ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಡಾಲಿ ಧನಂಜಯ್, 25 ಸಿನಿಮಾ ಮಾಡಿದ್ದು ಸಾಧನೆಯೇ?

Daali Dhananjay: ಡಾಲಿ ಧನಂಜಯ್ ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ್ದಾರೆ. ಈ ಹತ್ತು ವರ್ಷದಲ್ಲಿ ಅವರು ನಟಿಸಿದ 25 ಸಿನಿಮಾಗಳು ಬಿಡುಗಡೆ ಆಗಿವೆ. 25 ಸಿನಿಮಾಗಳನ್ನು ಮಾಡಿರುವುದೇ ಅವರ ಸಾಧನೆಯೇ?

ಚಿತ್ರರಂಗದಲ್ಲಿ ಹತ್ತು ವರ್ಷ ಪೂರೈಸಿದ ಡಾಲಿ ಧನಂಜಯ್, 25 ಸಿನಿಮಾ ಮಾಡಿದ್ದು ಸಾಧನೆಯೇ?
ಡಾಲಿ ಧನಂಜಯ್
Follow us
|

Updated on:May 30, 2023 | 9:38 PM

ಹೋಟೆಲ್​ ಒಂದರಲ್ಲಿ ಕ್ಯಾಶಿಯರ್ ಒಬ್ಬನಿರುತ್ತಾನೆ. ಅಲ್ಲಿನ ಸಪ್ಲೈಯರ್​ಗಳಿಗೆ, ಕ್ಲೀನರ್​ಗಳಿಗೆ ಪ್ರತಿನಿತ್ಯ ಬೈದು, ಹೊಡೆದು ಕೆಲಸ ಮಾಡಿಸುತ್ತಿರುತ್ತಾನೆ. ಆ ಹೋಟೆಲ್​ನ ಕ್ಲೀನರ್​ಗಳಲ್ಲಿ ಒಬ್ಬಾತ ಕಷ್ಟಪಟ್ಟು ಕೆಲಸ ಮಾಡಿ, ಲೆಕ್ಕ ಕಲಿತು ಕೆಲ ವರ್ಷಗಳ ಬಳಿಕ ಕ್ಯಾಶಿಯರ್ ಆಗುತ್ತಾನೆ. ಈ ಹಿಂದಿನ ಕ್ಯಾಶಿಯರ್​ನ ರೀತಿಯಲ್ಲಿಯೇ ಕ್ಲೀನರ್​, ಸಪ್ಲೈಯರ್​ಗಳ ಮೇಲೆ ದೌರ್ಜನ್ಯ ಮಾಡಿ ಕೆಲಸ ತೆಗೆಸಲು ಆರಂಭಿಸುತ್ತಾನೆ. ಆ ಕ್ಲೀನರ್, ಕ್ಯಾಶಿಯರ್ ಆಗಿದ್ದು ಸಾಧನೆ ಎನ್ನಬಹುದೆ? ಇಲ್ಲ ಎನಿಸುತ್ತದೆ. ಆದರೆ ನಟ ಡಾಲಿ ಧನಂಜಯ್ (Daali Dhananjay) ಅವರದ್ದು ನಿಜ ಸಾಧನೆ. ಹತ್ತು ವರ್ಷ ಚಿತ್ರರಂಗದಲ್ಲಿದ್ದು, 25 ಸಿನಿಮಾ ಮಾಡಿದ್ದಾರೆ ಡಾಲಿ. ಇದಷ್ಟೆ ಡಾಲಿಯ ಸಾಧನೆಯಾ? ಮುಂದೆ ಓದಿ…

