ಹಿರಿಯ ನಟ ಕೋಟ ಶ್ರೀನಿವಾಸ ರಾವ್ ನಿಧನ; ಅನಾರೋಗ್ಯದಿಂದ ವಿಧಿವಶ
ತೆಲುಗು ಚಿತ್ರರಂಗದ ಹಿರಿಯ ನಟ ಕೋಟ ಶ್ರೀನಿವಾಸ ಅವರು ಭಾನುವಾರ ಮುಂಜಾನೆ ನಿಧನರಾದರು. 750ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿದ್ದ ಅವರಿಗೆ 83 ವರ್ಷ ವಯಸ್ಸಾಗಿತ್ತು. ರಾಜಕೀಯದಲ್ಲೂ ಅವರು ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟ (Telugu Actor) ಕೋಟ ಶ್ರೀನಿವಾಸ ರಾವ್ (83) ಅವರು ಭಾನುವಾರ (ಜುಲೈ 13) ಬೆಳಗಿನ ಜಾವ ನಿಧನರಾದರು. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ನಲ್ಲಿ ಇರುವ ತಮ್ಮ ನಿವಾಸದಲ್ಲಿ ಕೊನೆಯುಸಿರು ಎಳೆದರು. ವೃದ್ಧಾಪ್ಯದಿಂದಾಗಿ ನಡೆಯಲು ಸಾಧ್ಯವಾಗದಿದ್ದರೂ, ಅವರು ಎರಡು ವರ್ಷಗಳ ಹಿಂದಿನವರೆಗೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದರು. ಅವರ ಕೊನೆಯ ಚಿತ್ರ 2023ರಲ್ಲಿ ಬಿಡುಗಡೆಯಾದ ‘ಸುವರ್ಣ ಸುಂದರಿ’. ಕೋಟ ಶ್ರೀನಿವಾಸ ರಾವ್ (Kota Srinivasa Rao) ಅವರು 750ಕ್ಕೂ ಅಧಿಕ ಸಿನಮಾಗಳಲ್ಲಿ ನಟಿಸಿದ್ದರು.
ಕಳೆದ 4 ದಶಕಗಳ ತಮ್ಮ ವೃತ್ತಿಜೀವನದಲ್ಲಿ ಕೋಟ ಶ್ರೀನಿವಾಸ ರಾವ್ ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅವರ ನಿಧನದಿಂದ ಚಿತ್ರೋದ್ಯಮ ಶೋಕದಲ್ಲಿದೆ. ಶ್ರೀನಿವಾಸ ರಾವ್ ಅವರು 1942ರ ಜುಲೈ 10ರಂದು ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದರು. ಅವರ ತಂದೆ ಡಾ. ಸೀತಾರಾಮಾಂಜನೇಯುಲು. ಬಾಲ್ಯದಲ್ಲಿ ತಂದೆಯಂತೆ ವೈದ್ಯನಾಗಬೇಕೆಂದು ಬಯಸಿದ್ದರೂ, ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಕಾಣಿಸಿಕೊಂಡ ನಂತರ ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡು ನಟನೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು.
ತೆಲುಗು ಮಾತ್ರವಲ್ಲದೇ ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಕೂಡ ಕೋಟ ಶ್ರೀನಿವಾಸ ರಾವ್ ಅವರು ನಟಿಸಿದ್ದರು. ವಿಲನ್ ಪಾತ್ರ, ಹಾಸ್ಯ ಪಾತ್ರ ಸೇರಿದಂತೆ ಹಲವು ಬಗೆಯಲ್ಲಿ ಅವರು ಜನರನ್ನು ರಂಜಿಸಿದ್ದರು. ಪದವಿ ಶಿಕ್ಷಣ ಪಡೆದ ನಂತರ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಸಿಕ್ಕಿತು.
ಕೋಟ ಶ್ರೀನಿವಾಸ ರಾವ್ ಅವರ ಪತ್ನಿ ರುಕ್ಮಿಣಿ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನಿದ್ದಾರೆ. ಕೋಟ ಶ್ರೀನಿವಾಸ್ ಅವರ ಮಗ ಕೋಟ ವೆಂಕಟ ಆಂಜನೇಯ ಪ್ರಸಾದ್ ಅವರು ಚಿತ್ರರಂಗಕ್ಕೆ ಪ್ರವೇಶಿಸುವ ಹಂತದಲ್ಲಿದ್ದಾಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಮಗನ ಅಕಾಲಿಕ ಮರಣದಿಂದ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಶ್ರೀನಿವಾಸ ರಾವ್ ಅವರ ಕಿರಿಯ ಸಹೋದರ ಶಂಕರ್ ರಾವ್ ಕೂಡ ಒಬ್ಬ ನಟ.
ಇದನ್ನೂ ಓದಿ: ಉಪೇಂದ್ರ ಚಿತ್ರದಲ್ಲಿ ವಿಲನ್ ಆಗಿದ್ದ ಜನಪ್ರಿಯ ನಟ ಮುಕುಲ್ ದೇವ್ ನಿಧನ
ಕೋಟ ಶ್ರೀನಿವಾಸ್ ರಾವ್ ಅವರು ಕೇವಲ ನಟರಲ್ಲ. ರಾಜಕೀಯಕ್ಕೂ ಪ್ರವೇಶಿಸಿ ಯಶಸ್ಸು ಕಂಡಿದ್ದರು. 1999ರಿಂದ 2004ರವರೆಗೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದ ಲೇಡಿ ಕಮಿಷನರ್, ರಕ್ತ ಕಣ್ಣೀರು, ಲವ್, ನಮ್ಮ ಬಸವ, ನಮ್ಮಣ್ಣ, ಶ್ರೀಮತಿ, ಕಬ್ಜಾ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




