ನಟ ಪುನೀತ್ ರಾಜ್ಕುಮಾರ್ (Puneeth Rajkumar) ನಿಧನದ ನಂತರ ಅವರ ಅಭಿಮಾನಿಗಳಿಗೆ ಎಷ್ಟು ನೋವಾಯಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ತಮ್ಮ ನೆಚ್ಚಿನ ನಟ ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಫ್ಯಾನ್ಸ್ ಮನಸ್ಸು ಸಿದ್ಧವಿಲ್ಲ. ಅಪ್ಪು ಹೆಸರನ್ನು ಅಮರವಾಗಿಸಲು ಅನೇಕ ಕೆಲಸಗಳು ನಡೆಯುತ್ತಿವೆ. ಅದರ ನಡುವೆ ಕೆಲವು ಅಚಾತುರ್ಯ ನಡೆದಿರುವುದು ಬೇಸರದ ಸಂಗತಿ. ಪುನೀತ್ ರಾಜ್ಕುಮಾರ್ ಅವರ ಬ್ಯಾನರ್ ಹಾಕುವ ಸಲುವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ಆಗಿದೆ. ಯಲಹಂಕದ (Yelahanka) ಅರಕೆರೆ ಗ್ರಾಮ ಪಂಚಾಯಿತಿಯ ಭೈರಾಪುರದಲ್ಲಿ ಈ ಘಟನೆ ನಡೆದಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳು (Puneeth Rajkumar Fans) ಮತ್ತು ಗ್ರಾಮಸ್ಥರ ನಡುವೆ ಶುರುವಾದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಅಷ್ಟಕ್ಕೂ ಪುನೀತ್ ರಾಜ್ಕುಮಾರ್ ಅವರ ಬ್ಯಾನರ್ಗೆ ಗ್ರಾಮಸ್ಥರ ವಿರೋಧ ಯಾಕೆ? ಏನಿದು ಘಟನೆ? ಇಲ್ಲಿದೆ ಪೂರ್ತಿ ವಿವರ..
ಪುನೀತ್ ರಾಜ್ಕುಮಾರ್ ನಿಧನರಾಗಿ 6 ತಿಂಗಳಾಗುತ್ತಾ ಬಂತು. ಎಷ್ಟೇ ಸಮಯ ಕಳೆದರೂ ಅವರಿಲ್ಲ ಎಂಬ ನೋವು ಮರೆಯಾಗುವಂಥದ್ದಲ್ಲ. ನಟನೆ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳ ಮೂಲಕ ಪುನೀತ್ ಜನಮನ ಗೆದ್ದಿದ್ದರು. ಆ ಕಾರಣಕ್ಕಾಗಿ ಅವರನ್ನು ಜನರು ದೇವರಂತೆ ಪೂಜಿಸುತ್ತಾರೆ. ಅವರಿಗೆ ಸೂಕ್ತ ಗೌರವ, ನಮನ ಸಲ್ಲಿಸುವ ಸಲುವಾಗಿ ಅನೇಕ ಕಡೆಗಳಲ್ಲಿ ಪೋಸ್ಟರ್ಗಳನ್ನು ಹಾಕಲಾಗಿದೆ. ಅದೇ ರೀತಿ ಯಲಹಂಕದ ಅರಕೆರೆ ಗ್ರಾಮ ಪಂಚಾಯಿತಿಯ ಭೈರಾಪುರದಲ್ಲಿ ಕೂಡ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇರುವ ಪೋಸ್ಟರ್ ಹಾಕಲಾಗಿತ್ತು. ಆದರೆ ಅದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಬ್ಯಾನರ್ ಹಾಕಿರುವ ಕಾರಣ ಜನರಿಗೆ ಓಡಾಡಲು ತೊಂದರೆ ಆಗುತ್ತಿದೆ ಎಂದು ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಬ್ಯಾನರ್ ತೆಗೆಯಲು ಸಾಧ್ಯವಿಲ್ಲ ಎಂದು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಇದೇ ವಿಚಾರವಾಗಿ ಒಂದೇ ಊರಿನ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಭಾನುವಾರ (ಏ.17) ಏಕಾಏಕಿ ರಾಡ್ಗಳನ್ನು ಹಿಡಿದು ಕೈ ಕೈ ಮಿಲಾಯಿಸಿದ್ದಾರೆ. ಈ ಗಲಾಟೆ ತಾರಕಕ್ಕೇರಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪುನೀತ್ ರಾಜ್ಕುಮಾರ್ ಬ್ಯಾನರ್ ತೆರವುಗೊಳಿಸಿದ್ದಾರೆ. ಅಪ್ಪು ಬ್ಯಾನರ್ ಮತ್ತು ಪ್ರತಿಮೆ ಬೇಕು ಎಂದು ‘ಪವರ್ ಸ್ಟಾರ್’ ಫ್ಯಾನ್ಸ್ ಪಟ್ಟು ಹಿಡಿದ್ದಾರೆ.
