ಬರಗೂರು ರಾಮಚಂದ್ರಪ್ಪ (Baraguru Ramachandrappa) ನಿರ್ದೇಶಿಸಿರುವ ‘ಚಿಣ್ಣರ ಚಂದ್ರ’ ಸಿನಿಮಾವು ದುಬೈ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಸಿನಿಮಾದಲ್ಲಿ ನಟಿಸಿರುವ ಬರಗೂರು ರಾಮಚಂದ್ರಪ್ಪ ಅವರ ಮೊಮ್ಮಗ ಆಕಾಂಕ್ಷ್ ಬರಗೂರ್‌ಗೆ ಉತ್ತಮ ಬಾಲನಟ ಪ್ರಶಸ್ತಿಯೂ ದೊರಕಿದೆ. ಈ ಮುಂಚೆ ಆಕಾಂಕ್ಷ್ ಬರಗೂರ್, ಬಯಲಾಟದ ಭೀಮಣ್ಣ, ಭಾಗೀರಥಿ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಅಭಿನಯಿಸಿದ್ದರು.
‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಜಿ.ಎನ್. ಗೋವಿಂದರಾಜು (ರಾಜಶೇಖರ್) ನಿರ್ಮಾಣ ಮಾಡಿದ್ದರು. ‘ಚಿಣ್ಣರ ಚಂದ್ರ’ ಚಿತ್ರವು ಬರಗೂರರ ‘ಅಡಗೊಲಜ್ಜಿ’ ಎಂಬ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪ ಅವರೇ ಸಿನಿಮಾಕ್ಕೆ ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವಕ್ಕೆ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಚಿಣ್ಣರ ಚಂದ್ರ’ ಸಿನಿಮಾ ಆಯ್ಕೆ
‘ಚಿಣ್ಣರ ಚಂದ್ರ’ ಸಿನಿಮಾವು ಅಲಹಾಬಾದ್ ಮತ್ತು ಮೇಲ್ಬೋರ್ನ್ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೂ ಆಯ್ಕೆಯಾಗಿತ್ತು. ‘ಚಿಣ್ಣರ ಚಂದ್ರ’ ಸಿನಿಮಾ ಶಿಕ್ಷಣದ ಮಹತ್ವವನ್ನು ಸಾದರಪಡಿಸುವ ಚಿತ್ರವಾಗಿದ್ದು, ಮಕ್ಕಳ ಮೂಲಕವೇ ಈ ಆಶಯವನ್ನು ಅಭಿವ್ಯಕ್ತಿಸಲಾಗಿದೆ. ಜೊತೆಗೆ ಸಮಾಜದಲ್ಲಿ ಸಮಾನತೆ, ಸೌಹಾರ್ದತೆಗಳು ನೆಲೆಸಬೇಕೆಂಬ ಸಂದೇಶವನ್ನು ನೀಡುತ್ತದೆ. ಅಡಗೊಲಜ್ಜಿಯ ಮೂಲಕ ಜನಪದ ಕತೆಗಳನ್ನು ಕೇಳುವ ಮಕ್ಕಳು ಸದಭಿರುಚಿ ಸಿನಿಮಾಗಳ ಅಗತ್ಯಕ್ಕಾಗಿ ಹಕ್ಕೊತ್ತಾಯ ಮಂಡಿಸುವ ವಿಶೇಷ ಪ್ರಸಂಗವನ್ನೂ ಈ ಚಿತ್ರವು ಒಳಗೊಂಡಿದೆ.
ತಾರಾಗಣದಲ್ಲಿ ಆಕಾಂಕ್ಷ್ ಬರಗೂರ್, ನಿಕ್ಷೇಪ್, ಷಡ್ಜ, ಈಶಾನ್, ಅಭಿನವ್‌ನಾಗ್, ಸುಂದರರಾಜು, ರೇಖಾ, ವತ್ಸಾಲಾ ಮೋಹನ್, ರಾಧಾ ರಾಮಚಂದ್ರ, ಸುಂದರರಾಜ ಅರಸು, ರಾಘವ್, ರಾಜಪ್ಪ ದಳವಾಯಿ, ಹಂಸ, ವೆಂಕಟರಾಜು, ಮೈಸೂರು ಮಂಜುಳ ಮುಂತಾದವರು ಇದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ , ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ನಟ್ರಾಜ ಶಿವು ಮತ್ತು ಪ್ರವೀಣ್ ಅವರ ಸಹ ನಿರ್ದೇಶನ “ಚಿಣ್ಣರ ಚಂದ್ರ” ಚಿತ್ರಕ್ಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