ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದಿಂದ ಎರಡು ವಿಶೇಷ ಪ್ರಶಸ್ತಿ ಪ್ರದಾನ

ದಿವಂಗತ ಹಿರಿಯ ಸಾಹಿತಿ, ನಿರ್ದೇಶಕ ಸಿ.ವಿ. ಶಿವಶಂಕರ್ ಅವರ ಸ್ಮರಣಾರ್ಥವಾಗಿ ‘ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನ’ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಕಲಾವಿದರು ಮತ್ತು ಅಭಿಮಾನಿಗಳು ಸಾಕ್ಷಿಯಾದರು. ಕವಿ ರಾಜ್ ಹಾಗೂ ಸಂದೀಪ್ ಸುಂಕದ್ ಅವರಿಗೆ ಪ್ರಶಸ್ತಿ ನೀಡಲಾಯಿತು.

ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದಿಂದ ಎರಡು ವಿಶೇಷ ಪ್ರಶಸ್ತಿ ಪ್ರದಾನ
Cv Shivashankar Kala Prathishtana

Updated on: May 10, 2026 | 12:45 PM

‘ಸಿ.ವಿ. ಶಿವಶಂಕರ್ (CV Shivashankar) ಕಲಾ ಪ್ರತಿಷ್ಠಾನ’ದ ವತಿಯಿಂದ ಇತ್ತೀಚೆಗೆ ಎರಡು ವಿಶೇಷ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಕವಿರಾಜ್ (Kaviraj) ಅವರಿಗೆ ‘ಭರವಸೆಯ ಬರಹಗಾರ’ ಪ್ರಶಸ್ತಿ ಮತ್ತು ಸಂದೀಪ್ ಸುಂಕದ್ ಅವರಿಗೆ ‘ನಿಷ್ಣಾತ ನಿರ್ದೇಶಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ಜಯಮಾಲಾ, ಹಿರಿಯ ನಟಿ ಡಾ. ಗಿರಿಜಾ ಲೋಕೇಶ್, ಹಿರಿಯ ರಾಜಕಾರಣಿ ಹಾಗೂ ಚಿತ್ರರಂಗದ ಕಾರ್ಯಕರ್ತ ಡಾ. ಮದನ್ ಪಟೇಲ್ ಮತ್ತು ಸದಾಶಿವ ಶೆಣೈ ಉಪಸ್ಥಿತರಿದ್ದರು.

ಈ ವೇಳೆ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರು ಮಾಡಿದರು. ಸಿ.ವಿ. ಶಿವಶಂಕರ್ ಕಲಾ ಪ್ರತಿಷ್ಠಾನದ ಉದ್ದೇಶ ಮತ್ತು ಧ್ಯೇಯವನ್ನು ಅವರು ವಿವರಿಸಿದರು. ತಮ್ಮ ಜೀವನಕಾಲದಲ್ಲಿ ಸಿ.ವಿ. ಶಿವಶಂಕರ್ ಅವರು ಹೊಸ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಮತ್ತು ಕನ್ನಡ ಚಿತ್ರರಂಗಕ್ಕೆ ಅನೇಕ ಕಲಾವಿದರನ್ನು ಪರಿಚಯಿಸಿದ್ದರು ಎಂದು ಅವರು ತಿಳಿಸಿದರು. ಕನ್ನಡ ಭಾಷೆ ಮತ್ತು ಕನ್ನಡ ಚಿತ್ರರಂಗದ ಅಭಿವೃದ್ಧಿಯೇ ಶಿವಶಂಕರ್ ಅವರ ಜೀವನದ ಪ್ರಮುಖ ಧ್ಯೇಯವಾಗಿತ್ತು ಎಂದು ಹೇಳಿದರು.

