆಲೆಬ್ರಿಟಿಗಳು, ಆಪ್ತರು, ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಮಂಗಳವಾರ (ಜುಲೈ 15) ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸಾವಿನ ನಂತರವೂ ಸರೋಜಾದೇವಿ ಅವರು ಸಾರ್ಥಕತೆ ಮೆರೆದಿದ್ದಾರೆ. ಸರೋಜಾದೇವಿ ಅವರ ಕಣ್ಣುಗಳನ್ನು ದಾನ (Eye Donation) ಮಾಡಲಾಗಿದೆ. ನಾರಾಯಣ ನೇತ್ರಾಲಯಕ್ಕೆ ಕಣ್ಣುಗಳ ದಾನ ಮಾಡಲಾಗಿದ್ದು, ವೈದ್ಯರು ಆಗಮಿಸಿ ಕಣ್ಣುಗಳನ್ನು ತೆಗೆದುಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನೇತ್ರದಾನಕ್ಕೆ ಮಾದರಿ ಆದವರು ಡಾ. ರಾಜ್​ಕುಮಾರ್. ನಿಧನದ ಬಳಿಕ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಅದೇ ರೀತಿ ಪುನೀತ್ ರಾಜ್​ಕುಮಾರ್ ಅವರ ಕಣ್ಣುಗಳನ್ನು ಕೂಡ ದಾನ ಮಾಡಲಾಯಿತು. ಈಗ ನಟಿ ಸರೋಜಾದೇವಿ ಅವರು ಸಹ ಈ ವಿಚಾರದಲ್ಲಿ ಮಾದರಿ ಆಗಿದ್ದಾರೆ. ನೇತ್ರದಾನದಿಂದಾಗಿ ಅಂಧರ ಬಾಳಿಗೆ ಬೆಳಕು ಬರಲಿದೆ.

1955ರಿಂದಲೂ ಬಿ. ಸರೋಜಾದೇವಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಹೆಸರಾಂತ ಹೀರೋಗಳ ಜೊತೆ ನಟಿಸಿ ಅವರು ಜನಪ್ರಿಯತೆ ಪಡೆದಿದ್ದರು. ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿದ್ದವು. ಅನೇಕ ಸಮಾಜಮುಖಿ ಕಾರ್ಯಗಳನ್ನು ಅವರು ಮಾಡಿದ್ದರು. ತಾಯಿ ರುದ್ರಮ್ಮ ಮತ್ತು ಪತಿ ಶ್ರೀಹರ್ಷ ಅವರ ಸ್ಮರಣಾರ್ಥ ಸಾಕಷ್ಟು ದೇಣಿಗೆಗಳನ್ನು ಸರೋಜಾದೇವಿ ಅವರು ನೀಡಿದ್ದರು.

ಇದನ್ನೂ ಓದಿ
‘ಅತ್ಯಂತ ದುಃಖವಾಗಿದೆ’: ಬಿ. ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ದರ್ಶನ್
ಸರೋಜಾದೇವಿ ಅವರೊಂದಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟ ನಟ ಜಗ್ಗೇಶ್
ಪುನೀತ್ ನನ್ನ ಮಗ ಆಗಿರಬೇಕಿತ್ತು ಎಂದುಕೊಂಡಿದ್ದ ಸರೋಜಾ ದೇವಿ
ತಾಯಿಗೆ ಕೊಟ್ಟ ಮಾತನ್ನು ಕೊನೆವರೆಗೂ ಉಳಿಸಿಕೊಂಡ ಸರೋಜಾ ದೇವಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸರೋಜಾದೇವಿ ಅವರ ತೋಟದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂತ್ಯಕ್ರಿಯೆ ನಡೆಯಲಿರುವ ಸ್ಥಳವನ್ನು ಸಿಬ್ಬಂದಿ ಸ್ವಚ್ಛ ಮಾಡುತ್ತಿದ್ದಾರೆ. ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲಿಯೇ ಸರೋಜಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಈ ವಯಸ್ಸಲ್ಲೂ ಎಂಥ ಚೆಲುವಿನ ಒಡತಿ ಸರೋಜಮ್ಮ! ಮಾಲಾಶ್ರೀ

ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಬಿ. ಸರೋಜಾದೇವಿ ಅವರು ಅಭಿನಯಿಸಿದ್ದರು. ಆ ಮೂಲಕ ಚಿತ್ರರಂಗಕ್ಕೆ ಅವರು ಅಪಾರ ಕೊಡುಗೆ ನೀಡಿದ್ದರು. ಅವರ ಅಗಲಿಕೆಗೆ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ, ನಟ ದರ್ಶನ್ ಸೇರಿದಂತೆ ಹಲವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಅನೇಕರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.