ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ಹೆಸರು; ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಹೇಳೋದೇನು?

| Updated By: ಮದನ್​ ಕುಮಾರ್​

Updated on: Nov 05, 2021 | 11:15 AM

Puneeth Rajkumar: ಬಳ್ಳಾರಿ ರಸ್ತೆ, ವೆಸ್ಟ್​ ಆಫ್​ ಕಾರ್ಡ್​ ರೋಡ್​ ಸೇರಿದಂತೆ ಬೆಂಗಳೂರಿನ ಕೆಲವು ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ರಾಜ್​ಕುಮಾರ್​ ಅವರ ಹೆಸರು ಇಡಬೇಕು ಎಂದು ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಮಾತನಾಡಿದ್ದಾರೆ.

ರಸ್ತೆ, ಪಾರ್ಕ್​, ಮೈದಾನಕ್ಕೆ ಪುನೀತ್​ ಹೆಸರು; ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಹೇಳೋದೇನು?
ಪುನೀತ್​ ರಾಜ್​ಕುಮಾರ್
Follow us on

ನಟ ಪುನೀತ್​ ರಾಜ್​ಕುಮಾರ್​ ಅವರ ಮೇಲೆ ಜನರು ಇಟ್ಟಂತಹ ಅಭಿಮಾನ ಅಪಾರ. ಹೃದಯಾಘಾತದಿಂದ ಅವರು ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಅಪ್ಪು ಹೆಸರನ್ನು ಅಮರವಾಗಿಸಲು ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದಾರೆ. ಹಲವು ರಸ್ತೆ, ವೃತ್ತ, ಪಾರ್ಕ್​, ಮೈದಾನಕ್ಕೆ ಪುನೀತ್​ ರಾಜ್​ಕುಮಾರ್​ ಹೆಸರು ಇಡಬೇಕು ಎಂದು ಮನವಿ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್​ ಗುಪ್ತಾ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ.

‘ನಮಗೆ ನೇರವಾಗಿ ಯಾವುದೇ ಮನವಿ ಬಂದಿಲ್ಲ. ಆದರೆ ಮಾಧ್ಯಮಗಳಿಂದ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಚರ್ಚೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಿಮವಾಗಿ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಜನರ ಭಾವನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರದ ಜೊತೆ ನಾವು ಚರ್ಚಿಸುತ್ತೇವೆ. ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ನಾನು ಭಾವಿಸುತ್ತೇನೆ’ ಎಂದು ಗೌರವ್​ ಗುಪ್ತಾ ಹೇಳಿದ್ದಾರೆ.

ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿಯ ಕೆಲಸ ಆಗುತ್ತಿದೆ. ಶಿವಮೊಗ್ಗದ ಒಂದು ರಸ್ತೆಗೆ ‘ಪುನೀತ್​ ರಾಜ್​ಕುಮಾರ್​ ರಸ್ತೆ’ ಎಂದು ನಾಮಕರಣ ಮಾಡಲಾಗಿದೆ. ಸಾಗರ ತಾಲೂಕಿನ ಶಿರವಾಳ ಗ್ರಾಮದಲ್ಲಿ ಒಂದು ವೃತ್ತಕ್ಕೆ ‘ಪುನೀತ್​ ರಾಜ್​ಕುಮಾರ್​ ವೃತ್ತ’ ಎಂದು ಹೆಸರು ಇಡಲಾಗಿದೆ. ಆ ಫೋಟೋಗಳು ಕೂಡ ವೈರಲ್​ ಆಗಿವೆ. ಜನರ ಈ ಪ್ರೀತಿಗೆ ಡಾ. ರಾಜ್​ ಕುಟುಂಬದ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.

ರಸ್ತೆ, ಪಾರ್ಕ್​, ಮೈದಾನ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್​ ರಾಜ್​ಕುಮಾರ್​ ಅವರ ಹೆಸರು ಇಡಬೇಕು ಎಂದು ಅಭಿಮಾನಿಗಳು ಅಭಿಯಾನ ಮಾಡುತ್ತಿದ್ದಾರೆ. ‘ಅಂಥ ಅಭಿಯಾನಕ್ಕೆ ನಾವೆಲ್ಲ ಬೆಂಬಲ ನೀಡೋಣ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಪುನೀತ್​ ರಾಜ್​ಕುಮಾರ್​ ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:

‘ಪುನೀತ್ ಇಲ್ಲದಿದ್ದಾಗ ದೂರು ಏಕೆ? ದಯವಿಟ್ಟು ಬೇಡ’: ಶಿವರಾಜ್​ಕುಮಾರ್​ ಮನವಿ

Puneeth Rajkumar: ಪುನೀತ್​​ ಸಮಾಧಿ ಬಳಿ ಕುಸಿದು ಬಿದ್ದ ಗನ್​ ಮ್ಯಾನ್​ ಪುತ್ರಿ; ಮರೆಯಲಾಗುತ್ತಿಲ್ಲ ಅಪ್ಪು ಅಗಲಿಕೆಯ ನೋವು

Published On - 11:13 am, Fri, 5 November 21