‘ಡೆವಿಲ್’ ಸಿನಿಮಾನಲ್ಲಿ ನಗಿಸುತ್ತಾರಾ ಗಿಲ್ಲಿ? ಹೇಗಿದೆ ಪಾತ್ರ?

Gilli Nata in Devil: ಬಿಗ್​​ಬಾಸ್​​ ಇಂದಾಗಿ ಗಿಲ್ಲಿ ನಟ ಮನೆ ಮಾತಾಗಿದ್ದಾರೆ. ಅವರ ಹಾಸ್ಯಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಇಂದು ಬಿಡುಗಡೆ ಆಗಿರುವ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾನಲ್ಲಿಯೂ ಸಹ ಗಿಲ್ಲಿ ನಟ ನಟಿಸಿದ್ದಾರೆ. ‘ಡೆವಿಲ್’ ಸಿನಿಮಾನಲ್ಲಿ ಗಿಲ್ಲಿಯ ಪಾತ್ರ ಹೇಗಿದೆ? ಅವರ ನಟನೆ ಹೇಗಿದೆ? ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗಿದ್ದಾರಾ?

‘ಡೆವಿಲ್’ ಸಿನಿಮಾನಲ್ಲಿ ನಗಿಸುತ್ತಾರಾ ಗಿಲ್ಲಿ? ಹೇಗಿದೆ ಪಾತ್ರ?
Nata In Devil

Updated on: Dec 11, 2025 | 12:23 PM

ಬಿಗ್​​ಬಾಸ್​​ಗೆ ಬಂದ ಗಿಲ್ಲಿ ನಟನ (Gilli Nata) ಖ್ಯಾತಿ ಹತ್ತುಪಟ್ಟು ಹೆಚ್ಚಾಗಿದೆ. ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿ ಹೊಡೆಯುವ ಡೈಲಾಗ್​​ಗಳಿಗೆ, ಅವರು ಮಾಡುವ ಕಾಮಿಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿಂದೆ ಕೆಲವಾರು ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದರು, ಆದರೆ ಬಿಗ್​​ಬಾಸ್, ಗಿಲ್ಲಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿದೆ. ಗಿಲ್ಲಿಗೆ ಪ್ರತ್ಯೇಕ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಇಂದು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾನಲ್ಲಿ ‘ಗಿಲ್ಲಿ’ ಸಹ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಹೇಗಿದೆ? ಸಿನಿಮಾನಲ್ಲಿ ನಗಿಸುತ್ತಾರಾ ಗಿಲ್ಲಿ? ಪ್ರೇಕ್ಷಕರು ಹೇಳಿದ್ದೇನು?

‘ಡೆವಿಲ್’ ಸಿನಿಮಾನಲ್ಲಿ ಗಿಲ್ಲಿ ಅವರದ್ದು ಸಣ್ಣ ಪಾತ್ರ. ಅವರಿಗೆ ಒಂದು ಪ್ರತ್ಯೇಕ ಕಾಮಿಡಿ ಟ್ರ್ಯಾಕ್ ಇದೆ. ಮುಖ್ಯ ಪಾತ್ರಗಳ ಜೊತೆಗೆ ಅವರ ಪಾತ್ರಕ್ಕೆ ನೇರ ಸಂಬಂಧ ಇಲ್ಲವಾದರೂ, ಕತೆಯ ನಡುವೆ ಹಾಸ್ಯಕ್ಕಾಗಿ ಗಿಲ್ಲಿ ಪಾತ್ರವನ್ನು ನಿರ್ದೇಶಕ ಪ್ರಕಾಶ್ ಅವರು ಬಳಸಿಕೊಂಡಿದ್ದಾರೆ. ಉದ್ದೇಶಕ್ಕೆ ತಕ್ಕಂತೆ ಗಿಲ್ಲಿ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿ ಆಗಿದ್ದಾರೆ. ಸಿಕ್ಕ ಕಡಿಮೆ ಅವಕಾಶದಲ್ಲಿ ಗಿಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿಕೊಂಡಿದ್ದಾರೆ.

