ಸುದೀಪ್ ವಿರುದ್ಧ ಹೇಳಿಕೆ ನೀಡಿದ್ದ ನಿರ್ಮಾಪಕರಿಗೆ ಸಂಕಷ್ಟ: ಸಮನ್ಸ್ ಜಾರಿ
Kichcha Sudeep: ಕಿಚ್ಚ ಸುದೀಪ್ ವಿರುದ್ಧ ವಂಚನೆ ಆರೋಪ ಮಾಡಿದ್ದ ನಿರ್ಮಾಪಕರುಗಳಿಗೆ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿದೆ.
ತಮ್ಮ ವಿರುದ್ಧ ವಂಚನೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಸುದೀಪ್ (Sudeep) ಕೋರ್ಟ್ (Court) ಮೆಟ್ಟಿಲೇರಿದ್ದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅದರ ಬೆನ್ನಲ್ಲೆ ಎರಡು ದಿನಗಳ ಹಿಂದೆ ನಿರ್ಮಾಪಕರ ವಿರುದ್ಧ ಹೇಳಿಕೆಯನ್ನೂ ಸುದೀಪ್ ದಾಖಲಿಸಿದ್ದರು. ಇದೀಗ ನ್ಯಾಯಾಲಯವು ಸುದೀಪ್ ವಿರುದ್ಧ ಮಾನಹಾನಕಾರಿ ಹೇಳಿಕೆ ನೀಡಿದ್ದ ಇಬ್ಬರು ನಿರ್ಮಾಪಕರಿಗೆ (Producer) ಸಮನ್ಸ್ (Summon) ಜಾರಿ ಮಾಡಿದೆ.
ಬೆಂಗಳೂರಿನ 13ನೇ ಎಸಿಎಂಎಂ ಕೋರ್ಟ್ ನಿರ್ಮಾಪಕರಾದ ಎಂಎನ್ ಕುಮಾರ್ ಹಾಗೂ ಸುರೇಶ್ ಅವರುಗಳಿಗೆ ಸಮನ್ಸ್ ಜಾರಿ ಮಾಡಿದೆ. ಪ್ರಕರಣ ಕುರಿತಾಗಿ ಆಗಸ್ಟ್ 10ರಂದು ಸುದೀಪ್ ಅವರಿಂದ ಸ್ವಯಂ ಹೇಳಿಕೆಯನ್ನು ದಾಖಲು ಮಾಡಿದ್ದರು. ಹೇಳಿಕೆ ದಾಖಲು ಮಾಡಿಕೊಂಡಿದ್ದ ನ್ಯಾಯಾಧೀಶ ವೆಂಕಣ್ಣ ಬಸಪ್ಪ ಹೊಸಮನಿ, ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲು ಸೂಚಿಸಿದ್ದು ಆಗಸ್ಟ್ 26ರ ಒಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಸಿನಿಮಾದಲ್ಲಿ ನಟಿಸುವುದಾಗಿ ಹೇಳಿ ಏಳೆಂಟು ವರ್ಷಗಳ ಹಿಂದೆ ನಟ ಸುದೀಪ್ ತಮ್ಮಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದು ಸಿನಿಮಾಕ್ಕೆ ಡೇಟ್ ನೀಡಿಲ್ಲ ಮಾತ್ರವಲ್ಲದೆ ಹಣವನ್ನೂ ವಾಪಸ್ ನೀಡಿಲ್ಲ ಎಂದು ನಿರ್ಮಾಪಕ ಕುಮಾರ್ ಆರೋಪಿಸಿದ್ದರು. ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸಿದಾಗ ನಿರ್ಮಾಪಕ ಸುರೇಶ್ ಸಹ ಅವರೊಟ್ಟಿಗಿದ್ದರು. ಏಳೆಂಟು ವರ್ಷಗಳ ಹಿಂದೆಯೇ ಸುದೀಪ್ಗೆ ತಾವು 45 ಲಕ್ಷ ಹಣ ನೀಡಿದ್ದಾಗಿ ಹೇಳಿದ್ದರು. ಬೇರೆ ಸಿನಿಮಾಗಳ ನಿರ್ಮಾಣ ಮಾಡಲು ಸಹ ಸುದೀಪ್ ಅಡ್ಡಿ ಆಗಿದ್ದರು ಎಂದು ಸಹ ನಿರ್ಮಾಪಕ ಕುಮಾರ್ ಆರೋಪ ಮಾಡಿದ್ದರು.
ಇದನ್ನೂ ಓದಿ:ಕೋರ್ಟ್ ಕಟಕಟೆಯಲ್ಲಿ ಎಂ.ಎನ್. ಕುಮಾರ್ ವಿರುದ್ಧ ಹೇಳಿಕೆ ನೀಡಿದ ಸುದೀಪ್; ಫಲ ನೀಡಲಿಲ್ಲ ಸಂಧಾನ
ನಿರ್ಮಾಪಕರ ಆರೋಪಗಳಿಂದ ಬೇಸರಗೊಂಡಿದ್ದ ನಟ ಸುದೀಪ್ ನೇರವಾಗಿ ನ್ಯಾಯಾಲಯದ ಮೆಟ್ಟಿಲೇರಿ, ತಮ್ಮ ವಿರುದ್ಧ ಆರೋಪ ಮಾಡಿದ ನಿರ್ಮಾಪಕರುಗಳ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ಅದಾದ ಬಳಿಕ ನಿರ್ಮಾಪಕ ಕುಮಾರ್, ಫಿಲಂ ಚೇಂಬರ್ ಮುಂದೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸುವಂತೆ, ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಪ್ರಕರಣ ಕೊನೆಗೆ ನಟ ರವಿಚಂದ್ರನ್ ಮನೆ ಅಂಗಳಕ್ಕೆ ಹೋಯಿತು. ರವಿಚಂದ್ರನ್, ರಾಕ್ಲೈನ್ ವೆಂಕಟೇಶ್, ಸುದೀಪ್, ಕುಮಾರ್ ಇನ್ನಿತರರ ಹಾಜರಿಯಲ್ಲಿ ರವಿಚಂದ್ರನ್ ಮನೆಯಲ್ಲಿ ಸಂಧಾನ ಸಭೆ ನಡೆಯಿತಾದರೂ ಸುದೀಪ್ ಯಾವುದೇ ಸಂಧಾನಕ್ಕೂ ಬಗ್ಗದೆ ಪ್ರಕರಣವನ್ನು ನ್ಯಾಯಾಲಯದಲ್ಲಿಯೇ ಇತ್ಯರ್ಥ ಮಾಡಿಕೊಳ್ಳುವುದಾಗಿ ಹೇಳಿ ಮುನ್ನಡೆದಿದ್ದಾರೆ. ಅಂತೆಯೇ ನಿನ್ನೆಯಷ್ಟೆ ಸ್ವಯಂ ಹೇಳಿಕೆಯನ್ನು ಸುದೀಪ್ ದಾಖಲಿಸಿದ್ದು ಇದೀಗ ನ್ಯಾಯಾಲಯವು ನಿರ್ಮಾಪಕರಿಗೆ ಸಮನ್ಸ್ ನೀಡಿದೆ. ಮುಂದೇನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:01 pm, Fri, 11 August 23