‘ಉಗ್ರಂ’ ಚಿತ್ರಕ್ಕೆ ಮೊದಲು ಇದ್ದ ಶೀರ್ಷಿಕೆ ‘ನಂದೇ’; ಮುಂದಿದೆ ದೊಡ್ಡ ಪ್ಲ್ಯಾನ್​

ಜನರು ಮೆಚ್ಚಿದ ‘ಉಗ್ರಂ’ ಸಿನಿಮಾದ ತೆರೆಹಿಂದೆ ಇರುವ ಕಥೆ ಹಲವು. ಅವುಗಳ ಬಗ್ಗೆ ನಿರ್ದೇಶಕ ಪ್ರಶಾಂತ್​ ನೀಲ್​ ಮತ್ತು ನಟ ಶ್ರೀಮುರಳಿ ಅವರು ಮಾತನಾಡಿದ್ದಾರೆ. ಉಗ್ರಂ ಬಿಡುಗಡೆಯಾಗಿ ಒಂದು ದಶಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿರೂಪಕಿ ಅನುಶ್ರೀ ನಡೆಸಿದ ಸಂದರ್ಶನದಲ್ಲಿ ಅವರು ಟೈಟಲ್​ ಬಗ್ಗೆ ಒಂದು ಇಂಟರೆಸ್ಟಿಂಗ್​ ಮಾಹಿತಿ ಹಂಚಿಕೊಂಡಿದ್ದಾರೆ.

‘ಉಗ್ರಂ’ ಚಿತ್ರಕ್ಕೆ ಮೊದಲು ಇದ್ದ ಶೀರ್ಷಿಕೆ ‘ನಂದೇ’; ಮುಂದಿದೆ ದೊಡ್ಡ ಪ್ಲ್ಯಾನ್​
ಶ್ರೀಮುರಳಿ, ಪ್ರಶಾಂತ್​ ನೀಲ್​
Follow us
ಮದನ್​ ಕುಮಾರ್​
|

Updated on: Feb 27, 2024 | 4:45 PM

ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಉಗ್ರಂ’ (Ugramm Movie) ತೆರೆಕಂಡು ಈಗ 10 ವರ್ಷಗಳು ಪೂರ್ಣಗೊಂಡಿವೆ. 2014ರ ಫೆಬ್ರವರಿ 21ರಂದು ಆ ಸಿನಿಮಾ ಬಿಡುಗಡೆ ಆಗಿತ್ತು. ಈ ಹತ್ತು ವರ್ಷಗಳಲ್ಲಿ ಸಾಕಷ್ಟು ವಿಷಯಗಳು ಬದಲಾಗಿವೆ. ಪ್ರಶಾಂತ್​ ನೀಲ್ (Prashanth Neel)​ ಅವರು ಪ್ಯಾನ್​ ಇಂಡಿಯಾ ಡೈರೆಕ್ಟರ್ ಆಗಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’, ‘ಸಲಾರ್​’ ರೀತಿಯ ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅದೆಲ್ಲವೂ ಸಾಧ್ಯವಾಗಿದ್ದು ‘ಉಗ್ರಂ’ ಸಿನಿಮಾದ ಯಶಸ್ಸಿನಿಂದ. ಆ ಸಿನಿಮಾ 10 ವರ್ಷ ಪೂರೈಸಿದ್ದಕ್ಕೆ ನಿರೂಪಕಿ ಅನುಶ್ರೀ ಅವರು ವಿಶೇಷ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಶ್ರೀಮುರಳಿ (Sri Murali) ಮತ್ತು ಪ್ರಶಾಂತ್​ ನೀಲ್​ ಅವರು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉಗ್ರಂ ಚಿತ್ರಕ್ಕೆ ಮೊದಲು ಇದ್ದ ಶೀರ್ಷಿಕೆಯೇ ಬೇರೆ ಎಂದು ಅವರು ಹೇಳಿದ್ದಾರೆ.

ಅಗಸ್ತ್ಯ ಮತ್ತು ಬಾಲಾ ನಡುವಿನ ಕಹಾನಿಗೆ ‘ನಂದೇ’ ಎಂದು ಪ್ರಶಾಂತ್​ ನೀಲ್​ ಅವರು ಶೀರ್ಷಿಕೆ ಇಟ್ಟಿದ್ದರು. ನಂತರ ಅದು ‘ಉಗ್ರಂ’ ಎಂದು ಬದಲಾಯಿತು. ಆದರೆ ಆ ಬದಲಾವಣೆ ಆಗಿದ್ದು ಅಷ್ಟು ಸುಲಭದಲ್ಲಿ ಅಲ್ಲ. ಶ್ರೀಮುರಳಿ ಅವರಿಗೆ ‘ನಂದೇ’ ಎಂಬ ಟೈಟಲ್​ ಇಷ್ಟ ಇರಲಿಲ್ಲ. ಹಾಗಾಗಿ ಶೀರ್ಷಿಕೆಯ ಬದಲಾವಣೆಗೆ ನಿರ್ದೇಶಕರ ಮನವೊಲಿಸಲು ಅವರು ಸಾಕಷ್ಟು ಸಮಯ ತೆಗೆದುಕೊಂಡಿದ್ದರು.