ಸಿ.ವಿ. ಶಿವಶಂಕರ್ ಅವರ ಜೀವನ ಹಾಗೂ ಸಾಧನೆಗಳನ್ನು ಒಳಗೊಂಡ ಅಭಿಮಾನಿ ಪುಸ್ತಕವನ್ನು ಡಾ. ಜಯಮಾಲಾ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಪುಸ್ತಕದ ಲೇಖಕರಾದ ದಿವಂಗತ ಜಿ.ಜಿ. ನಾಗರಾಜ್ ಅವರ ಪತ್ನಿ ಕೃಷ್ಣವೇಣಿ ನಾಗರಾಜ್ ಹಾಗೂ ಪುಸ್ತಕದ ವಿನ್ಯಾಸಕರಾದ ಈಶ್ವರ್ ಬಡಿಗೇರ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸದಾಶಿವ ಶೆಣೈ ಅವರು ಸಿ. ವಿ. ಶಿವಶಂಕರ್ ಅವರ ಜೀವನ ಹೋರಾಟವನ್ನು ಸ್ಮರಿಸಿದರು. ವಿಶೇಷವಾಗಿ ಕನ್ನಡ ಕುವರ ಚಿತ್ರದ ಕುರಿತು ಪ್ರಸ್ತಾಪಿಸಿ, ಆ ಚಿತ್ರವನ್ನು ಬಿಡುಗಡೆ ಮಾಡಲು ಶಿವಶಂಕರ್ ಅವರು 30 ವರ್ಷಗಳ ಕಾಲ ಹೋರಾಟ ನಡೆಸಿದರೂ ಅದು ಇನ್ನೂ ಬಿಡುಗಡೆಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಹಿರಿಯ ನಿರ್ದೇಶಕರ ಬಿಡುಗಡೆ ಆಗದ ಚಿತ್ರಗಳಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ. ಶಿವಶಂಕರ್​ ಹೃದಯಾಘಾತದಿಂದ ನಿಧನ

ಜಯಮಾಲಾ ಅವರು ಮಾತನಾಡಿ, ಸಿ.ವಿ. ಶಿವಶಂಕರ್ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಸ್ತೆ ನಾಮಕರಣದ ವಿಷಯವಾಗಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಜೊತೆಗೆ ಹಿರಿಯ ನಿರ್ದೇಶಕರ ಹಳೆಯ ಸಿನಿಮಾಗಳನ್ನು ಡಿಜಿಟೈಸ್ ಮಾಡಿ ಸಂರಕ್ಷಿಸುವ ಅಗತ್ಯತೆಯ ಕುರಿತು ಮಾತನಾಡಿ, ಕನ್ನಡ ಚಿತ್ರರಂಗದ ಇತಿಹಾಸ ಉಳಿಸಬೇಕಾದ ಮಹತ್ವವನ್ನು ಒತ್ತಿಹೇಳಿದರು.

ಗಿರಿಜಾ ಲೋಕೇಶ್ ಅವರು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡು, 12ನೇ ವಯಸ್ಸಿನಲ್ಲಿ ಸಿ.ವಿ. ಶಿವಶಂಕರ್ ಅವರ ಬಳಿ ನೃತ್ಯ ಕಲಿತ ದಿನಗಳನ್ನು ಸ್ಮರಿಸಿದರು. ಅವರ ಪ್ರಾಮಾಣಿಕತೆ, ಸಮಯಪಾಲನೆ ಹಾಗೂ ಸರಳತೆಯನ್ನು ಕೊಂಡಾಡಿದರು. ಮದನ್ ಪಟೇಲ್ ಅವರು ಸಿ.ವಿ. ಶಿವಶಂಕರ್ ಅವರ ಹೆಸರಿನಲ್ಲಿ ರಸ್ತೆ ನಾಮಕರಣ ಮಾಡುವ ಪ್ರಸ್ತಾವನೆ ಕಳೆದ ಎರಡು ವರ್ಷಗಳಿಂದ ಬಾಕಿಯಿದ್ದು, ಅದನ್ನು ಶೀಘ್ರ ಜಾರಿಗೆ ತರಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಡಾ. ಜಯಮಾಲಾ ಅವರಿಗೆ ಮನವಿ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us