‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಟೈಟಲ್ ಸಾಂಗ್​ ಬಿಡುಗಡೆ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಹೆಚ್. ಮುನಿಯಪ್ಪ, ಕರ್ನಾಟಕ ರಾಜ್ಯ ಪಡಿತರ ಸಂಘದ ಅಧ್ಯಕ್ಷ ಕೃಷ್ಣಪ್ಪ ಮುಂತಾದವರು ಹಾಜರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಡು ಬಿಡುಗಡೆ ಮಾಡಿದರು. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಶೀರ್ಷಿಕೆ ಗೀತೆ ರಿಲೀಸ್ ಮಾಡಿದ ಸಿಎಂ ಸಿದ್ದರಾಮಯ್ಯ
Sarkari Nyaya Bele Angadi Movie Team

Updated on: Apr 19, 2026 | 11:19 AM

ಶೀರ್ಷಿಕೆಯ ಕಾರಣದಿಂದಲೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ ಈ ಚಿತ್ರ ಈಗ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿವೆ. ಇತ್ತೀಚೆಗೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟೈಟಲ್ ಸಾಂಗ್ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದರು. ‘ಸಿನಿಮಾ ಬಹಳ ಪ್ರಭಾವಶಾಲಿ ಮಾಧ್ಯಮ. ಸಿನಿಮಾಗಳ ಮೂಲಕ ವಾಸ್ತವ ವಿಷಯಗಳನ್ನು ಬಹಳ ಬೇಗ ಜನರಿಗೆ ತಲುಪಿಸಬಹುದು. ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ ವಾಸ್ತವ ಸ್ಥಿತಿಯನ್ನು ಕಥಾಹಂದರವಾಗಿ ಇಟ್ಟುಕೊಂಡು ತಯಾರಾಗಿರುವುದು ಶ್ಲಾಘನೀಯ’ ಎಂದು ಅವರು ಹೇಳಿದರು.

‘ಜನ ಸಾಮಾನ್ಯರು, ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸರ್ಕಾರಿ ನ್ಯಾಯಬೆಲೆ ಅಂಗಡಿಗಳ ಮೂಲಕ ದಿನಸಿ ಮತ್ತು ಆಹಾರವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಈ ವ್ಯವಸ್ಥೆಯಲ್ಲಿರುವ ಕೆಲವು ಲೋಪಗಳಿಂದ ಇದರ ಉದ್ದೇಶ ಪರಿಣಾಮಕಾರಿಯಾಗಿ ಈಡೇರುತ್ತಿಲ್ಲ. ಈಗ ಇದೇ ವಿಷಯವನ್ನು ಸಿನಿಮಾವಾಗಿಸಿದ ಚಿತ್ರತಂಡದಿಂದ ಜನ ಜಾಗೃತಿ ಮೂಡಲಿ’ ಎಂದು ಸಿದ್ದರಾಮಯ್ಯ ಹೇಳಿದರು.

ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ, ದೊಡ್ಡಣ್ಣ ಮುಂತಾದವರು ನಟಿಸಿರುವ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾ ‘ಜಯಶಂಕರ ಟಾಕೀಸ್‌’ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ತೇಜು ಮೂರ್ತಿ ಹಾಗೂ ಪದ್ಮಾವತಿ ಚಂದ್ರಶೇಖರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅನಂತ್‌ ಆರ್ಯನ್‌ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ, ವರಲಕ್ಷ್ಮೀ ‘ಪೊಲೀಸ್ ಕಂಪ್ಲೈಂಟ್’: ಸಾಕ್ಷಿಯಾದ ಹಿರಿಯ ನಟಿ ಪ್ರೇಮಾ

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾಗೆ ಬಿ. ರಾಮಮೂರ್ತಿ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಸಾತ್ವಿಕ್‌ ಪವನ್‌ ಕುಮಾರ್‌ ಅವರು ಛಾಯಾಗ್ರಹಣ ಹಾಗೂ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 52 ದಿನಗಳ ಕಾಲ ಮಂಡ್ಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us