‘ಡೆವಿಲ್’ ಸಿನಿಮಾನಲ್ಲಿ ಗಿಲ್ಲಿಯವರದ್ದು ಕುಡುಕನ ಪಾತ್ರವಂತೆ. ಕಂಡಿದ್ದನ್ನು ಸಹ ತಪ್ಪಾಗಿ ಅರ್ಥೈಸಿಕೊಳ್ಳುವ ಪಾತ್ರವದು. ಗಿಲ್ಲಿ, ತಮ್ಮ ಡೈಲಾಗ್, ಭಾವ ಭಂಗಿಗಳಿಂದ ಸಖತ್ ನಗು ಉಕ್ಕಿಸಿದ್ದಾರೆ. ಸಿನಿಮಾದ ಮುಖ್ಯ ಪಾತ್ರದೊಟ್ಟಿಗೆ ಗಿಲ್ಲಿ ಪಾತ್ರಕ್ಕೆ ಸಂಬಂಧ ಇಲ್ಲ, ದರ್ಶನ್ ಅವರ ಪಾತ್ರದ ಜೊತೆಗೆ ಯಾವುದೇ ಸಂಭಾಷಣೆಯೂ ಇಲ್ಲ, ಪ್ರತ್ಯೇಕ ಪಾತ್ರವಾಗಿಯೂ ಗಿಲ್ಲಿ ಕತೆಯಲ್ಲಿ ಇದ್ದಾರೆ. ಸಿನಿಮಾದ ಓಘದ ನಡುವೆ ಪ್ರೇಕ್ಷಕರಿಗೆ ರಿಲೀಫ್ ನೀಡುವ ಕೆಲಸವನ್ನು ಗಿಲ್ಲಿ ಮಾಡಿದ್ದಾರೆ.

ಇದನ್ನೂ ಓದಿ:ಫ್ರೀ ಪ್ರಾಡಕ್ಟ್, ವೇಸ್ಟ್ ಬಾಡಿ: ಕಾವ್ಯಾಗೆ ಹೀನಾಯವಾಗಿ ನಿಂದಿಸಿದ ಗಿಲ್ಲಿ ನಟ

ಗಿಲ್ಲಿ ಮಾತ್ರವಲ್ಲದೆ ಇನ್ನೂ ಕೆಲವು ಹಾಸ್ಯ ಪಾತ್ರಗಳು ಸಿನಿಮಾನಲ್ಲಿವೆ. ಕೆಲವು ಇನ್​​ಸ್ಟಾಗ್ರಾಂ, ಯೂಟ್ಯೂಬ್ ಇನ್​​ಫ್ಲ್ಯುಯೆನ್ಸರ್​ಗಳನ್ನು ಸಹ ನಿರ್ದೇಶಕ ಪ್ರಕಾಶ್ ಅವರು ಕೆಲವು ಸನ್ನಿವೇಶಗಳಲ್ಲಿ ಬಳಸಿಕೊಂಡಿದ್ದಾರೆ. ಆಕ್ಷನ್ ಸಿನಿಮಾ ಆಗಿದ್ದರೂ ಸಹ ಹಾಸ್ಯವನ್ನು ಜೊತೆಗೆ ಸೇರಿಸುವ ಪ್ರಯತ್ನವನ್ನು ನಿರ್ದೇಶಕ ಪ್ರಕಾಶ್ ಮಾಡಿದ್ದಾರೆ. ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸನ್ನೂ ಸಹ ಗಳಿಸಿದ್ದಾರೆ.

ಗಿಲ್ಲಿ ನಟ ಪ್ರಸ್ತುತ ಬಿಗ್​​ಬಾಸ್ ಮನೆಯಲ್ಲಿದ್ದು, ಅಲ್ಲಿಯೂ ಸಹ ಸಖತ್ ಆಗಿ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ಗಿಲ್ಲಿ, ಫಿನಾಲೆ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಗಿಲ್ಲಿಯೇ ಈ ಬಾರಿಯ ವಿಜೇತ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಗಿಲ್ಲಿಯ ಹಾಸ್ಯ ಪ್ರತಿಭೆಯನ್ನು ಸ್ವತಃ ಸುದೀಪ್ ಸಹ ಮೆಚ್ಚಿಕೊಂಡಿದ್ದಾರೆ. ‘ನೀವು ಒಳ್ಳೆಯ ಕಲಾವಿದ ಹಾಗಾಗಿ ನಿಮ್ಮನ್ನು ಮೊದಲಿಗೆ ಬಿಗ್​​ಬಾಸ್​​ಗೆ ಆಯ್ಕೆ ಮಾಡಲಾಗಿತ್ತು’ ಎಂದು ಸಹ ಸುದೀಪ್ ಹೇಳಿದ್ದಾರೆ. ಇದೀಗ ‘ಡೆವಿಲ್’ ಸಿನಿಮಾನಲ್ಲಿಯೂ ತಮ್ಮ ಪ್ರತಿಭೆಯನ್ನು ಗಿಲ್ಲಿ ತೋರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