ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇನ್ನು, ಅವರ ಪುತ್ರ ಜ್ಯೂ. ಚಿರು ಕೂಡ ಸ್ಟಾರ್ ಆಗಿದ್ದಾನೆ. ಆತನ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು (ಜೂ.20) ಅಪ್ಪಂದಿರ ದಿನಾಚರಣೆ ಸಲುವಾಗಿ ಚಿರಂಜೀವಿ ಸರ್ಜಾ ಪುತ್ರನ ಹೊಸ ವಿಡಿಯೋ ಪೋಸ್ಟ್ ಮಾಡಿದ್ದಾರೆ ಮೇಘನಾ.
ಚಿರಂಜೀವಿ ಪುತ್ರನಿಗೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಜೂ. ಚಿರು ಎಂದೇ ಕರೆಯಲಾಗುತ್ತಿದೆ. ಲಾಕ್ಡೌನ್, ಕೊರೊನಾ ಭೀತಿ ಕಾರಣದಿಂದ ಎಲ್ಲಿಯೂ ಸುತ್ತಾಡದೇ ಮನೆಯಲ್ಲಿ ಇರುವ ಜ್ಯೂ. ಚಿರು ಲ್ಯಾಪ್ಟಾಪ್ನಲ್ಲಿ ಸಿನಿಮಾ ಹಾಡುಗಳನ್ನು ಎಂಜಾಯ್ ಮಾಡುತ್ತಿದ್ದಾನೆ. ಅದರಲ್ಲೂ ಅಪ್ಪ ಚಿರಂಜೀವಿ ಸರ್ಜಾ ನಟನೆಯ ಹಾಡುಗಳೆಂದರೆ ಅವನಿಗೆ ಸಖತ್ ಇಷ್ಟ. ಪದೇಪದೇ ಅದೇ ಹಾಡುಗಳನ್ನು ರಿಪೀಟ್ ಮೋಡ್ನಲ್ಲಿ ನೋಡುತ್ತಿದ್ದಾನೆ. ಈ ವಿಡಿಯೋವನ್ನು ಮೇಘನಾ ರಾಜ್ ಈಗ ಶೇರ್ ಮಾಡಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಮತ್ತು ಅದಿತಿ ಪ್ರಭುದೇವ ಜೋಡಿಯಾಗಿ ‘ಸಿಂಗ’ ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದ ‘ವಾಟ್ ಎ ಬ್ಯೂಟಿಫುಲ್ ಹುಡುಗಿ ಶಿವ ಶಿವ..’ ಎಂದರೆ ಜ್ಯೂ. ಚಿರುಗೆ ಸಖತ್ ಇಷ್ಟ. ‘ಇದು ಪ್ಲ್ಯಾನ್ ಮಾಡಿ ಆಗಿರುವುದಲ್ಲ. ಈ ಕೀಬೋರ್ಡ್ ಎಂದರೆ ಅವನಿಗೆ ತುಂಬ ಕುತೂಹಲ. ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತ ಎಂದರೆ ಸರಿಯಾದ ಬಟನ್ ಪ್ರೆಸ್ ಮಾಡಿದ. ಆಗ ಅಪ್ಪನ ಸಿನಿಮಾದ ಫೇವರೀಟ್ ಸಾಂಗ್ ಬಂತು. ಮತ್ತೆ ಬೇಕು ಎಂದ. ನಾನು ಖುಷಿಯಿಂದ ಪದೇಪದೇ ಪ್ಲೇ ಮಾಡಿದೆ. ಹ್ಯಾಪಿ ಫಾದರ್ಸ್ ಡೇ’ ಎಂದು ಮೇಘನಾ ರಾಜ್ ಬರೆದುಕೊಂಡಿದ್ದಾರೆ.
ಸದ್ಯ ಈ ವಿಡಿಯೋ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅಭಿಮಾನಿಗಳ ಬಳಗದಲ್ಲಿ ವೈರಲ್ ಆಗುತ್ತಿದೆ. ಚಿರು ಹೃದಯಾಘಾತದಿಂದ ನಿಧನರಾಗಿ ಒಂದು ವರ್ಷ ಕಳೆದಿದೆ. ನಟನೆಯಿಂದ ಮೇಘನಾ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಅವರು ಆದಷ್ಟು ಬೇಗ ಕಮ್ಬ್ಯಾಕ್ ಮಾಡಲಿ. ಒಳ್ಳೆಯ ಪಾತ್ರ ಮತ್ತು ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.
ಇದನ್ನೂ ಓದಿ:
Meghana Raj: 2 ತಿಂಗಳ ಹಸುಗೂಸಿಗೆ ಕೊವಿಡ್ ಬಂದಾಗ ಎದುರಾಗಿದ್ದ ಭಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಮೇಘನಾ ರಾಜ್
Meghana Raj: ಮೇಘನಾ ರಾಜ್ ಜನ್ಮದಿನಕ್ಕೆ ವೈರಲ್ ಆಯ್ತು ಜ್ಯೂನಿಯರ್ ಚಿರು ವಿಡಿಯೋ