
ಧ್ರುವ ಸರ್ಜಾ (Dhruva Sarja) ಅವರು ವೃತ್ತಿ ಜೀವನ ನೋಡಿದಾಗ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಅನ್ನೋದು ಗೊತ್ತಾಗುತ್ತದೆ. ವರ್ಷಕ್ಕೆ ಒಂದು ಸಿನಿಮಾ ಕೊಡಬೇಕು ಎಂದು ಟಾರ್ಗೆಟ್ ಇಟ್ಟುಕೊಂಡು ಚಿತ್ರ ಮಾಡುವವರು ಅವರಲ್ಲ. ಸಾಕಷ್ಟು ಸಮಯ ತೆಗೆದುಕೊಂಡು ಸಿನಿಮಾ ಮಾಡುತ್ತಾರೆ. ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಮಾರ್ಟಿನ್’ ಸಿನಿಮಾದಲ್ಲಿ. ಈಗ ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ‘ಕ್ರಿಮಿನಲ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ.
ಬೆಂಗಳೂರಿನ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಹೀಗಾಗಿ, ಪರಿಷೆ ನಡೆಯುತ್ತಿರುವ ಬುಲ್ ಟೆಂಪಲ್ ಎದುರಿನ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆದಿದೆ. ಈ ವೇಳೆ ಸಿನಿಮಾದ ಟೈಟಲ್ ರಿವೀಲ್ ಮಾಡಲಾಯಿತು. ಈ ಬಾರಿಯೂ ಅವರು ಮೂರು ಅಕ್ಷರದ ಟೈಟಲ್ನ ಸಿನಿಮಾಗೆ ಇಟ್ಟಿದ್ದಾರೆ.
ಧ್ರುವ ಸರ್ಜಾ ನಟನೆಯ 7ನೇ ಸಿನಿಮಾ ಇದಾಗಿದೆ. ‘ಕೆರೆಬೇಟೆ’ ಸಿನಿಮಾ ಖ್ಯಾತಿಯ ರಾಜ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ರಚಿತಾ ರಾಮ್ ನಾಯಕಿ. ‘ಭರ್ಜರಿ’ ಸಿನಿಮಾದಲ್ಲಿ ರಚಿತಾ ಹಾಗೂ ಧ್ರುವ ನಟಿಸಿದ್ದರು. ಈಗ 8 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಮೇಲೆ ಮೋಡಿ ಮಾಡಲು ರೆಡಿ ಆಗಿದೆ.
ಸಿನಿಮಾದಲ್ಲಿ ಹೋರಿ ಶಿವ ಹೆಸರಿನ ಪಾತ್ರದಲ್ಲಿ ಧ್ರುವ ಅವರು ನಟಿಸಲಿದ್ದಾರೆ. ಹೋರಿ ಹಿಡಿಯುವ ಪೈಲ್ವಾನ್ ಪಾತ್ರ ಅವರದ್ದಾಗಿದೆ. ಉತ್ತರ ಕರ್ನಾಟಕ ಸೊಗಡಲ್ಲಿ ಸಿನಿಮಾ ಮೂಡಿ ಬರಲಿದೆ. ವಿಶೇಷ ಎಂದರೆ ಇದು ನೈಜ ಘಟನೆಯಾಧಾರಿತ ಸಿನಿಮಾ. ಮನಿಶ್ ಶಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.
ದನ್ನೂ ಓದಿ: 3 ಕೋಟಿ ವಂಚನೆ ಪ್ರಕರಣ: ಧ್ರುವ ಸರ್ಜಾಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್
ಈ ಚಿತ್ರದಲ್ಲಿ ಲವ್ ಸ್ಟೋರಿ ಕೂಡ ಹೈಲೈಟ್ ಆಗಲಿದೆ. ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ನಡೆದ ಪ್ರೇಮ ಕಥೆ ಬಳಕೆ ಮಾಡಲಾಗಿದೆ. ಶೇ. 99 ನೈಜ ಕಥೆಯನ್ನು ಬಳಸಲು ನಿರ್ದೇಶಕರು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ತಾರಾ ಅವರು ಧ್ರುವ ತಾಯಿ ಪಾತ್ರ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ ಬಳಕೆ ಆಗಲಿದೆ. ‘ಕ್ರಿಮಿನಲ್’ ಪಾತ್ರ ಕೇಳಿ ರಚಿತಾ ರಾಮ್ ಫುಲ್ ಖುಷ್ ಆಗಿದ್ದಾರೆ. ಇಂತಹ ಪಾತ್ರ ಸಿಕ್ಕಿದ್ದಕ್ಕೆ ಅವರು ಕೂಡ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:57 am, Wed, 19 November 25