ಉಪೇಂದ್ರಗೆ ಉಪೇಂದ್ರ ಇಂದಲೇ ಪೈಪೊಟಿ, ಒಂದೇ ದಿನ ಎರಡು ಸಿನಿಮಾ
Upendra movies: ಉಪೇಂದ್ರ ಅಭಿಮಾನಿಗಳಿಗೆ ಖುಷಿ ಸುದ್ದಿ ಇದೆ. ಉಪೇಂದ್ರ ನಟಿಸಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿವೆ. ಎರಡೂ ಸಿನಿಮಾಗಳು ಬಹುತಾರಾಗಣದ ಸಿನಿಮಾಗಳಾಗಿದ್ದು, ಎರಡೂ ಸಿನಿಮಾಗಳು ಸಿನಿಮಾ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳು ಸಹ ಆಗಿವೆ. ಯಾವುವು ಆ ಸಿನಿಮಾಗಳು, ಬಿಡುಗಡೆ ದಿನಾಂಕ ಏನು? ಇಲ್ಲಿದೆ ಮಾಹಿತಿ...

ಸ್ಟಾರ್ ನಟ ಉಪೇಂದ್ರ (Upendra) ಅವರ ಹಿಂದಿನ ಎರಡು ಸಿನಿಮಾಗಳಾದ ‘ಕಬ್ಜ’ ಮತ್ತು ‘ಯುಐ’ ಒಳ್ಳೆಯ ಗಳಿಕೆಯನ್ನೇ ಮಾಡಿವೆ. ಉಪೇಂದ್ರ ಅವರು ನಟಿಸಿ, ನಿರ್ದೇಶನ ಮಾಡಿದ್ದ ‘ಯುಐ’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಅದಾದ ಬಳಿಕ ಉಪೇಂದ್ರ ಅವರ ಯಾವ ಸಿನಿಮಾವೂ ಬಿಡುಗಡೆ ಆಗಿರಲಿಲ್ಲ. ಉಪೇಂದ್ರ ಸಾಮಾನ್ಯವಾಗಿ ಸಿನಿಮಾಗಳಿಗೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಆದರೆ ಈ ಬಾರಿ ಆರು ತಿಂಗಳಿಗೂ ಹೆಚ್ಚು ಸಮಯವಾಗಿದೆ ಅವರ ಸಿನಿಮಾ ಬಿಡುಗಡೆ ಆಗಿ. ಆದರೆ ಇದೀಗ ಉಪೇಂದ್ರ ನಟನೆಯ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿವೆ.
ಉಪೇಂದ್ರ ನಟನೆಯ ಎರಡು ದೊಡ್ಡ ಬಜೆಟ್ನ ಮತ್ತು ಬಲು ನಿರೀಕ್ಷೆ ಹುಟ್ಟಿಸಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಲಿಕ್ಕಿದ್ದು, ಉಪೇಂದ್ರ ಅವರಿಗೆ ಉಪೇಂದ್ರ ಅವರೇ ಸ್ಪರ್ಧೆ ಒಡ್ಡುವಂತಾಗಿದೆ. ಉಪೇಂದ್ರ ನಟನೆಯ ‘45’ ಸಿನಿಮಾ ಹಾಗೂ ಉಪೇಂದ್ರ ನಟನೆಯ ತಮಿಳು ಪ್ಯಾನ್ ಇಂಡಿಯಾ ಸಿನಿಮಾ ‘ಕೂಲಿ’ ಒಂದೇ ದಿನ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳು ಆಗಸ್ಟ್ 15 ರಂದು ಬಿಡುಗಡೆ ಆಗಲಿದ್ದು, ಉಪೇಂದ್ರ ಅಭಿಮಾನಿಗಳು ಆಗಸ್ಟ್ 15ರ ಲಾಂಗ್ ವೀಕೆಂಡ್ನಲ್ಲಿ ತಮ್ಮ ಮೆಚ್ಚಿನ ನಟನ ಎರಡೆರಡು ಸಿನಿಮಾಗಳನ್ನು ನೋಡಬಹುದಾಗಿದೆ.
ಇದನ್ನೂ ಓದಿ:ಸದ್ದಿಲ್ಲದೆ ಶುರುವಾಯ್ತು ಉಪೇಂದ್ರ ಹೊಸ ಸಿನಿಮಾ, ಹೆಸರೇನು?
ವಿಶೇಷವೆಂದರೆ ಒಂದೇ ದಿನ ಬಿಡುಗಡೆ ಆಗುತ್ತಿರುವ ಎರಡೂ ಸಿನಿಮಾಗಳು ಬಹುತಾರಾಗಣದ ಸಿನಿಮಾಗಳಾಗಿವೆ. ‘45’ ಸಿನಿಮಾನಲ್ಲಿ ಉಪೇಂದ್ರ ಅವರು ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ‘ಕೂಲಿ’ ಸಿನಿಮಾನಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ನಾಯಕ. ಅವರ ಜೊತೆಗೆ ಅಕ್ಕಿನೇನಿ ನಾಗಾರ್ಜುನ ಮತ್ತು ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಸಹ ಇದ್ದಾರೆ. ಎರಡೂ ಸಿನಿಮಾಗಳು ಭಾರಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಾಗಿವೆ.
‘45’ ಸಿನಿಮಾ ಅನ್ನು ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಅವರ ಪಾಲಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡೇ ಈ ಸಿನಿಮಾ ಮಾಡಿರುವುದಾಗಿ ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಇನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾದ ಚಿತ್ರೀಕರಣವೂ ಪೂರ್ಣಗೊಂಡಿದ್ದು, ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಬಹುತೇಕ ಪೂರ್ಣವಾಗಿದೆಯಂತೆ. ಎರಡೂ ಸಿನಿಮಾಗಳ ಪ್ರಚಾರ ಕಾರ್ಯಗಳು ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:53 am, Thu, 17 July 25




