ಬೆಂಗಳೂರು: ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಅವರ ಆರೋಗ್ಯ ಗಂಭೀರವಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ದುನಿಯಾ ವಿಜಯ್ ಕಳೆದ 20 ದಿನಗಳಿಂದ ಮನೆಯಲ್ಲೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕೊವಿಡ್ನಿಂದ ದುನಿಯಾ ವಿಜಯ್ ಪೋಷಕರು ಚೇತರಿಸಿಕೊಂಡಿದ್ದರು. ಇನ್ನೇನು ಸಮಸ್ಯೆ ಬಗೆಹರಿಯಿತು ಎನ್ನುತ್ತಿರುವಾಗಲೇ ಮತ್ತೆ ತಾಯಿಯ ಆರೋಗ್ಯ ಹದಗೆಟ್ಟಿದೆ. ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪ್ರತಿದಿನ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಅಮ್ಮನಿಗೆ ಆಸ್ಪತ್ರೆಗೆ ಹೋಗಲು ಇಷ್ಟವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ತಾಯಿ ಮತ್ತೆ ಸಿಗಲ್ಲ, ಅವರು ಇರುವವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋದಷ್ಟೇ ನನ್ನ ಆಸೆ. ಪ್ರತಿದಿನ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆದರೆ ಮತ್ತೆ ಆರೋಗ್ಯ ಸರಿಯಾಗುತ್ತೆ ಎಂಬ ವಿಶ್ವಾಸವಿದೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ದುನಿಯಾ ವಿಜಯ್ ತಂದೆ-ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ವೇಳೆ ವೈದರ ಸಲಹೆ ಮೇರೆಗೆ ಮನೆಯಲ್ಲಿಯೇ ಆರೈಕೆ ಮಾಡಿದ್ದರು. ವಯಸ್ಸಾದ ಪೋಷಕರಿಗೆ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ಭಯಪಡದೆ ಮಗನಾಗಿ ಅವರಿಗೆ ಆರೈಕೆ ಮಾಡಿ ಕೊರೊನಾ ಓಡಿಸುವಲ್ಲಿ ಯಶಸ್ವಿಯಾಗಿದ್ದರು. 80 ವರ್ಷದ ತಂದೆ ರುದ್ರಪ್ಪ ಹಾಗೂ 76 ವರ್ಷದ ತಾಯಿ ನಾರಾಯಣಮ್ಮ ಕೊರೊನಾ ಗೆದ್ದು ಗುಣಮುಖರಾಗಿದ್ದರು. ಈ ಸಮಯದಲ್ಲಿ ದುನಿಯಾ ವಿಜಯ್ ಪೋಷಕರನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೈಕೆ ವಿಡಿಯೋ ಶೇರ್ ಮಾಡಿದ್ದರು. ಆದ್ರೆ ಈಗ ಮತ್ತೆ ವಿಜಯ್ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ.
ಇದನ್ನೂ ಓದಿ: ಕೊರೊನಾ ಗೆದ್ದ ದುನಿಯಾ ವಿಜಯ್ ಪೋಷಕರು, ಸ್ಫೂರ್ತಿದಾಯಕ ಸಂದೇಶದ ವಿಡಿಯೋ ಹಂಚಿಕೊಂಡ ನಟ