ಕನ್ನಡದಲ್ಲಿ ನಮ್ಮ ನೆಲ, ನುಡಿ, ಸಂಸ್ಕೃತಿಯನ್ನ ಬಿಂಬಿಸುವ ಹಲವಾರು ಚಿತ್ರಗಳು ಬಂದಿವೆ. ತಾರೆಯರ ಚಿತ್ರಗಳಲ್ಲಂತೂ ಬಹುತೇಕವಾಗಿ ನಾಡಿನ ಕುರಿತಾದ ಕತಾ ಎಳೆಯೊಂದು ಇದ್ದೇ ಇರುತ್ತದೆ. ಇಂತಹ ಚಿತ್ರಗಳ ಹೊರತಾಗಿಯೂ, ನಾಡಿನ ಕುರಿತಾಗಿಯೇ ಹಲವು ಚಿತ್ರಗಳು ಬಂದಿವೆ. ಈ ಪಟ್ಟಿಯಲ್ಲಿ ಹಳೆಯ ಚಿತ್ರಗಳೂ ಸೇರಿದಂತೆ ಇತ್ತೀಚಿನ ಚಿತ್ರಗಳನ್ನೂ ನೀಡಲಾಗಿದೆ. ಈ ಚಿತ್ರಗಳು ಈ ನೆಲದ ಹಿರಿಮೆಯನ್ನು ಸಾರುತ್ತಾ, ಜೊತೆಜೊತೆಗೆ ನಾಡಿನ ಜ್ವಲಂತ ಸಮಸ್ಯೆಗಳನ್ನೂ ಚರ್ಚಿಸಿವೆ. 66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂತಹ ಕೆಲವು ಚಿತ್ರಗಳನ್ನು ಇಲ್ಲಿ ಮೆಲುಕು ಹಾಕಲಾಗಿದೆ.
1. ಆಕಸ್ಮಿಕ: ತರಾಸು ಅವರ ಮೂರು ಕಾದಂಬರಿಗಳನ್ನಾಧರಿಸಿರುವ ಈ ಚಿತ್ರವನ್ನು ನಿರ್ದೇಶಿಸಿದವರು ಟಿ.ಎಸ್.ನಾಗಾಭರಣ. ಚಿತ್ರಕ್ಕೆ ಹಂಸಲೇಖ ಸಾಹಿತ್ಯ ಹಾಗೂ ಸಂಗೀತ ನೀಡಿದ್ದಾರೆ. ಡಾ.ರಾಜಕುಮಾರ್ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರ ಪ್ರತಿಯಬ್ಬ ಕನ್ನಡಿಗನಲ್ಲಿ ದೇಶಭಕ್ತಿಯನ್ನು ಬಡಿದೆಬ್ಬಿಸಿತ್ತು. ಈ ಚಿತ್ರದ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಂತೂ ಕನ್ನಡ ಮನಸ್ಸುಗಳಲ್ಲಿ ರಾಷ್ಟ್ರಗೀತೆಯಷ್ಟೇ ಪ್ರಮುಖ ಸ್ಥಾನ ಪಡೆದಿದೆ.
2. ಗಂಧದ ಗುಡಿ: ಈ ಚಿತ್ರವು ಭಾರತದಲ್ಲಿಬತಯಾರಾದ ವನ್ಯಜೀವಿಸಂರಕ್ಣಣೆ ಕಲ್ಪನೆಯನ್ನು ಆಧರಿಸಿದ ಮೊದಲ ಚಿತ್ರ. ರಾಜಕುಮಾರ್, ವಿಷ್ಣುವರ್ಧನ್, ಕಲ್ಪನಾ ಸೇರಿದಂತೆ ಅನೇಕ ತಾರೆಯರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ. ಬಹುದೊಡ್ಡ ಯಶಸ್ಸು ಕಂಡ ಈ ಚಿತ್ರವನ್ನು ವಿಜಯ್ ನಿರ್ದೇಶಿಸಿದ್ದಾರೆ. ಇದೇ ಚಿತ್ರದ ‘ನಾವಾಡುವ ನುಡಿಯೇ ಕನ್ನಡನುಡಿ’ ಕನ್ನಡಿಗರ ಪ್ರಿಯ ಗೀತೆಗಳಲ್ಲೊಂದಾಗಿದೆ.