2015ರಲ್ಲಿ, ‘ಬಾಕ್ಸರ್’ ಸಿನಿಮಾದ ಶೂಟಿಂಗ್ ಕಂಠೀರವ ಸ್ಟುಡಿಯೋನಲ್ಲಿ ನಡೆಯುತ್ತಿತ್ತು. ರಾತ್ರಿ ಆರಂಭವಾದ ಶೂಟಿಂಗ್ ತಡರಾತ್ರಿವರೆಗೆ ಸಾಗಿತ್ತು, ಡಾಲಿ ಧನಂಜಯ್ ಅನ್ನು ಕಾರಿನ ಬ್ಯಾನೆಟ್ಟಿಗೆ ಖಳನಟನೊಬ್ಬ ಅಪ್ಪಳಿಸುವ ದೃಶ್ಯದ ಚಿತ್ರೀಕರಣ ಅದು. 20-30 ಟೇಕ್ ಆದರೂ ಶಾಟ್ ಓಕೆ ಆಗಿಲ್ಲ. ರೋಸಿ ಹೋದ ಸಾಹಸ ನಿರ್ದೇಶಕ ಎಲ್ಲರೆದುರಲ್ಲೇ, ಧನಂಜಯ್ ಆ ಸಿನಿಮಾದ ನಾಯಕ ಎಂಬುದನ್ನೂ ಲೆಕ್ಕಿಸದೆ “ಅಯ್ಯೋ ನಿನ್….. ಎಲ್ಲಿಂದ ಕರ್ಕೊಂಡು ಬರ್ತಾರೋ ಇಂಥೋರನ್ನೆಲ್ಲ ನಮ್ಮ ಪ್ರಾಣ ತಿನ್ನೋಕೆ” ಅಂತ ಜೋರಾಗಿ ಬೈದ. ಮೂಳೆ ಪುಡಿ ಆಗುವಂತೆ ಜಜ್ಜಿಹೋದ ಬೆನ್ನು ಒಂದೆಡೆಯಾದರೆ, ಕುದಿಯುತ್ತಿದ್ದ ಜ್ವರವನ್ನು ಅದುಮಿಕೊಂಡು ನಟಿಸುತ್ತಿದ್ದ ಸುಸ್ತು ಇನ್ನೊಂದು ಕಡೆ, ಆದರೆ ಧನಂಜಯ್ ಒಂದು ಮಾತನ್ನೂ ಆಡಲಿಲ್ಲ. ಹಲ್ಲು ಕಚ್ಚಿಕೊಂಡು ಅವಮಾನ ಸಹಿಸಿಕೊಂಡು ನಟನೆ ಮುಂದುವರೆಸಿದರು. ಶಾಟ್ ಓಕೆ ಆಗುವಷ್ಟರಲ್ಲಿ ಸಮಯ ರಾತ್ರಿ 3 ಗಂಟೆ!

