
ಹಿರಿಯ ನಟಿ ಬಿ. ಸರೋಜಾ ದೇವಿ (B Saroja Devi) ಅವರು 87ನೇ ವಯಸ್ಸಿಗೆ ನಿಧನರಾದರು. ಅಭಿನಯ ಸರಸ್ವತಿ ಆಗಿ ಅವರು ಗುರುತಿಸಿಕೊಂಡಿದ್ದರು. ಆರೂವರೆ ದಶಕಗಳ ವೃತ್ತಿ ಜೀವನದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ಅವರು ಇಷ್ಟೆಲ್ಲ ಸಿನಿಮಾ ಮಾಡಿದರೂ ಎಂದಿಗೂ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಕ್ಕೆ ಕಾರಣ ಅವರು ತಾಯಿಗೆ ಕೊಟ್ಟ ಮಾತು. ಅದನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದರು.
ಸರೋಜಾ ದೇವಿ ಅವರು 17ನೇ ವಯಸ್ಸಿಗೆ ಮೊದಲ ಮಹಿಳಾ ಸೂಪರ್ಸ್ಟಾರ್ ಆದರು. ಮೊದಲ ಚಿತ್ರವೇ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಅವರು ‘ಪಾಂಡುರಂಗ ಮಹಾತ್ಯಂ’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟರು. ‘ನಾಡೋಡಿ ಮನ್ನನ್ ’ ಚಿತ್ರದ ಮೂಲಕ ತಮಿಳಿನಲ್ಲಿ ಬೇಡಿಕೆಯ ನಟಿಯಾದರು. ಅವರು 60,70 ಹಾಗೂ 80ರ ದಶಕದಲ್ಲಿ ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಅಗ್ರ ಸ್ಥಾನ ಪಡೆದರು. ಸರೋಜಾ ದೇವಿ ಅವರಿಗೆ 1969ರಲ್ಲಿ ಪದ್ಮ ಶ್ರೀ, 1992ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ ಕಡೆಯಿಂದ ಅವರಿಗೆ ಗೌರವ ಡಾಕ್ಟರೇಟ್ ಮತ್ತು ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
ಇದನ್ನೂ ಓದಿ: ನಟಿ ಬಿ. ಸರೋಜಾದೇವಿ ನಿಧನ; ಆರೂವರೆ ದಶಕ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ತಾರೆ
ಸರೋಜಾದೇವಿ ಬೆಂಗಳೂರಿನವರು. ಅವರ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ಗೃಹಿಣಿ ಆಗಿದ್ದರು. ನೃತ್ಯ ಕಲಿಯಲು ಹಾಗೂ ನಟನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಭೈರಪ್ಪ ಅವರು ಮಗಳಿಗೆ ಪ್ರೋತ್ಸಾಹಿಸಿದರು. ಅವರು ನಟನೆಗೆ ಬರಲು ಸಿದ್ಧವಾದಾಗ ತಾಯಿ ಮಗಳಿಗೆ ಕಟ್ಟುನಿಟ್ಟಾದ ಡ್ರೆಸ್ ಕೋಡ್ ನೀಡಿದರು. ಈಜುಡುಗೆ ಹಾಗೂ ತೋಳಿಲ್ಲದ ಬ್ಲೌಸ್ನ ಯಾವಾಗಲೂ ಹಾಕಬಾರದು ಎಂದು ತಾಯಿ ಸ್ಟ್ರಿಕ್ಟ್ ಆಗಿ ಹೇಳಿದ್ದರು. ಇದನ್ನು ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಪರಿಪಾಲಿಸಿಕೊಂಡು ಬಂದರು.
13ನೇ ವಯಸ್ಸಿನಲ್ಲಿ ಸಮಾರಂಭ ಒಂದರಲ್ಲಿ ಸರೋಜಾ ದೇವಿ ಹಾಡುತ್ತಿದ್ದರು. ಇದನ್ನು ಕಂಡು ಬಿ.ಆರ್. ಕೃಷ್ಣಮೂರ್ತಿಯವರು ಅವರಿಗೆ ಸಿನಿಮಾ ಆಫರ್ ನೀಡಿದರು. ಆದರೆ, ಇದನ್ನು ಅವರು ನಿರಾಕರಿಸಿದ್ದರು. ನಂತರ 17ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟರು.
ಕನ್ನಡದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಸರೋಜಾ ದೇವಿ ಕಾಂಬಿನೇಷನ್ನ ಜನರು ಸಾಕಷ್ಟು ಇಷ್ಟಪಟ್ಟರು. ಕಲ್ಯಾಣ್‌ಕುಮಾರ್, ಉದಯಕುಮಾರ್ ಜೊತೆಗೂ ಅವರು ನಟಿಸಿದರು. ತೆಲುಗಿನಲ್ಲಿ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಜೊತೆ ಮಿಂಚಿದರು. ತಮಿಳಿನಲ್ಲಿ ಜೆಮಿನಿ ಗಣೇಶನ್ ಜೊತೆ ಬಣ್ಣ ಹಚ್ಚಿದರು. ಶಿವಾಜಿ ಗಣೇಶನ್ ಜೊತೆ 22 ಸಿನಿಮಾ. ಎಂಜಿಆರ್ ಜೊತೆ 26 ಚಿತ್ರಗಳಲ್ಲಿ ಅವರು ಮಿಂಚಿದರು. ಹಿಂದಿಯಲ್ಲಿ ದಿಲೀಪ್ ಕುಮಾರ್, ಸುನಿಲ್‌ದತ್ ಜೊತೆ ನಟಿಸಿದರು. ಚತುರ್ಭಾಷಾ ನಟಿ ಎಂಬ ಮೊದಲ ಹೆಗ್ಗಳಿಕೆ ಸಿಕ್ಕಿದ್ದು ಇವರಿಗೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.