ಅಭಿಜಿತ್ ನಟನೆಯ ‘ಅಡವಿಕಟ್ಟೆ’ ಸಿನಿಮಾದ ಟ್ರೇಲರ್ ನೋಡಿ ಡಿಕೆ ಸುರೇಶ್ ಹೇಳಿದ್ದೇನು?
ಡಿ.ಕೆ. ಸುರೇಶ್ ಅವರು ಕನ್ನಡದ ‘ಅಡವಿಕಟ್ಟೆ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಕಥಾಹಂದರ ಇರುವ ಈ ಸಿನಿಮಾದಲ್ಲಿ ಅಭಿಜಿತ್, ನಾಗರಾಜು ಮುಂತಾದವರು ನಟಿಸಿದ್ದಾರೆ. ಟ್ರೇಲರ್ ನೋಡಿ ಡಿ.ಕೆ. ಸುರೇಶ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಟ್ರೇಲರ್ ಅನಾವರಣ ಮಾಡಿದ ಅವರಿಗೆ ಅಭಿಜಿತ್ ಅವರು ಧನ್ಯವಾದ ಅರ್ಪಿಸಿದರು.
ಕನ್ನಡ ಚಿತ್ರರಂಗದ ಅನುಭವಿ ಕಲಾವಿದ ಅಭಿಜಿತ್ ಹಾಗೂ ಹೊಸ ನಟ ನಾಗರಾಜು ಅವರು ‘ಅಡವಿಕಟ್ಟೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕಾಂಗ್ರೆಸ್ ಮುಖಂಡ ಡಿ.ಕೆ. ಸುರೇಶ್ ಅವರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಟ್ರೇಲರ್ ನೋಡಿದ ಅವರು ಸಿನಿಮಾ ತಂಡದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಉಮಾ ಎಸ್. ಅವರು ‘ಅಡವಿಕಟ್ಟೆ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂಜೀವ್ ಗಾವಂಡಿ ಅವರು ನಿರ್ದೇಶನ ಮಾಡಿದ್ದಾರೆ.
‘ಅಡವಿಕಟ್ಟೆ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಕೂಡ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಬರಲಿಲ್ಲ. ಅವರ ಪರವಾಗಿ ಟ್ರೇಲರ್ ಬಿಡುಗಡೆ ಮಾಡಿದ ಡಿ.ಕೆ. ಸುರೇಶ್ ಅವರು ತಮ್ಮ ಅನಿಸಿಕೆ ತಿಳಿಸಿದರು. ‘ಚಿತ್ರರಂಗದಲ್ಲಿ ಹೊಸ ಪ್ರಯತ್ನಗಳು ಆಗುತ್ತಲೇ ಇರುತ್ತವೆ. ಅಡವಿಕಟ್ಟೆ ತಂಡದವರು ಕೂಡ ಹೊಸತನದ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾದ ಕಥೆ ಸಸ್ಪೆನ್ಸ್ ಆಗಿದೆ. ಟ್ರೇಲರ್ ನೋಡಿದಾಗ ಹಳ್ಳಿಯ ಜೀವನ, ಯುವಕರ ಮಾನಸಿಕ ಒತ್ತಡ, ಅಡವಿಯಲ್ಲಿ ನಡೆಯುವ ಘಟನೆಗಳು ಈ ಸಿನಿಮಾದಲ್ಲಿ ಇದೆ ಅಂತ ನಾನು ಭಾವಿಸಿದ್ದೇನೆ. ಈ ಸಿನಿಮಾ ತಂಡಕ್ಕೆ ಯಶಸ್ಸು ಸಿಗಲಿ’ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.
