ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಧೂಳೆಬ್ಬಿಸಿದೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ಸಿನಿಮಾ ಮತ್ತಷ್ಟು ಯಶಸ್ಸು ಕಾಣಲು ಮುನ್ನುಗ್ಗುತ್ತಿದೆ. ರಾಬರ್ಟ್ ತೆರೆಕಂಡು ನಾಲ್ಕು ದಿನಗಳಲ್ಲೇ ಸುಮಾರು 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಬಗ್ಗೆ ಇಂದು (ಮಾರ್ಚ್ 16) ನಡೆದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ದರ್ಶನ್ ಸಂತಸ ಹಂಚಿಕೊಂಡಿದ್ದಾರೆ. ಜತೆಗೆ, ಜನರ ಟೀಕೆಗಳಿಗೂ ಖಡಕ್ ಉತ್ತರ ನೀಡಿದ್ದಾರೆ.
ರಾಬರ್ಟ್ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿತ್ತು. ಮೊದಲ ದಿನವೇ ದಾಖಲೆಯ ಗಳಿಕೆ ಗಲ್ಲಾ ಪೆಟ್ಟಿಗೆ ತುಂಬಿತ್ತು. ಯಶಸ್ಸು ಖಚಿತವಾಗುತ್ತಿದ್ದಂತೆ, ಕೆಲಜನರು ಸಿನಿಮಾ ಬಗ್ಗೆ ಟೀಕೆ ಟಿಪ್ಪಣಿಗಳನ್ನೂ ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಆ ಸಿನಿಮಾದ್ದು ಇದು ಈ ಸಿನಿಮಾದ್ದು ಎಂದು ಹೇಳಿಕೊಂಡಿದ್ದಾರೆ. ಜನರ ಟೀಕೆಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ ದರ್ಶನ್. ತಮ್ಮ ಹಿಂದಿನ, ಯಶಸ್ವಿ ಸಿನಿಮಾ ‘ಸಾರಥಿ’ಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಪರಿಚಯಿಸಿದ ಮತ್ತೊಬ್ಬ ದರ್ಶನ್ ಯಾರು? ಶೂಟಿಂಗ್ ಸಮಯದ ತಮಾಷೆ ನೆನಪಿಸಿಕೊಂಡ ಡಿ ಬಾಸ್!
ಸಾರಥಿಯಲ್ಲಿ ಲಯನ್ ಕಿಂಗ್ ಸಿನಿಮಾವನ್ನು ಅಳವಡಿಸಿಕೊಂಡ್ವಿ. ಸಾರಥಿ ಎರಡನೇ ಭಾಗದಲ್ಲಿ ಲಯನ್ ಕಿಂಗ್ ಸಿನಿಮಾವನ್ನು ಹಂಗಂಗೇ ಇಟ್ವಿ. ಜನ ನೋಡಿದ್ರು. ಅದು ಒಂದು ಕಥೆಗೆ ಕೊಟ್ಟಿರುವ ಟ್ರೀಟ್ಮೆಂಟ್ ಪ್ರಭಾವ. ಸಕ್ಸಸ್ ಸಿಕ್ಕ ತಕ್ಷಣ ಹೀಗೆ ಕಮೆಂಟ್ ಮಾಡೋಕೆ ಬರ್ತಾರೆ ಎಂದು ಹೇಳಿದ್ದಾರೆ. ಕಥೆಯ ಎಳೆಗಳು ಒಂದಕ್ಕೊಂದು ಸಾಮ್ಯತೆ ಇರುತ್ತದೆ. ಆದರೆ ಅದರ ಟ್ರೀಟ್ಮೆಂಟ್ ಬೇರೆ ಎಂದು ತಿಳಿಸಿದ್ದಾರೆ. ಜತೆಗೆ, ಸಿನಿಮಾದಲ್ಲಿ ವಲ್ಗರ್ ದೃಶ್ಯ ಅಥವಾ ಸಂಭಾಷಣೆಗಳನ್ನು ಇಡಬೇಡಿ ಎಂದು ಕೇಳಿಕೊಳ್ಳುತ್ತೇನೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ನಡೆಯುತ್ತಿದೆ. ನಟ ದರ್ಶನ್, ನಟಿ ಆಶಾ ಭಟ್, ವಿನೋದ್ ಪ್ರಭಾಕರ್, ನಿರ್ಮಾಪಕ ಉಮಾಪತಿ ಗೌಡ ಮತ್ತಿತರರು ಚಿತ್ರದ ಸಕ್ಸಸ್ ಬಗ್ಗೆ ಮಾತನಾಡಿದ್ದಾರೆ. ಇಡೀ ಚಿತ್ರತಂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದೆ. ಈ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ಕಷ್ಟಪಟ್ಟು ಕೆಲಸ ಮಾಡಿದ ಇಡೀ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Published On - 10:06 pm, Tue, 16 March 21