ಅಪ್ಪು ಧ್ವನಿಯಲ್ಲಿ ಬರಲಿದೆ ‘ಜೇಮ್ಸ್’ ಸಿನಿಮಾ:
ಸಿನಿಮಾ ವಿಚಾರಕ್ಕೆ ಬರುವುದಾದರೆ ಅಪ್ಪು ಅಭಿಮಾನಿಗಳಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ‘ಜೇಮ್ಸ್’ ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. ಈ ಬಾರಿ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರ ಧ್ವನಿ ಇರಲಿದೆ ಎಂಬುದು ವಿಶೇಷ. ‘ಜೇಮ್ಸ್’ ಚಿತ್ರ 25 ದಿನ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಹಂಚಿಕೊಂಡಿದೆ. ಹೊಸ ತಂತ್ರಜ್ಞಾನ ಬಳಸಿ ಈ ಪ್ರಯತ್ನ ಮಾಡಲಾಗಿದೆ. ಏ.22ರಂದು ‘ಜೇಮ್ಸ್’ ಮರುಬಿಡುಗಡೆ ಆಗಲಿದೆ. ಪುನೀತ್ ರಾಜ್ಕುಮಾರ್ ಧ್ವನಿಯಲ್ಲೇ ಸಿನಿಮಾ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗುತ್ತಿದೆ. ಈ ಹಿಂದೆ ಅಪ್ಪು ಪಾತ್ರಕ್ಕೆ ಶಿವರಾಜ್ಕುಮಾರ್ ಅವರು ಧ್ವನಿ ನೀಡಿದ್ದರು. ಆದರೆ ಈಗ ಚಿತ್ರತಂಡ ವಿಭಿನ್ನ ಪ್ರಯತ್ನ ನಡೆಸಿ, ಅಭಿಮಾನಿಗಳಿಗಾಗಿ ಹೊಸ ರೂಪದಲ್ಲಿ ‘ಜೇಮ್ಸ್’ ಸಿನಿಮಾವನ್ನು ಮರು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ:
ಪುನೀತ್ ಮಾಡಬೇಕಿದ್ದ ಚಿತ್ರದಲ್ಲಿ ಯುವ ರಾಜ್ಕುಮಾರ್? ‘ಹೊಂಬಾಳೆ ಫಿಲ್ಮ್ಸ್’ ಬಗ್ಗೆ ಹಬ್ಬಿದೆ ಗುಸುಗುಸು
ಶಾಲೆಯ ಪರೀಕ್ಷೆಯಲ್ಲಿ ಪುನೀತ್ ಬಗ್ಗೆ ಪ್ರಶ್ನೆ; ಸಖತ್ ವೈರಲ್ ಆಗಿದೆ ಪ್ರಶ್ನೆಪತ್ರಿಕೆಯ ಫೋಟೋ