ಈಗ ಧನಂಜಯ್ ಸ್ಟಾರ್ ನಟ. ಈಗ ಯಾರೂ ಧನಂಜಯ್​ಗೆ ಬೈಯ್ಯಲಾರರು. ಧನಂಜಯ್ ಎದುರು ಸ್ಟಾರ್ ನಿರ್ದೇಶಕರೇ ವಿನಮ್ರವಾಗಿ ವರ್ತಿಸುತ್ತಾರೆ. ಆದರೆ ಧನಂಜಯ್ ತಾನು ಪಟ್ಟ ಅವಮಾನವನ್ನು ತನ್ನ ಕಿರಿಯರ ಪಡಬಾರದೆಂಬ ಉಮೇದಿನಿಂದ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಎಲ್ಲರನ್ನೂ ಸಮಾನತೆಯಿಂದ ಕಾಣುವಂತೆ ಮಾಡಿದ್ದಾರೆ. ಮನುಷ್ಯನಿಗೆ ಸಿಗಬೇಕಾದ ಕನಿಷ್ಟ ಗೌರವವನ್ನು ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ನಿಯಮವನ್ನಾಗಿ ರೂಪಿಸಿದ್ದಾರೆ. ಡಾಲಿಯ ನಿಜ ಸಾಧನೆ ಅಡಗಿರುವುದು ಇಲ್ಲಿ. ಒಂದು ವ್ಯವಸ್ಥೆಯಲ್ಲಿ ಕಷ್ಟಪಟ್ಟು ಆ ವ್ಯವಸ್ಥೆಯ ಮೇಲಿನ ಸ್ಥರ ತಲುಪಿದ ವ್ಯಕ್ತಿ ತನ್ನ ಹಿಂದೆ ಬರುತ್ತಿರುವವರ ಬಗ್ಗೆ ಆಲೋಚನೆ ಮಾಡುವ ಮನಸ್ಥಿತಿಯನ್ನು ಉಳಿಸಿಕೊಳ್ಳುವುದೇ ಅದ್ಭುತ. ಸ್ಟಾರ್ ಆಗಿರುವ ಡಾಲಿ, ತನಗಿಂತಲೂ ಶ್ರೇಣಿಯಲ್ಲಿ ಕೆಳಗಿರುವ ಸಹನಟರನ್ನು ಹ್ಯುಮಿಲಿಯೇಟ್ ಮಾಡಿಬಿಡಬಹುದು, ಚಿತ್ರರಂಗದಲ್ಲಿ ಆ ಪದ್ಧತಿ ಮೊದಲಿನಿಂದಲೂ ನಡೆಯುತ್ತಾ ಬಂದಿದೆ, ಸ್ಟಾರ್​ ನಟರು ಕಿರಿಯರನ್ನು ಅವಮಾನಿಸುವುದು, ಅಗೌರವದಿಂದ ನಡೆದುಕೊಳ್ಳುವುದು ಸಹಜ ಎಂಬಂತಾಗಿಬಿಟ್ಟಿದೆ. ಒಂದೊಮ್ಮೆ ಡಾಲಿಯೂ ಹಾಗೆ ಮಾಡಿದರೆ ಯಾರೂ ಅವರನ್ನು ಪ್ರಶ್ನಿಸುವುದಿಲ್ಲ, ವಿರೋಧಿಸುವುದೂ ಇಲ್ಲವೇನೋ ಆದರೆ ಅವರು ತಮಗೆ ಸಿಕ್ಕ ಈ ಸ್ಟಾರ್​ಡಂ ಪವರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿಲ್ಲ ಬದಲಿಗೆ ತಾವು ಪಟ್ಟ ಅನುಮಾನ, ತಾವು ಪಟ್ಟ ಕಷ್ಟ ತನ್ನ ಕಿರಿಯರಿಗೆ ಆಗಬಾರದೆಂದು ಜವಾಬ್ದಾರಿ ವಹಿಸಿದ್ದಾರೆ. ಹಾಗಾಗಿ ಅವರ ಈ ಹತ್ತು ವರ್ಷದ ಚಿತ್ರರಂಗದ ಜರ್ನಿ ಅವರಷ್ಟೆ ಚಿತ್ರರಂಗಕ್ಕೂ ಮುಖ್ಯವಾಗಿದೆ.

