ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡ (Niveditha Gowda) ಫೇಮಸ್ ಆಗಿದ್ದರೆ, ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಫೇಮಸ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಶೋನಲ್ಲಿ ಪರಸ್ಪರ ಪರಿಚಯ ಆದ ಇವರಿಬ್ಬರು ನಂತರ ಪತಿ-ಪತ್ನಿ ಆದರು. ಈಗ ಸಿನಿಮಾದಲ್ಲೂ ಅವರಿಗೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಈ ಬಗ್ಗೆ ಸುದ್ದಿ ಬಹಿರಂಗ ಆಗಿದೆ. ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಚಂದನ್ ಶೆಟ್ಟಿ (Chandan Shetty) ಮತ್ತು ನಿವೇದಿತಾ ಗೌಡ ಅವರು ಜೋಡಿಯಾಗಿ ನಟಿಸುತ್ತಿರುವುದರಿಂದ ಈ ಚಿತ್ರ ವಿಶೇಷ ಎನಿಸಿಕೊಳ್ಳಲಿದೆ.
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಚಂದನ್ ಶೆಟ್ಟಿ ಅವರ ಖ್ಯಾತಿ ಹೆಚ್ಚಾಯಿತು. ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ನಟನಾಗಿಯೂ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ಅದೇ ರೀತಿ, ನಿವೇದಿತಾ ಗೌಡ ಅವರು ಬಿಗ್ ಬಾಸ್ ಮಾತ್ರವಲ್ಲದೇ ಬೇರೆ ಬೇರೆ ಶೋಗಳಲ್ಲಿ ಕಾಣಿಸಿಕೊಂಡು ಜನಮನ ಗೆದ್ದರು. ರೀಲ್ಸ್ ಮೂಲಕ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ಈಗ ಇದೇ ಮೊದಲ ಬಾರಿಗೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ರೀಲ್ಸ್ನಲ್ಲಿ ಲಕ್ಷಾಂತರ ವೀವ್ಸ್ ಪಡೆಯುವ ಸುರ ಸುಂದರಿ ನಿವೇದಿತಾ ಗೌಡ
ಈ ಸೆಲೆಬ್ರಿಟಿ ಜೋಡಿ ನಟಿಸಲಿರುವ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಸೈಕಲಾಜಿಕಲ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಕ್ಕೆ ಪುನೀತ್ ಶ್ರೀನಿವಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ. ಈ ಮೊದಲು ಅನೇಕ ಸಿನಿಮಾಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಸ್ವತಂತ್ರ ನಿರ್ದೇಶನದಲ್ಲಿ ಮೊದಲ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ: ಸೆನ್ಸೇಷನ್ ಸೃಷ್ಟಿಸುವ ಸುಂದರಿ ನಿವೇದಿತಾ ಗೌಡ ಫೋಟೋಗಳು ಇಲ್ಲಿವೆ ನೋಡಿ..
ಎಂ.ಎಸ್. ತ್ಯಾಗರಾಜ್ ಅವರು ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿ ಕರುಣಾಕರ್ ಅವರದ್ದು. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಏನು ಎಂಬುದು ಬಹಿರಂಗ ಆಗಲಿದೆ. 2024ರ ಜನವರಿಯಲ್ಲಿ ಶೂಟಿಂಗ್ ಆರಂಭ ಆಗಲಿದೆ. ನಿರ್ದೇಶಕ ಪುನೀತ್ ಶ್ರೀನಿವಾಸ್ ಅವರು ಚೊಚ್ಚಲ ಸಿನಿಮಾದಲ್ಲೇ ವಿಭಿನ್ನ ಕಾನ್ಸೆಪ್ಟ್ ಇರುವ ಕಥೆಯನ್ನು ಹೇಳಲಿದ್ದಾರೆ. ‘ಶ್ರೀ ಚೌಡೇಶ್ಬರಿ ಸಿನಿ ಕ್ರಿಯೇಶನ್ಸ್’ ಮೂಲಕ ಈ ಸಿನಿಮಾವನ್ನು ಎಲ್. ಮೋಹನ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.