‘ಆ ಟೈಟಲ್​ ಬೇಡ ಅಂತ ಅವರ ಮನವೊಲಿಸಲು ನನಗೆ ನಾಲ್ಕು ವರ್ಷ ಹಿಡಿಯಿತು. ಅವರು ಒಪ್ಪುತ್ತಲೇ ಇರಲಿಲ್ಲ. ನಾನು ಒಂದು ಸುದ್ದಿಗೋಷ್ಠಿಯಲ್ಲಿ ಇದ್ದಾಗ, ಮುಂದಿನ ಸಿನಿಮಾ ಯಾವುದು ಅಂತ ಪ್ರಶ್ನೆ ಕೇಳಿದರು. ನಂದೇ ಅಂತ ನಾನು ಹೇಳಿದೆ. ‘ನಿಮ್ಮದೇ ಅಂತ ಗೊತ್ತು, ಆದರೆ ಸಿನಿಮಾ ಯಾವುದು’ ಅಂತ ಜನರು ಕೇಳಿದರು. ಜನರು ಹೀಗೆಲ್ಲ ಕೇಳ್ತಿದ್ದಾರೆ ನೋಡಿ ಎಂದು ನಾನು ಪ್ರಶಾಂತ್​ ನೀಲ್ ಅವರ ಬಳಿ ಬಂದು ಗಂಭೀರವಾಗಿ ಹೇಳಿದೆ’ ಎಂದು ಆ ಘಟನೆಯನ್ನು ಶ್ರೀಮುರಳಿ ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಸಲಾರ್​’ ಚಿತ್ರಕ್ಕೆ ಪ್ರಭಾಸ್​, ಪ್ರಶಾಂತ್​ ನೀಲ್​, ಶ್ರುತಿ ಹಾಸನ್​ ಪಡೆದ ಸಂಭಾವನೆ ಎಷ್ಟು?

ಪ್ರಶಾಂತ್​ ನೀಲ್​ ಅವರು ಅದೇ ಟೈಟಲ್​ ಬೇಕು ಅಂತ ಹಠ ಹಿಡಿದು ಕೂರಲು ಕಾರಣ ಕೂಡ ಇತ್ತು. ‘ಆ ಶೀರ್ಷಿಕೆ ಮೇಲೆ ನಾಲ್ಕು-ಐದು ಸೀನ್​ಗಳನ್ನು ಮಾಡಿದ್ದೆವು. ಯಾವ ಥರ ಸೀನ್​ ಅನ್ನೋದು ಈಗ ಬೇಡ ಬಿಡಿ’ ಎಂದು ಪ್ರಶಾಂತ್​ ನೀಲ್​ ಹೇಳಿದ್ದಾರೆ. ‘ನಂದೇ’ ಎಂಬ ಟೈಟಲ್ ನಂತರ ‘ಉಗ್ರಂ’ ಅಂತ ಬದಲಾಗಿದ್ದು ಹೇಗೆ ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ‘ಸಿನಿಮಾ ರೆಡಿ ಆಯಿತು. ಅದರ ಫಿಲಾಸಫಿ ಬದಲಾಯಿಸಬೇಕು ಎಂಬ ಆಲೋಚನೆ ಬಂತು. ಹೀರೋ ತಕ್ಷಣಕ್ಕೆ ಹೊಡೆಯಲ್ಲ. ಅವನು ತಾಳ್ಮೆಯಿಂದ ಕಾಯುತ್ತಾನೆ. ಆ ಫಿಲಾಸಫಿಯನ್ನು ತೋರಿಸಲು ನನಗೆ ಉಗ್ರಂ ಸರಿ ಎನಿಸಿತು. ನಮ್ಮ ತಾಯಿನೋ ಯಾರೋ ಶ್ಲೋಕ ಓದುವಾಗ ಆ ಟೈಟಲ್​ ಹೊಳೆಯಿತು’ ಎಂದು ಪ್ರಶಾಂತ್​ ನೀಲ್​ ಹೇಳಿದ್ದಾರೆ.

ಅನುಶ್ರೀ ನಡೆಸಿದ ವಿಶೇಷ ಸಂದರ್ಶನ:

ಮುಂದಿದೆ ಬೇರೆ ಪ್ಲ್ಯಾನ್​:

ಕೊನೆಗೂ ‘ನಂದೇ’ ಎಂಬ ಶೀರ್ಷಿಕೆಯಲ್ಲಿ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಹಾಗಂತ ಆ ಟೈಟಲ್​ ಅನ್ನು ಶ್ರೀಮುರಳಿ ಬಿಟ್ಟುಕೊಟ್ಟಿಲ್ಲ. ಅದರ ಮೇಲೆ ಅವರು ದೊಡ್ಡ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ‘ಈಗ ‘ನಂದೇ’ ಎನ್ನುವುದು ನನಗೆ ಸ್ಯೂಟ್​ ಆಗುತ್ತದೆ. ಈಗ ನಾನು ಆ ಶೀರ್ಷಿಕೆ ಇಟ್ಟುಕೊಳ್ಳಬಹುದು. ಈಗ ಬೇಕಾದರೆ ಜನರು ಅದನ್ನು ಮೆಚ್ಚುತ್ತಾರೆ. ಆದರೆ ಆ ದಿನಗಳಲ್ಲಿ ನಮ್ಮನ್ನು ರೇಗಿಸಿದ್ದರು. ಆ ಟೈಟಲ್​ ಅನ್ನು ನಾವು ಎತ್ತಿಟ್ಟುಕೊಂಡಿದ್ದೇವೆ. ಸರಿಯಾದ ಸಮಯದಲ್ಲಿ ಅದೇ ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡುತ್ತೇವೆ’ ಎಂದು ಶ್ರೀಮುರಳಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.