‘ಟಾಕ್ಸಿಕ್’ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಒಬೆರಾಯ್: ಯಾರೀತ?

|

Updated on: Aug 14, 2024 | 11:19 AM

Toxic Movie: ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಪ್ರತಿಭೆಗಳ ಸಂಗಮ ಆಗಲಿದೆ. ಬಾಲಿವುಡ್​ ಹಾಗೂ ಇತರೆ ಚಿತ್ರರಂಗದ ನಟ-ನಟಿಯರು ನಟಿಸುತ್ತಿದ್ದಾರೆ. ಇದೀಗ ಬಾಲಿವುಡ್​ನ ಯುವನಟನೊಬ್ಬ ಯಶ್​ ಜೊತೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸುತ್ತಿರುವುದು ಖಾತ್ರಿಯಾಗಿದೆ.

‘ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟ ಅಕ್ಷಯ್ ಒಬೆರಾಯ್: ಯಾರೀತ?
Follow us on

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ. ಈ ಸಿನಿಮಾದ ಚಿತ್ರೀಕರಣ ಪ್ರಾರಂಭ ಆಗುವ ಮುನ್ನವೇ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆ ಮೂಡಿದೆ. ಸಿನಿಮಾದಲ್ಲಿ ಕೆಲವು ಸ್ಟಾರ್ ನಟ-ನಟಿಯರ ಸಂಘಮ ಆಗಲಿದೆ. ಈಗಾಗಲೇ ಕೆಲವು ಸ್ಟಾರ್ ನಟಿಯರ ಹೆಸರು ಕೇಳಿ ಬಂದಿದೆ. ಇದೀಗ ಬಾಲಿವುಡ್​ನ ನಟನೊಬ್ಬ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಸುದ್ದಿ ಖಚಿತವಾಗಿದೆ.

ಕೆಲವು ದಿನಗಳ ಹಿಂದಷ್ಟೆ ಸ್ವತಃ ಅಕ್ಷಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ತಂಡವು ತಮ್ಮನ್ನು ಚಿತ್ರತಂಡಕ್ಕೆ ಸ್ವಾಗತಿಸಿರುವ ಚಿತ್ರವೊಂದನ್ನು ಅಕ್ಷಯ್ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡ ಒಂದು ವೆಲ್​ಕಮ್ ನೋಟ್​ ಅನ್ನು ಅಕ್ಷಯ್​ಗೆ ನೀಡಿರುವ ಜೊತೆಗೆ ಒಂದು ವೆಲ್​ಕಮ್ ಕಿಟ್ ಒಂದನ್ನು ಸಹ ನೀಡಿದೆ. ಕಿಟ್​ನಲ್ಲಿ ಕೆಲವು ಕರ್ನಾಟಕ ಮೆಚ್ಚಿನ ತಿನಿಸುಗಳು ಸಹ ಇದ್ದಂತಿವೆ. ವೆಲ್​ಕಮ್ ನೋಟ್​ನಲ್ಲಿ, ‘ನಿಮ್ಮನ್ನು ತಂಡಕ್ಕೆ ಸ್ವಾಗತಿಸುತ್ತಿದ್ದೇವೆ. ನಿಮ್ಮ ಪ್ರತಿಭೆ ಹಾಗೂ ಎನರ್ಜಿ ನಮ್ಮೊಂದಿಗೆ ಸೇರುತ್ತಿರುವುದು ನಮಗೆ ಖುಷಿ ತಂದಿದೆ. ನಿಮ್ಮೊಂದಿಗೆ ಸೇರಿ ಅದ್ಭುತವನ್ನು ಸೃಷ್ಟಿಸುವ ತವಕದಲ್ಲಿದ್ದೇವೆ’ ಎಂದು ಬರೆಯಲಾಗಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅಕ್ಷಯ್ ಒಬೆರಾಯ್ ಜನಿಸಿದ್ದು ಅಮೆರಿಕದ ನ್ಯೂ ಜೆರ್ಸಿಯಲ್ಲಿ. ಸಿನಿಮಾ ನಟನಾಗುವ ಆಸೆಯಿಂದ ಮುಂಬೈಗೆ ಬಂದರು. ಆರಂಭದಲ್ಲಿ ಮುಂಬೈನ ಪ್ರತಿಷ್ಠಿತ ಪೃಥ್ವಿ ಥಿಯೇಟರ್​ನಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಅಕ್ಷಯ್​ರ ಗುರು ಖ್ಯಾತ ನಟ ಮಕರಂದ್ ದೇಶಪಾಂಡೆ. ಹಲವು ನಾಟಕಗಳಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅಕ್ಷಯ್, ಕಳೆದ 14 ವರ್ಷಗಳಿಂದಲೂ ಬಾಲಿವುಡ್​ನಲ್ಲಿ ಸಕ್ರಿಯವಾಗಿದ್ದಾರೆ.

ಇದನ್ನೂ ಓದಿ:Angry Young Men: ಬಾಲಿವುಡ್​ ದಿಗ್ಗಜರ ಸಾಕ್ಷ್ಯಚಿತ್ರದಲ್ಲಿ ರಾಕಿಂಗ್​ ಸ್ಟಾರ್​ ಯಶ್​; ಇದು ಯಶಸ್ಸು

ಅತ್ಯುತ್ತಮ ನಟರಾಗಿರುವ ಅಕ್ಷಯ್, ‘ಪೀಕು’, ‘ಕಾಲಖಂಡಿ’, ‘ಪಿತೂರ್’, ‘ಲವ್ ಹಾಸ್ಟೆಲ್’, ‘ಗುಸ್​ಫೇಟಿಯಾ’, ‘ಥಾರ್’ ಇನ್ನೂ ಹಲವಾರು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಹೃತಿಕ್, ದೀಪಿಕಾ ಪಡುಕೋಣೆಯ ‘ಫೈಟರ್’ ಸಿನಿಮಾದಲ್ಲಿಯೂ ಅಕ್ಷಯ್ ಒಬೆರಾಯ್ ನಟಿಸಿದ್ದರು. ಮಾತ್ರವಲ್ಲದೆ ಹಲವು ಜನಪ್ರಿಯ ವೆಬ್ ಸರಣಿ ಹಾಗೂ ಕಿರು ಚಿತ್ರಗಳಲ್ಲಿಯೂ ಸಹ ಅಕ್ಷಯ್ ಒಬೆರಾಯ್ ನಟನೆ ಮಾಡಿದ್ದಾರೆ. ಇದೀಗ ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾದಲ್ಲಿ ಅಕ್ಷಯ್ ನಟಿಸುತ್ತಿದ್ದಾರೆ. ಅಕ್ಷಯ್ ಈಗಾಗಲೇ ಬೆಂಗಳೂರು ತಲುಪಿದ್ದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಅವರ ಪತಿ ಕ್ಯಾಮೆರಾ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ನಾಯಕಿ ಎನ್ನಲಾಗುತ್ತಿದ್ದು, ನಯನತಾರಾ ಸಹ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಸಿನಿಮಾದಲ್ಲಿ ಜೆಜೆ ಪೆರ್ರಿ ಸೇರಿದಂತೆ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