‘ಈಗ’, ‘ಹುಚ್ಚ’; ಸುದೀಪ್ ಜೀವನದಲ್ಲಿ ಮರೆಯಲಾಗದ ಈ 2 ಸಿನಿಮಾಗಳಿಗೆ ಸ್ಪೆಷಲ್ ದಿನವಿದು
20 Years of Huchcha: ಸುದೀಪ್ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. ‘ಈಗ’ ಸಿನಿಮಾ ರಿಲೀಸ್ ಆಗಿ 9 ವಸಂತ ಸಾಗಿದೆ.
ಕಿಚ್ಚ ಸುದೀಪ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಈ ದೊಡ್ಡ ಪ್ರಯಾಣದಲ್ಲಿ ಅವರು ಕಂಡ ಏಳು-ಬೀಳು ಹಲವು. ಸೋಲು-ಗೆಲುವು ಏನೇ ಇದ್ದರೂ ಪ್ರೀತಿಯಿಂದ ಸಿನಿಮಾ ಮಾಡುವ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಸಿನಿಪ್ರಿಯರ ಹೃದಯದಲ್ಲಿ ಕಿಚ್ಚನಿಗೆ ಸ್ಥಾನವಿದೆ. ಈ 25 ವರ್ಷಗಳ ಸಿನಿಪಯಣದಲ್ಲಿ ಸುದೀಪ್ ಪಾಲಿನ ಕೆಲವು ಸ್ಪೆಷಲ್ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಹುಚ್ಚ’ ಮತ್ತು ತೆಲುಗಿನ ‘ಈಗ’ ಚಿತ್ರಗಳಿಗೂ ಸ್ಥಾನವಿದೆ. ಈ ಎರಡೂ ಸಿನಿಮಾಗಳನ್ನು ಇಂದು (ಜು.6) ಸುದೀಪ್ ನೆನಪಿಸಿಕೊಂಡಿದ್ದಾರೆ.
ಸುದೀಪ್ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಹುಚ್ಚ ರಿಲೀಸ್ ಆಗಿತ್ತು. ಡಿಫರೆಂಟ್ ಆದ ಶೀರ್ಷಿಕೆ, ಪೋಸ್ಟರ್ಗಳಲ್ಲಿ ಕಾಣಿಸಿಕೊಂಡ ಸುದೀಪ್ ಅವರ ಡಿಫರೆಂಟ್ ಗೆಟಪ್ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್ ರಾಮ್ನಾಥ್ ಅವರ ಸುಮಧುರ ಹಾಡುಗಳು. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಆಗಲಿಲ್ಲ.
ಅದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್ ಅವರು ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಬಿಡುಗಡೆಯಾಗಿ ಜಯಭೇರಿ ಬಾರಿಸಿತು. ‘ಈಗ’ ರಿಲೀಸ್ ಆಗಿದ್ದು ಕೂಡ ಜು.6ರಂದು. ಹಾಗಾಗಿ ಕಿಚ್ಚ ಸುದೀಪ್ ಪಾಲಿಗೆ ಈ ದಿನಾಂಕ ತುಂಬಾ ಸ್ಪೆಷಲ್.
ಈ ಎರಡೂ ಸಿನಿಮಾಗಳನ್ನು ಕಿಚ್ಚ ಸುದೀಪ್ ಈಗ ಮೆಲುಕು ಹಾಕಿದ್ದಾರೆ. ‘ಒಂದೇ ದಿನಾಂಕದಲ್ಲಿ ಎರಡು ಅವಿಸ್ಮರಣೀಯ ಸಿನಿಮಾಗಳು. ರೆಹಮಾನ್ ಸರ್, ಓಂ ಪ್ರಕಾಶ್ ರಾವ್, ಸಾಯಿ ಅವರು ಮತ್ತು ರಾಜಮೌಳಿ ಸರ್ಗೆ ಧನ್ಯವಾದಗಳು’ ಎಂದು ‘ಹುಚ್ಚ’ ಮತ್ತು ‘ಈಗ’ ಸಿನಿಮಾಗಳ ನಿರ್ಮಾಪಕ-ನಿರ್ದೇಶಕರಿಗೆ ಸುದೀಪ್ ಕೃತಜ್ಞತೆ ಸಲ್ಲಿಸಿದ್ದಾರೆ.
Two unforgettable movies on th same day,,,,within a span of 11 years. Many thanks to Rehman Sir and OmPrakash,,, Sai garu and @ssrajamouli Sir Luv to you all frnzzzz ??♥️? pic.twitter.com/5wYTYUBNXe
— Kichcha Sudeepa (@KicchaSudeep) July 6, 2021
ತಮಿಳಿನ ‘ಸೇತು’ ಸಿನಿಮಾದ ಕನ್ನಡ ರಿಮೇಕ್ ಆಗಿ ‘ಹುಚ್ಚ’ ಚಿತ್ರ ಮೂಡಿಬಂದಿತ್ತು. ಅದರಲ್ಲಿ ಸುದೀಪ್ಗೆ ಜೋಡಿಯಾಗಿ ರೇಖಾ ನಟಿಸಿದ್ದರು. ‘ಈಗ’ ಸಿನಿಮಾದಲ್ಲಿ ನಾನಿ ಮತ್ತು ಸಮಂತಾ ಅಕ್ಕಿನೇನಿ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದರು.
ಇದನ್ನೂ ಓದಿ:
ಸುದೀಪ್ಗೆ ಅಚ್ಚರಿ ಮೂಡಿಸಿದ ‘ವಿಕ್ರಾಂತ್ ರೋಣ’ ಪೋಸ್ಟರ್; ಚಿತ್ರತಂಡಕ್ಕೂ ಇದಕ್ಕೂ ಸಂಬಂಧವಿಲ್ಲ
Kichcha sudeep: ಅಮೆರಿಕಾ ಅಮೆರಿಕಾ ಸಿನಿಮಾ ಕಿಚ್ಚ ಸುದೀಪ್ ಕೈ ತಪ್ಪಿದ್ದೇಕೆ?