‘ಅಭಿಜಿತ್ ಅವರ ನಾಯಕತ್ವದಲ್ಲಿ ಈ ಸಿನಿಮಾ ಮೂಡಿಬಂದಿದೆ. ಹೊಸ ನಟ ನಾಗರಾಜ್ ಅವರು ನಮ್ಮ ಊರಿನವರು. ಅವರು ಹೊಸ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಯಾವುದೂ ಅಸಾಧ್ಯ ಎಂಬುದು ಇಲ್ಲ. ಹೊಸ ಪ್ರಯತ್ನಕ್ಕೆ ಯಶಸ್ಸು ಸಿಗುತ್ತದೆ. ಕನ್ನಡಿಗರು ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಬೇಕು. ಕನ್ನಡ ಉಳಿಯಬೇಕು. ಕನ್ನಡ ಚಿತ್ರರಂಗ ಉಳಿಯಬೇಕು. ಹೆಚ್ಚು ಹೆಚ್ಚು ಹೊಸ ಸಿನಿಮಾಗಳು ಬರಬೇಕು. ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಅದು ಮುಂದುವರಿಯಲಿ’ ಎಂದರು ಡಿ.ಕೆ. ಸುರೇಶ್.
ಇದನ್ನೂ ಓದಿ: ನೀವು ಮಠಕ್ಕೆ ಕಾಲಿಡಬೇಡಿ: ಡಿಕೆ ಶಿವಕುಮಾರ್ಗೆ ಪ್ರಣವಾನಂದ ಸ್ವಾಮೀಜಿ ಹೀಗೆ ಹೇಳಿದ್ಯಾಕೆ?
ಟ್ರೇಲರ್ ಬಿಡುಗಡೆ ಮಾಡಿದ ಡಿ.ಕೆ. ಸುರೇಶ್ ಅವರಿಗೆ ನಟ ಅಭಿಜಿತ್ ಅವರು ಧನ್ಯವಾದ ತಿಳಿಸಿದರು. ‘ಈ ಸಿನಿಮಾದಲ್ಲಿ ನನಗೆ ವಿಶೇಷವಾದ ಪಾತ್ರ ಇದೆ. ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ನನ್ನ ಪಾತ್ರ ಇಷ್ಟ ಆಗುತ್ತದೆ. ಈ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದು ಅವರು ಹೇಳಿದರು. ನಟ ನಾಗರಾಜು ಮಾತನಾಡಿ, ‘ನಾನು ಕನಕಪುರ ಬಳಿಯ ಹಳ್ಳಿಯಿಂದ, ಬಡ ಕುಟುಂಬದಿಂದ ಬಂದವನು. ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಆಸೆ ಆಗಿತ್ತು. ಈಗ ಅದು ನನಸಾಗಿದೆ’ ಎಂದರು.
‘ಅಡವಿಕಟ್ಟೆ’ ಸಿನಿಮಾ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡಕ್ಕೆ ನಿರ್ಮಾಪಕಿ ಉಮಾ ಅವರು ಧನ್ಯವಾದ ತಿಳಿಸಿದರು. ನಟಿಯರಾದ ಶಾಂತಿ, ಮಂಜುಳಾ ಮತ್ತು ವಿತರಕ ಶ್ರೀಧರ್ ಕೂಡ ಸಿನಿಮಾ ಕುರಿತು ಮಾತನಾಡಿದರು. ‘ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ. ಜೊತೆಗೆ ಹಾರರ್ ಕೂಡ ಇದೆ. ಈ ಸಿನಿಮಾ ಭಿನ್ನವಾಗಿದೆ. ಶೀರ್ಷಿಕೆಯೇ ಹೇಳುವಂತೆ, ಅಡವಿ ಅಂದರೆ ಕಾಡಿನಲ್ಲಿ ನಡೆಯುವ ಕಹಾನಿ ಇದರಲ್ಲಿ ಇದೆ. ಗೋಕಾಕ್ ಸುತ್ತಮುತ್ತ ಶೂಟಿಂಗ್ ಮಾಡಿದ್ದೇವೆ. ಸದ್ಯದಲ್ಲೇ ಸಿನಿಮಾ ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕ ಸಂಜೀವ್ ಗಾವಂಡಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.