ಸಿನಿಮಾ ನಿರ್ಮಾಣಕ್ಕೆ ಇಳಿದ ‘ಗಟ್ಟಿಮೇಳ’ ರಕ್ಷ್; ‘ಬರ್ಮ’ ಚಿತ್ರದ ಮುಹೂರ್ತಕ್ಕೆ ಸೆಲೆಬ್ರಿಟಿಗಳ ದಂಡು

|

Updated on: Sep 26, 2023 | 11:23 AM

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ‘ಬರ್ಮ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜ್​ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಮೊದಲ ದೃಶ್ಯಕ್ಕೆ ಖ್ಯಾತ ನಟ ಧ್ರುವ ಸರ್ಜಾ ಅವರು ಆ್ಯಕ್ಷನ್ ಕಟ್ ಹೇಳಿದರು.

ಸಿನಿಮಾ ನಿರ್ಮಾಣಕ್ಕೆ ಇಳಿದ ‘ಗಟ್ಟಿಮೇಳ’ ರಕ್ಷ್; ‘ಬರ್ಮ’ ಚಿತ್ರದ ಮುಹೂರ್ತಕ್ಕೆ ಸೆಲೆಬ್ರಿಟಿಗಳ ದಂಡು
ಬರ್ಮ ಮುಹೂರ್ತ
Follow us on

‘ಬಹದ್ದೂರ್’, ‘ಭರ್ಜರಿ’ ಮೊದಲಾದ ಯಶಸ್ವಿ ಸಿನಿಮಾಗಳನ್ನು ನೀಡಿದ ಖ್ಯಾತಿ ಚೇತನ್ ಕುಮಾರ್ ಅವರಿಗೆ ಇದೆ. ಈಗ ಅವರು ‘ಬರ್ಮ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಗಟ್ಟಿಮೇಳ’ ಧಾರಾವಾಹಿ  (Gattimela Serial) ಖ್ಯಾತಿಯ ರಕ್ಷ್ ರಾಮ್ ಹೀರೋ. ಈ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದಿದೆ. ಹಲವು ಸೆಲೆಬ್ರಿಟಿಗಳು ಬಂದು ಚಿತ್ರತಂಡಕ್ಕೆ ಶುಭಕೋರಿದರು. ರಕ್ಷ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ‘ಬರ್ಮ’ ಸಿನಿಮಾದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಾಘವೇಂದ್ರ ರಾಜ್​ಕುಮಾರ್ ಅವರು ಕ್ಯಾಮೆರಾಗೆ ಚಾಲನೆ ನೀಡಿದರು. ಮೊದಲ ದೃಶ್ಯಕ್ಕೆ ಖ್ಯಾತ ನಟ ಧ್ರುವ ಸರ್ಜಾ ಅವರು ಆ್ಯಕ್ಷನ್ ಕಟ್ ಹೇಳಿದರು. ಇನ್ನು, ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ನಟ ಧೀರನ್ ರಾಮ್​ಕುಮಾರ್ ಸೇರಿ ಅನೇಕರು ಈ ಮುಹೂರ್ತ ಸಮಾರಂಭದಲ್ಲಿ ಸಾಕ್ಷಿ ಆದರು. ಎಲ್ಲರೂ ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

‘ಬರ್ಮ’ ಚೇತನ್ ಕುಮಾರ್ ನಿರ್ದೇಶನದ ಐದನೇ ಸಿನಿಮಾ. ‘ಬರ್ಮ ಅನ್ನೋದಕ್ಕೆ ಹಲವು ಅರ್ಥ ಇದೆ. ಬ್ರಹ್ಮ ವಾಸಿಸುವ ಜಾಗಕ್ಕೆ ಬರ್ಮ ಎನ್ನುತ್ತಾರೆ. ಇದು ದೇಶದ ಹೆಸರು ಕೂಡ ಹೌದು. ಕಥೆಗೆ ಪೂರಕ ಆಗಿರುವುದರಿಂದ ಈ ಹೆಸರು ಇಟ್ಟಿದ್ದೇವೆ. ರಕ್ಷ್ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದಾರೆ. ಅವರೇ ಈ  ಚಿತ್ರದ ನಿರ್ಮಾಪಕರು. ಕನ್ನಡ ಸೇರಿ ಐದು ಭಾಷೆಗಳಲ್ಲಿ ಸಿನಿಮಾ ಮೂಡಿ ಬರಲಿದೆ’ ಎಂದು ಚೇತನ್ ಕುಮಾರ್ ಮಾಹಿತಿ ನೀಡಿದರು.

ರಕ್ಷ್ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಪುಟ್ಟಗೌರಿ ಮದುವೆಯಿಂದ ಹಿಡಿದು ಗಟ್ಟಿಮೇಳ  ಧಾರಾವಾಹಿಯವರೆಗೆ  ಸುಮಾರು ಮೂರು ಸಾವಿರ ಎಪಿಸೋಡ್​ಗಳಲ್ಲಿ ಅಭಿನಯಿಸಿದ್ದೇನೆ. ಕನ್ನಡಿಗರು ತೋರಿಸಿದ ಪ್ರೀತಿಗೆ ನಾನು ಚಿರಋಣಿ’ ಎಂದರು ರಕ್ಷ್. ಬಹಳ ಹಿಂದೆಯೇ ಚೇತನ್ ಬಳಿ ಸಿನಿಮಾ ಮಾಡುವಂತೆ ರಕ್ಷ್ ಕೇಳಿದ್ದರು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ.

ಇದನ್ನೂ ಓದಿ: ಹೊಸ ಸಿನಿಮಾ ಘೋಷಿಸಿದ ‘ಗಟ್ಟಿಮೇಳ’ ರಕ್ಷ್; ‘ಜೆಮ್ಸ್’ ಖ್ಯಾತಿಯ ಚೇತನ್ ನಿರ್ದೇಶನದಲ್ಲಿ ‘ಬರ್ಮ’  

ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಆಡಿಯೋ ಹಕ್ಕನ್ನು ಡಿ ಬಿಟ್ಸ್ ಸಂಸ್ಥೆ ಪಡೆದುಕೊಂಡಿದೆ.  ಸಂಕೇತ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಮಹೇಶ್ ರೆಡ್ಡಿ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಸಿನಿಮಾಗೆ ಇದೆ. ಅಕ್ಟೋಬರ್ 3ರಿಂದ ಮಂಗಳೂರಿನಲ್ಲಿ ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.  ಪ್ರಮುಖ ಪಾತ್ರದಲ್ಲಿ ಆದಿತ್ಯ ಮೆನನ್ ನಟಿಸುತ್ತಿದ್ದಾರೆ. ಉಳಿದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ‘ಗಟ್ಟಿಮೇಳ’ ಧಾರಾವಾಹಿ ನಿರ್ಮಾಣ ಮಾಡಿರುವ ‘ಶ್ರೀ ಸಾಯಿ ಆಂಜನೇಯ ಕಂಪನಿ’ ಮೂಲಕ ಈ ಚಿತ್ರವನ್ನು ರಕ್ಷ್ ಹಾಗೂ ಅವರ ಪತ್ನಿ ಅನುಷಾ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:22 am, Tue, 26 September 23