ಸೋನು ನಿಗಂ ವಿಚಾರೆಣೆಗೆ ಮುಂಬೈಗೆ ಹೊರಟ ಬೆಂಗಳೂರು ಪೊಲೀಸರು

Sonu Nigam: ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಗಾಯಕ ಸೋನು ನಿಗಂಗೆ ಪೊಲೀಸರು ಈಗಾಗಲೇ ನೊಟೀಸ್ ನೀಡಿದ್ದಾರೆ. ಇದೀಗ ಬೆಂಗಳೂರು ಪೊಲೀಸರು ಮುಂಬೈಗೆ ತೆರಳಿದ್ದು, ಸೋನು ನಿಗಂ ಅನ್ನು ಭೇಟಿಯಾಗಿ ಖುದ್ದಾಗಿ ವಿಚಾರಣೆ ನಡೆಸಲಿದ್ದಾರೆ. ಸೋನು ನಿಗಂ ವಿಚಾರಣೆಯನ್ನು ರೆಕಾರ್ಡ್ ಮಾಡಿಕೊಂಡು ಬರಲಿದ್ದಾರೆ.

ಸೋನು ನಿಗಂ ವಿಚಾರೆಣೆಗೆ ಮುಂಬೈಗೆ ಹೊರಟ ಬೆಂಗಳೂರು ಪೊಲೀಸರು
Sonu Nigam

Updated on: May 17, 2025 | 4:57 PM

ಕನ್ನಡಿಗರ ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಗಾಯಕ ಸೋನು ನಿಗಂಗೆ (Sonu Nigam) ಈಗಾಲಗೇ ಕನ್ನಡಪರ ಸಂಘಟನೆಗಳು, ಕನ್ನಡಿಗರು ಛೀಮಾರಿ ಹಾಕಿದ್ದಾರೆ. ಚಿತ್ರರಂಗದ ಸಹ ಸೋನು ನಿಗಂಗೆ ಅಸಹಕಾರ ತೋರುವುದಾಗಿ ಹೇಳಿದೆ. ಘಟನೆಯನ್ನು ಬೆಂಗಳೂರು ಪೊಲೀಸರು ಸಹ ಗಂಭೀರವಾಗಿ ತೆಗೆದುಕೊಂಡಿದ್ದು, ಇತ್ತೀಚೆಗೆ ಬಂದ ಹೈಕೋರ್ಟ್ ಆದೇಶದ ಬಳಿಕ ಸ್ವತಃ ಮುಂಬೈಗೆ ಹೋಗಿ ಸೋನು ನಿಗಂ ಅವರ ವಿಚಾರಣೆ ಮಾಡಲು ಮುಂದಾಗಿದ್ದಾರೆ.

ಸೋನು ನಿಗಂ, ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಹೋಲಿಸಿದ ಘಟನೆಗೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರರು ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋನು ನಿಗಂ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಎಫ್​ಐಆರ್ ಸಹ ದಾಖಲಾಗಿದ್ದು, ಪೊಲೀಸರು ಸೋನು ನಿಗಂಗೆ ಇ-ಮೇಲ್ ಮೂಲಕ ನೊಟೀಸ್ ಕಳಿಸಿದ್ದರು. ನೊಟೀಸ್​ಗೆ ಉತ್ತರ ನೀಡದಿದ್ದ ಸೋನು ನಿಗಂ, ಹೈಕೋರ್ಟ್ ಮೊರೆ ಹೋಗಿ ತಮ್ಮ ಮೇಲೆ ದಾಖಲಾಗಿರುವ ಎಫ್​ಐಆರ್ ರದ್ದು ಮಾಡುವಂತೆ ಮನವಿ ಮಾಡಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು, ಸೋನು ನಿಗಂ ಇದ್ದಲ್ಲಿಗೇ ಹೋಗಿ ವಿಚಾರಣೆ ನಡೆಸಬೇಕು ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡಬೇಕು ಎಂದಿತ್ತು. ಅಲ್ಲದೆ ಬಲವಂತದ ಕ್ರಮವನ್ನು ಸೋನು ನಿಗಂ ವಿರುದ್ಧ ಕೈಗೊಳ್ಳುವಂತಿಲ್ಲ ಎಂದಿತ್ತು ನ್ಯಾಯಾಲಯ. ಅದರಂತೆ ಆವಲಹಳ್ಳಿ ಪೊಲೀಸರು ಇದೀಗ ವಿಡಿಯೋ ಕಾಲ್ ಬದಲಿಗೆ ನೇರವಾಗಿ ಮುಂಬೈಗೆ ಹೋಗಿ ಸೋನು ನಿಗಂ ಅವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ಸೋನು ನಿಗಂ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

ಆವಲಹಳ್ಳಿ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್​​ ಮತ್ತು ಇಬ್ಬರು ಸಿಬ್ಬಂದಿ ಮುಂಬೈಗೆ ಹೋಗುತ್ತಿದ್ದು, ಗಾಯಕ ಸೋನು‌ ನಿಗಮ್‌ ವಿಚಾರಣೆ ನಡೆಸಲಿದ್ದಾರೆ. ವಿಚಾರನೆ ವೇಳೆ ಹೇಳಿಕೆ ರೆಕಾರ್ಡ್ ಮಾಡಿಕೊಳ್ಳಲಿದ್ದಾರೆ. ವಿಡಿಯೋ ಹಾಗೂ ಬರವಣಿಗೆಯಲ್ಲಿ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ ಪೊಲೀಸರು. ಸೋನು ನಿಗಂ ವಿಚಾರಣೆಗೆ ತೆರಳುತ್ತಿರುವ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚನೆಗಳನ್ನು ನೀಡಿದ್ದು, ನ್ಯಾಯಾಲಯದ ಆದೇಶದ ಮಿತಿಯಲ್ಲಿ ಹಾಗೂ ನಿಯಮಗಳ ಮಿತಿಯಲ್ಲಿಯೇ ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ.

ಇತ್ತೀಚೆಗೆ ಸೋನು ನಿಗಂ ಬೆಂಗಳೂರಿನ ಕಾಲೇಜೊಂದರಲ್ಲಿ ಲೈವ್ ಶೋ ನೀಡುತ್ತಿದ್ದರು. ಈ ವೇಳೆ ಹಿಂದಿ ಹಾಡು ಹಾಡುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ. ಇದರಿಂದ ಸಿಟ್ಟಾದ ಸೋನು ನಿಗಂ, ‘ಕನ್ನಡ, ಕನ್ನಡ, ಇಂಥಹುದರಿಂದಲೇ ಪಹಲ್ಗಾಮ್ ಘಟನೆ ನಡೆದಿರುವುದು’ ಎಂದರು. ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ ಸೋನು ನಿಗಂ ವಿರುದ್ಧ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ದೂರು ನೀಡಿದರು. ಫಿಲಂ ಚೇಂಬರ್​ಗೂ ದೂರು ನೀಡಿದರು. ಘಟನೆ ಬಳಿಕ ಗಾಯಕ ಸೋನು ನಿಗಂ ಮೊದಲು ಸ್ಪಷ್ಟನೆ ನೀಡಿದರು. ಆಗಲೂ ಟೀಕೆ ಹೆಚ್ಚಾದ ಬಳಿಕ ಅಂತಿಮವಾಗಿ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