3. ವೀರ ಕನ್ನಡಿಗ: ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರವನ್ನು ನಿರ್ದೇಶಿಸಿದವರು ಮೆಹೆರ್ ರಮೇಶ್. 2004ರಲ್ಲಿ ತೆರೆಕಂಡ ಈ ಚಿತ್ರ ‘ಜೀವ ಕನ್ನಡದೇಹ ಕನ್ನಡ’ ಹಾಡು ಈಗಲೂ ಕೇಳುಗರಿಗೆ ರೋಮಾಂಚನ ಹುಟ್ಟಿಸುತ್ತದೆ. ಈ ಚಿತ್ರಕ್ಕೆ ಚಕ್ರಿ ಸಂಗೀತ ನೀಡಿದ್ದಾರೆ.
4. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ರಿಷಬ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರ ಶತದಿನೋತ್ಸವ ಕಂಡಿತ್ತು. ಗಡಿನಾಡ ಕನ್ನಡ ಮಕ್ಕಳು ಹಾಗೂ ಅವರ ಶಿಕ್ಷಣದ ಸಮಸ್ಯೆಗಳನ್ನು ಕಾಸರಗೋಡನ್ನು ಭೂಮಿಕೆಯನ್ನಾಗಿಸಿ ಕಟ್ಟಿಕೊಟ್ಟಿತ್ತು. ಭಾಷೆ, ಸಂಸ್ಕೃತಿಯ ಮೇಲೆ ಮಾನವ ನಿರ್ಮಿತ ಗಡಿಗಳು ಎಬ್ಬಿಸುವ ತಲ್ಲಣಗಳನ್ನು ಚಿತ್ರ ಪರಿಣಾಮಕಾರಿಯಾಗಿ ತೆರೆಯ ಮೇಲೆ ತಂದಿತ್ತು. ಅನಂತನಾಗ್ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.
5. ಕನ್ನಡ ದೇಶದೊಳ್: ಕನ್ನಡ ಭಾಷೆಯ ಪ್ರಾಮುಖ್ಯತೆ, ಅದನ್ನು ಏಕೆ ಉಳಿಸಿ ಬೆಳೆಸಬೇಕು ಎನ್ನುವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಅವಿರಾಮ್ ಕಂಠೀರವ ನಿರ್ದೇಶನದ ಈ ಚಿತ್ರದಲ್ಲಿ ತಾರಕ್ ಪೊನ್ನಪ್ಪ, ಸುಚೇಂದ್ರ ಪ್ರಸಾದ್, ಜೇನ್ ವೊಲ್ಕೊವಾ ಮೊದಲಾದವರು ಅಭಿನಯಿಸಿದ್ದಾರೆ.
6. ಕನ್ನಡ್ ಗೊತ್ತಿಲ್ಲ: ಮಯೂರ್ ರಾಘವೇಂದ್ರ ಕತೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಸುಧಾರಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಗಿರಿಧರ್ ದಿವಾನ್ ಛಾಯಾಗ್ರಹಣ ಮಾಡಿದ್ದಾರೆ. ಹೊರಭಾಷೆಯವರಿಗೆ ಕನ್ನಡ ಕಲಿಸುವ ಎಳೆಯನ್ನು ಚಿತ್ರವು ಒಳಗೊಂಡಿದೆ.
7. ಕಾಳಿದಾಸ ಕನ್ನಡ ಮೇಷ್ಟ್ರು: ಪ್ರಾದೇಶಿಕ ಭಾಷೆಗಿಂತ ಆಂಗ್ಲ ಭಾಷೆಯ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವುದರ ವಿರುದ್ಧ ಕನ್ನಡ ಶಿಕ್ಷಕ ಹೋರಾಡುವ ಕತಾ ಎಳೆಯನ್ನು ಹಾಸ್ಯದ ಛಾಯೆಯೊಂದಿಗೆ ತೆರೆಯ ಮೇಲೆ ತರಲಾಗಿದೆ. ಜಗ್ಗೇಶ್ ಹಾಗೂ ಮೇಘನಾ ಗಾಂವ್ಕರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕವಿರಾಜ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ.
ಇದನ್ನೂ ಓದಿ:
ಕನ್ನಡ ರಾಜ್ಯೋತ್ಸವ 2021: ಪ್ರತಿ ಬಾರಿ ಕೇಳುವಾಗಲೂ ಕನ್ನಡಿಗರಿಗೆ ರೋಮಾಂಚನ ನೀಡುವ ಅದ್ಭುತ ಚಿತ್ರಗೀತೆಗಳಿವು
Published On - 9:30 am, Mon, 1 November 21