ಬಾಲಿವುಡ್ ನಟ ಇರ್ಫಾನ್ ಖಾನ್‌ ಆಸ್ಪತ್ರೆಗೆ ದಾಖಲು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ!

ಬಾಲಿವುಡ್ ನಟ ಇರ್ಫಾನ್ ಖಾನ್‌ ಆಸ್ಪತ್ರೆಗೆ ದಾಖಲು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ!

ಮುಂಬೈ: ಬಾಲಿವುಡ್​ನ ಖ್ಯಾತ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ಕೆಲ ದಿನಗಳ ಹಿಂದಷ್ಟೇ ಜೈಪುರದಲ್ಲಿ ಸಾವನ್ನಪ್ಪಿದ್ದರು. ಆದ್ರೆ ಲಾಕ್​ಡೌನ್ ಪರಿಣಾಮ ಅಂತ್ಯಸಂಸ್ಕಾರಕ್ಕೂ ಹೋಗಲೂ ಸಾಧ್ಯವಾಗಿರಲಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕವೇ ತಾಯಿಯ ಅಂತಿಮ ದರ್ಶನ ಪಡೆದಿದ್ದರು. ಇದೀಗ ಇರ್ಫಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇರ್ಫಾನ್ ಖಾನ್ ನ್ಯೂರೋ ಎಂಡೊಕ್ರೈನ್ ಟ್ಯೂಮರ್ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ವಾರವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ತಪಾಸಣೆ ಸಾಧ್ಯವಾಗಿರಲಿಲ್ಲ. ಈ ಹಿಂದೆ ಅಪರೂಪದ ಕಾಯಿಲೆಗೆ ಚಿಕಿತ್ಸೆ ಪಡೆಯಲು ಅವರು ವಿದೇಶಕ್ಕೆ ತೆರಳಿದ್ದರು.

ಅದಕ್ಕಾಗಿ ಚಿತ್ರರಂಗದಿಂದ ಒಂದು ವರ್ಷ ದೂರವಿದ್ದರು. ಲಂಡನ್‌ನಲ್ಲಿ‌ ಚಿಕಿತ್ಸೆ ಪಡೆದು ಪುನಃ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಸದ್ಯ ಅವರು ಮುಂಬೈನಲ್ಲಿ ಪತ್ನಿ ಸುತಾಪಾ ಸಿಕದರ್, ಮಕ್ಕಳಾದ ಬಾಬಿಲ್ ಮತ್ತು ಆಯಾನ್ ಜೊತೆ ವಾಸವಾಗಿದ್ದಾರೆ.

ದಿಢಿರನೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಶೀಘ್ರ ಗುಣಮುಖರಾಗಲಿ ಎಂದು ಬಾಲಿವುಡ್‌ ಸೆಲೆಬ್ರಿಟಿಗಳು ಹಾರೈಸಿದ್ದಾರೆ.

Click on your DTH Provider to Add TV9 Kannada