‘ಹೈದರಾಬಾದ್ನಲ್ಲಿ ಫಿಲಂ ಸಿಟಿ ಇದೆ, ಚೆನ್ನೈನಲ್ಲಿ ಫಿಲಂ ಸಿಟಿ ಇದೆ. ಕರ್ನಾಟಕದಲ್ಲಿ ಫಿಲಂ ಸಿಟಿ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಫಿಲಂ ಸಿಟಿ ಒಂದನ್ನು ನಿರ್ಮಾಣ ಮಾಡಬೇಕು ಎಂಬುದು ಡಾ ರಾಜ್ಕುಮಾರ್ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡಿಯೇ ಮಾಡುತ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನಲ್ಲಿ ನಡೆದ ನಿರ್ಮಾಪಕ ಸಂಘದ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಫಿಲಂ ಸಿಟಿ ನಿರ್ಮಾಣ ವಿಷಯವನ್ನು ಸಿಎಂ ಹೇಳಿದರು.
‘ಫಿಲಂ ಸಿಟಿಗೆ ಮೈಸೂರಿನ ಹಿಮ್ಮಾವು ಬಳಿ ಸುಮಾರು 100 ಎಕರೆಗೆ ಹೆಚ್ಚು ಜಾಗವನ್ನು ನಾವು ಕೊಟ್ಟಿದ್ದೇವೆ. ಈ ಹಿಂದಿನ ಬಿಜೆಪಿ ಸರ್ಕಾರ, ಅಲ್ಲಿ ಫಿಲಂ ಸಿಟಿ ನಿರ್ಮಿಸುವ ಕಾರ್ಯವನ್ನು ಮಾಡಲಿಲ್ಲ. ಅದೇಕೋ ನನಗೆ ಗೊತ್ತಿಲ್ಲ ಆದರೆ ನಾವು ಆ ಕಾರ್ಯವನ್ನು ಮಾಡಿಯೇ ಮಾಡುತ್ತೇವೆ. ಈ ಕಾರ್ಯವು ಖಾಸಗಿ ಮತ್ತು ಪಿಪಿಪಿ ಮಾಡೆಲ್ನಲ್ಲಿ ಆಗಬೇಕಾದ ಕಾರ್ಯ. ಕನ್ನಡ ಭಾಷೆಯ ಒಳ್ಳೆಯ ಸಿನಿಮಾಗಳಿಗೆ ನಮ್ಮ ಸರ್ಕಾರದ ಬೆಂಬಲ ಸದಾ ಇದ್ದೇ ಇರುತ್ತದೆ’ ಎಂದಿದ್ದಾರೆ.
ಅಲ್ಲದೆ, ಕರ್ನಾಟಕ ರಾಜ್ಯ ಸರ್ಕಾರವು ತನ್ನದೇ ಆದ ಒಟಿಟಿ ವೇದಿಕೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆಯೂ ಸಹ ಕೇಳಿ ಬಂತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದು ಹೊಸ ಬೇಡಿಕೆ. ಈ ಬಗ್ಗೆ ನಮ್ಮ ಗಮನಕ್ಕೆ ಇನ್ನೂ ಬಂದಿಲ್ಲ ಆದರೆ ಪರಿಶೀಲನೆ ನಡೆಸಿ ಈ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.
ಇದನ್ನೂ ಓದಿ:ರಾಜ್ಯದಲ್ಲಿ ಚಿತ್ರಮಂದಿರಗಳ ಬಂದ್ ಬಗ್ಗೆ ನಿರ್ಧಾರ ಪ್ರಕಟಿಸಿದ ಫಿಲಂ ಚೇಂಬರ್
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ನಾನು ನಿನ್ನೆ ದೆಹಲಿನಲ್ಲಿ ಇದ್ದೆ, ರಾತ್ರಿ 8 ಘಂಟಗೆ ಪ್ರಧಾನ ಮಂತ್ರಿ ಸಮಯ ಕೊಟ್ಟರು. 9.45 ವರೆಗೆ ಬೆಂಗಳೂರಿನ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಿದೆವು, ರಾತ್ರಿ ಅಲ್ಲೇ ಉಳಿಯುವ ಯೋಜನೆ ಇತ್ತು, ಆದರೆ ರಾತ್ರಿ ತಡವಾದರೂ ಸಹ ಬಂದು ಉದ್ಘಾಟನೆ ಮಾಡುವ ಅವಕಾಶ ದೊರೆತಿದೆ. ಚಿತ್ರರಂಗದ ಮೇಲೆ ನನಗಿರುವ ಗೌರವ ಹಾಗೂ ಪ್ರೀತಿಯ ಕಾರಣಕ್ಕೆ ನಾನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದುಕೊಂಡು ರಾತ್ರಿಯೇ ಹೊರಟು ಬಂದೆ’ ಎಂದರು. ನಿರ್ಮಾಪಕರ ಸಂಘದ ಬಗ್ಗೆ ಮಾತನಾಡುತ್ತಾ, 1982 ನೇ ಪ್ರಾರಂಭ ಆಗಿದ್ದ ಸಂಘ ಇದು, ಕನ್ನಡ ಚಲನಚಿತ್ರ ಬೆಳಿಯಲಿ, ನಿರ್ಮಾಪಕರಿಗೆ ಸದಾ ಲಾಭವೇ ಆಗಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.
ಕನ್ನಡ ಚಿತ್ರರಂಗದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ, ‘ವಾಣಿಜ್ಯ ಮಂಡಳಿಬ ಸಭೆ ಕರೆದು, ಆ ಸಭೆಯಲ್ಲಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸುವೆ. ಸಿನಿಮಾ ಸಬ್ಸಿಡಿ ಮತ್ತು ಚಲನಚಿತ್ರ ಪ್ರಶಸ್ತಿ ಕೂಡಲೇ ಆದಷ್ಟು ಬೇಗ ಬಿಡುಗಡೆಗೊಳ್ಳುವಂತೆ ಮಾಡುವ. ಇನ್ನು ಮುಂದೆ ಪ್ರತಿವರ್ಷ ಆಯಾ ವರ್ಷವೇ ಪ್ರಶಸ್ತಿ ವಿತರಣೆ ಮಾಡುವಂತೆ ಮಾಡುವ ಕೆಲಸ ಮಾಡಬೇಕಿದೆ. ಬೇರೆ ಏನೇ ಸಮಸ್ಯೆಗಳಿದ್ದರೂ ಸಭೆಯಲ್ಲಿ ಕೂತು ಚರ್ಚಿಸಿ ಬಗೆಹರಿಸಿಕೊಳ್ಳೋಣ. ಒಂದು ಭಾನುವಾರ 11 ಘಂಟೆಗೆ ಸೇರಿ 1 ಘಂಟೆಗೆ ಸಭೆ ಮುಗಿಸೋಣ’ ಎಂದರು ಸಿದ್ದರಾಮಯ್ಯ.
ನಿರ್ಮಾಪಕ ಸಂಘದ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ಜಗ್ಗೇಶ್, ನಿರ್ಮಾಪಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಫಿಲಂ ಚೇಂಬರ್ ಅಧ್ಯಕ್ಷ, ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