AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋನು ನಿಗಂ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್

Sonu Nigam: ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಗಾಯಕ ಸೋನು ನಿಗಂ ವಿರುದ್ಧ ದೂರು ದಾಖಲಾಗಿದ್ದು, ಇದೀಗ ಸೋನು ನಿಗಂ ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆದಿದ್ದು, ಸೋನು ನಿಗಂ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪೊಲೀಸರಿಗೆ ಕೆಲ ಸೂಚನೆಗಳನ್ನು ನೀಡಿದೆ.

ಸೋನು ನಿಗಂ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್
Sonu Nigam
ಮಂಜುನಾಥ ಸಿ.
|

Updated on: May 15, 2025 | 3:51 PM

Share

ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ (Pahalgam) ದಾಳಿಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ದೂರಿನ ಅನುಸಾರ ಪೊಲೀಸರು ಸೋನು ನಿಗಂಗೆ ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಮೊದಲ ನೊಟೀಸ್​ಗೆ ಉತ್ತರ ನೀಡದೇ ಇದ್ದಾಗ ಎರಡನೇ ನೊಟೀಸ್ ಅನ್ನು ಕಳಿಸಲಾಗಿತ್ತು. ಅದರ ಬೆನ್ನಲ್ಲೆ ಗಾಯಕ ಸೋನು ನಿಗಂ ತಮ್ಮ ಮೇಲಿನ ಎಫ್​ಐಆರ್ ರದ್ದು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದು ಇದೀಗ, ನ್ಯಾಯಾಲಯವು ಬೆಂಗಳೂರು ಪೊಲೀಸರಿಗೆ ಸೋನು ನಿಗಂ ಪ್ರಕರಣ ಸಂಬಂಧ ಕೆಲ ಸೂಚನೆಗಳನ್ನು ನೀಡಿದೆ.

ತನಿಖೆಗೆ ಹಾಜರಾಗಿಲ್ಲವೆಂದು ಹೆಚ್ಚುವರಿ SPP ಬಿ.ಎನ್.ಜಗದೀಶ್ ನ್ಯಾಯಾಲಯಕ್ಕೆ ಹೇಳಿದರು. ಬೆಂಗಳೂರಿಗೆ ಸೋನು ನಿಗಮ್ ಹಾಜರಾದರೆ ಸಮಸ್ಯೆ ಆಗಬಹುದು, ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಸೋನು ನಿಗಂ ಪರ ವಕೀಲರು ಹೈಕೋರ್ಟ್​ಗೆ ಮನವಿ ಮಾಡಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾ.ಶಿವಶಂಕರ್ ಅಮರಣ್ಣವರ್ ಅವರು, ಸೋನು ನಿಗಂ ಅವರಿರುವ ಜಾಗದಲ್ಲಿಯೇ ವಿಚಾರಣೆ ಮಾಡುವಂತೆ ಅಥವಾ ವಿಡಿಯೋ ಕಾಲ್ ಮೂಲಕ ವಿಚಾರಣೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಮಾತ್ರವಲ್ಲದೆ ಸೋನು ನಿಗಂ ಅವರ ವಿರುದ್ಧ ಯಾವುದೇ ಬಲವಂತ ಕ್ರಮ ಕೈಗೊಳ್ಳಬಾರದೆಂದು ಹಾಗೂ ನ್ಯಾಯಾಲಯದ ಅನುಮತಿ ಇಲ್ಲದೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಬಾರದು ಎಂದು ಸಹ ಪ್ರಕರಣದ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದರು. ನ್ಯಾಯಾಲಯದ ಸೂಚನೆಯಂತೆ ಬೆಂಗಳೂರು ಪೊಲೀಸರು ಮುಂಬೈಗೆ ಹೋಗಿ ಸೋನು ನಿಗಂ ನಿವಾಸದಲ್ಲಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ಓದಿ:ಕನ್ನಡಿಗರಿಗೆ ಅವಮಾನ, ಪ್ರಕರಣ ರದ್ದಿಗೆ ಸೋನು ನಿಗಂ ಮನವಿ

ಇತ್ತೀಚೆಗಷ್ಟೆ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಲೈವ್ ಶೋ ಮಾಡಿದ್ದ ಸೋನು ನಿಗಂ ಹಿಂದಿ ಹಾಡುಗಳನ್ನು ಹಾಡುತ್ತಿದ್ದರು. ಆ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹಾಡುವಂತೆ ಒತ್ತಾಯ ಮಾಡಿದ. ಆಗ ತಾಳ್ಮೆ ಕಳೆದುಕೊಂಡ ಸೋನು ನಿಗಂ, ‘ಕನ್ನಡ, ಕನ್ನಡ ಇಂಥಹುದರಿಂದಲೇ ಪಹಲ್ಗಾಮ್ ದಾಳಿ ಆಗಿರುವುದು’ ಎಂದರು. ಕನ್ನಡಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ದಕ್ಕೆ ಕನ್ನಡಪರ ಸಂಘಟನೆಗಳು ಸೋನು ನಿಗಂ ವಿರುದ್ಧ ಪ್ರತಿಭಟನೆ ಮಾಡಿದ್ದು, ಸೋನು ನಿಗಂ ವಿರುದ್ಧ ನಿಷೇಧ ಹೇರಬೇಕು ಎಂದು ಚಿತ್ರರಂಗವನ್ನು ಒತ್ತಾಯಿಸಿದ್ದವು. ಅದರಂತೆ ಚಿತ್ರರಂಗದವರು, ಸೋನು ನಿಗಂಗೆ ಅಸಹಕಾರ ತೋರುವುದಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೆ ಗಾಯಕ ಸೋನು ನಿಗಂ, ಘಟನೆ ಬಗ್ಗೆ ಕನ್ನಡಿಗರ ಕ್ಷಮೆ ಕೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