ಇದನ್ನೂ ಓದಿ:ಬೈದು ಕಳಿಸಿದರೂ ಡಾಲಿ ಧನಂಜಯ್ ಪ್ರಗತಿಯಲ್ಲಿ ರವಿಚಂದ್ರನ್​ಗೆ ವಿಶೇಷ ಸ್ಥಾನ

ಡಾಲಿ ಧನಂಜಯ್ ಮೊದಲ ಸಿನಿಮಾ ‘ಡೈರೆಕ್ಟರ್ ಸ್ಪೆಷಲ್’ ಬಿಡುಗಡೆ ಆಗಿ ನಾಳೆಗೆ (ಮೇ 31) ಹತ್ತು ವರ್ಷ. ಎಳವೆಯಿಂದಲೂ ನಟನೆಯ ಆಸಕ್ತಿಹೊಂದಿ ಬಳಿಕ ಪರಿಸ್ಥಿತಿಯ ಒತ್ತಡಿದಂದ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದ ಡಾಲಿ, ಆದರೆ ನಟನೇ ಆಗಬೇಕೆಂದು ನಿಶ್ಚಯಿಸಿ ಚಿತ್ರರಂಗಕ್ಕೆ ಬಂದರು. ಆರಂಭದಲ್ಲಿ ಹಲವು ಅವಮಾನ, ತಿರಸ್ಕಾರ, ಸೋಲುಗಳನ್ನು ಅನುಭವಿಸಿ ಈಗ ಕನ್ನಡದ ಸ್ಟಾರ್ ನಟರಲ್ಲಿ ಒಬ್ಬರಾಗಿ ಬೆಳೆದಿದ್ದಾರೆ. ಅವರು ಸ್ಟಾರ್ ಆಗಿದ್ದು ಮಾತ್ರವೇ ಅಲ್ಲದೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಹಂಬಲದಲ್ಲಿರುವ ಹಲವು ಪ್ರತಿಭಾವಂತರಿಗೆ ನೆರವಾಗಿಯೂ ನಿಂತಿದ್ದಾರೆ.

ಒಂದೇ ಒಂದು ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕರ, ನಿರ್ಮಾಪಕರ ಮನೆ ಬಾಗಿಲು ಸುತ್ತಿದ್ದ ಡಾಲಿಗೆ ಈಗ ಕನ್ನಡ ಮಾತ್ರವಲ್ಲ ತೆಲುಗು, ತಮಿಳಿನಿಂದಲೂ ಸತತವಾಗಿ ಸಿನಿಮಾ ಅವಕಾಶಗಳು ಹರಿದು ಬರುತ್ತಿವೆ. ನಟನಾಗಿ, ನಿರ್ಮಾಪಕನಾಗಿ, ಕತೆಗಾರನಾಗಿ, ಗೀತ ಸಾಹಿತಿಯಾಗಿ ತಮ್ಮ ಪ್ರತಿಭೆಯ ಕವಲುಗಳನ್ನು ಡಾಲಿ ಪ್ರದರ್ಶಿಸುತ್ತಿದ್ದಾರೆ. ತಮ್ಮ ಮೆಚ್ಚಿನ ನಾಯಕ ಚಿತ್ರರಂಗದಲ್ಲಿ 10 ವರ್ಷ ಯಶಸ್ವಿಯಾಗಿ ಪೂರೈಸಿದ್ದನ್ನು ಡಾಲಿಯ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಕಾಮನ್ ಡಿಪಿ ಬಿಡುಗಡೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಸವತತ್ವದಲ್ಲಿ ಅಪಾರ ನಂಬಿಕೆಯುಳ್ಳ ಡಾಲಿ ಧನಂಜಯ್ ಮಾನವೀಯತೆಯನ್ನು ಮೂಲ ಆದರ್ಶವಾಗಿರಿಸಿಕೊಂಡು ಚಿತ್ರರಂಗದಲ್ಲಿ ಮುಂದೆ ಸಾಗುತ್ತಿದ್ದಾರೆ. ಒಮ್ಮೆ ಅಲ್ಲಮನಾಗಿ, ಒಮ್ಮೆ ರಾಕ್ಷಸ ಡಾಲಿಯಾಗಿ ಎಲ್ಲ ವಿಧದಲ್ಲೂ, ಸಾಧ್ಯವಾದಷ್ಟು ಪ್ರೇಕ್ಷಕರನ್ನು ರಂಜಿಸುತ್ತಾ ಗಟ್ಟಿ ಹೆಜ್ಜೆಗಳನ್ನು ಇಡುತ್ತಿರುವ ಡಾಲಿ ಇನ್ನೂ ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಇರಲಿ, ಅವರ ಯಶಸ್ಸು ನೂರ್ಮಡಿಯಾಗಲಿ ಅವರ ಮನುಷ್ಯ ಪ್ರೇಮ ಬೆಟ್ಟವಾಗಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:37 pm, Tue, 30 May 23