ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಪಡೆದ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’

ಸೆನ್ಸಾರ್ ಪ್ರಕ್ರಿಯೆ ಮುಗಿಸಿಕೊಂಡಿರುವ ಕನ್ನಡದ ‘ಚಾರ್ಜ್‌ಶೀಟ್ 03-08’ ಸಿನಿಮಾ ಸದ್ಯದಲ್ಲೇ ರಿಲೀಸ್ ಆಗಲಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರದ ಸಿನಿಮಾ ಆಗಿದ್ದರೂ ಕೂಡ ಯಾವುದೇ ವಿಡಿಯೋ ಕಟ್ ಇಲ್ಲದೇ ‘ಯು/ಎ’ ಪ್ರಮಾಣಪತ್ರ ಪಡೆದುಕೊಂಡಿರುವುದು ವಿಶೇಷ. ಈ ಸಿನಿಮಾಗೆ ವೆಂಕಟ್ ಭಾರದ್ವಾಜ್ ಅವರು ನಿರ್ದೇಶನ ಮಾಡಿದ್ದಾರೆ.

ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಪಡೆದ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’
Chargesheet 03 08

Updated on: May 29, 2026 | 7:43 PM

ಕನ್ನಡದ ಬಹುನಿರೀಕ್ಷಿತ ಕ್ರೈಂ ಥ್ರಿಲ್ಲರ್ ಸಿನಿಮಾ ‘ಚಾರ್ಜ್‌ಶೀಟ್ 03-08’ (Chargesheet 03-08) ಈಗ ಸೆನ್ಸಾರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸೆನ್ಸಾರ್ ಮಂಡಳಿಯಿಂದ ಯಾವುದೇ ವಿಡಿಯೋ ಕಟ್ ಇಲ್ಲದೆ U/A ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಚಿತ್ರದ ನಿರೂಪಣೆ ಹಾಗೂ ಕಥೆಯ ನಿರ್ವಹಣೆಯನ್ನು ನೋಡಿ ಸೆನ್ಸಾರ್ ಮಂಡಳಿ (CBFC) ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ಚಿತ್ರತಂಡ ಹೇಳಿದೆ. ಯಾವುದೇ ಕಟ್ ಇಲ್ಲದೇ ಯು/ಎ ಪ್ರಮಾಣಪತ್ರ ಸಿಕ್ಕಿರುವುದರಿಂದ ಚಿತ್ರತಂಡಕ್ಕೆ ಸಂತಸ ಆಗಿದೆ.

‘ಎಂ.ಎಸ್ ಅರ್ಜುನ್ ಫಿಲ್ಮ್ಸ್’ ಬ್ಯಾನರ್ ಮೂಲಕ ನಿರ್ಮಾಣ ಆಗಿರುವ ಈ ಸಿನಿಮಾಗೆ ದಿನೇಶ್ ಮತ್ತು ಲಕ್ಷ್ಮಣ್ ಅವರು ನಿರ್ಮಾಪಕರು. ‘ಚಾರ್ಜ್‌ಶೀಟ್ 03-08’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಸಿಕ್ಕಿರುವ ಮೆಚ್ಚುಗೆ ಬಗ್ಗೆ ಅವರು ಅಪಾರ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಅಧಿಕೃತವಾಗಿ ‘ಕ್ರೈಂ ಥ್ರಿಲ್ಲರ್’ ಶೈಲಿಯ ಅಡಿಯಲ್ಲಿ ಪ್ರಮಾಣೀಕರಿಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಅವರ ಮೂಲ ಕಥಾಹಂದರವನ್ನು ಇಟ್ಟುಕೊಂಡು ಈ ಸಿನಿಮಾ ನಿರ್ಮಾಣ ಆಗಿದೆ. ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ವೆಂಕಟ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಅವರೇ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನೈಜವಾಗಿ ಸಾಗುವ ತನಿಖಾ ಶೈಲಿಯ ಕಥಾಹಂದರವು ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ಈ ತಂಡಕ್ಕಿದೆ.

ಅಲ್ಲದೇ, ಸಿನಿಮಾದ ಆಡಿಯೋ ಹಕ್ಕುಗಳನ್ನು ‘A2 ಮ್ಯೂಸಿಕ್’ ಸಂಸ್ಥೆ ಪಡೆದುಕೊಂಡಿರುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರದ ಪ್ರಚಾರ ಕಾರ್ಯಗಳನ್ನು ಈಗಾಗಲೇ ಆರಂಭಿಸಲಾಗಿದೆ. ಮೊದಲಿಗೆ ಟೀಸರ್, ನಂತರ 2 ಹಾಡುಗಳು ಮತ್ತು ಕೊನೆಯಲ್ಲಿ ಟ್ರೇಲರ್ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ರೂಪಿಸಿಕೊಂಡಿದೆ. ಚಿತ್ರದ ಪ್ರಚಾರವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ ವಿಶ್ವದ ಕನ್ನಡಿಗರಿಗೂ ತಲುಪಿಸುವ ಉದ್ದೇಶ ಇದೆ. ಚೆನ್ನೈ, ಮುಂಬೈ ಸೇರಿದಂತೆ ಭಾರತದ ಪ್ರಮುಖ ಮೆಟ್ರೋ ನಗರಗಳಲ್ಲಿಯೂ ಪ್ರಚಾರ ಮಾಡಲು ತಂಡ ಸಜ್ಜಾಗಿದೆ.

ಇದನ್ನೂ ಓದಿ: ಎಸ್.ಕೆ. ಉಮೇಶ್ ಬರೆದ ‘ಐ ವಿಟ್ನೆಸ್’ ಕೃತಿ ಆಧಾರಿತ ಸಿನಿಮಾ ‘ಚಾರ್ಜ್‌ಶೀಟ್ 03-08’

ಈ ಸಿನಿಮಾದಲ್ಲಿ ಸುಂದರ್ ರಾಜ್, ಹರ್ಷ್ ಅರ್ಜುನ್, ಅಮರ್, ಸತ್ಯಶ್ರೀ, ರೂಪೇಶ್, ಡಾ. ಸುಧಾಕರ್ ಶೆಟ್ಟಿ, ಡಾ. ಪ್ರಮೋದ್, ಚೇತನ ಖೋಟ್, ವೆಂಕಟ್ ಭಾರದ್ವಾಜ್ ಮುಂತಾದವರು ಈ ನಟಿಸಿದ್ದಾರೆ. ಸಮೀರ್ ಕುಲಕರ್ಣಿ ಅವರು ಸಂಗೀತ ಮತ್ತು ಹಿನ್ನೆಲೆ ಸಂಗೀತ ನೀಡಿದ್ದಾರೆ. ಪ್ರಮೋದ್ ಭಾರತೀಯ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಮೀಕ್ ವಿ. ಭರದ್ವಾಜ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us