ಹೊಸ ಹಾಡು: ‘ಕಾಂಚಾಣಾನೇ, ಕಾಂಚಾಣ’ ಎನ್ನುತ್ತಿದ್ದಾನೆ ‘ಕೋಟಿ’

ಡಾಲಿ ಧನಂಜಯ್ ನಟಿಸಿ, ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿರುವ ‘ಕೋಟಿ’ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಮಧ್ಯಮ ವರ್ಗದ ಪಾಡುಗಳನ್ನು ಕಟ್ಟಿಕೊಡುತ್ತಿದೆ ಈ ಹಾಡು.

ಹೊಸ ಹಾಡು: ‘ಕಾಂಚಾಣಾನೇ, ಕಾಂಚಾಣ’ ಎನ್ನುತ್ತಿದ್ದಾನೆ ‘ಕೋಟಿ’

Updated on: May 22, 2024 | 7:38 PM

‘ಟಗರು’ ಸಿನಿಮಾದ ರೌಡಿ ‘ಡಾಲಿ’ಯಾಗಿ ಜನಮೆಚ್ಚುಗೆ ಪಡೆದಿದ್ದ ಧನಂಜಯ್ (Daali Dhananjay) ಆ ನಂತರ ರೌಡಿಗಳಿಂದ ದೂರಾಗಿ ಕುಟುಂಬಕ್ಕೆ ಹತ್ತಿರುವಾಗುವ, ಮಧ್ಯಮ ವರ್ಗದ ಯುವಕರನ್ನು ಪ್ರತಿನಿಧಿಸುವ ಪಾತ್ರಗಳತ್ತ ಮುಖ ಮಾಡಿದರು. ಉತ್ತಮ ಸಂದೇಶಗಳನ್ನು, ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸಿನಿಮಾಗಳನ್ನು ಧನಂಜಯ್ ಇತ್ತೀಚೆಗೆ ಹೆಚ್ಚು ಆರಿಸಿಕೊಳ್ಳುತ್ತಿದ್ದು, ಇದೀಗ ‘ಕೋಟಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಧ್ಯಮ ವರ್ಗದ ಯುವಕನೊಬ್ಬ ಅಡ್ಡದಾರಿ ಹಿಡಿಯದೆ ಜೀವನದಲ್ಲಿ ಯಶಸ್ಸುಗಳಿಸಲು ಮಾಡುವ ಪ್ರಯತ್ನದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದ ಹಾಡೊಂದು ಇದೀಗ ಬಿಡುಗಡೆ ಆಗಿದೆ.

ಮಧ್ಯಮ ವರ್ಗದ ಪ್ರತಿ ದಿನದ ಕನಸಾದ ‘ಕಾಂಚಾಣ’ದ ಬಗ್ಗೆ ಈ ಹಾಡಿದೆ. ಆದರೆ ಈ ಕಾಂಚಾಣದ ಕನಸಿಗೆ ಅಡ್ಡಿ ಆಗುವ ಹಲವು ವಿಷಯ, ವ್ಯಕ್ತಿಗಳ ಬಗ್ಗೆಯೂ ಹಾಡಿನಲ್ಲಿ ಪ್ರಸ್ತಾಪವಿದೆ. ಜೊತೆಗೆ ನಗರ ಜೀವನದ ಕಠಿಣತೆಯ ಪರಿಚಯವನ್ನೂ ಸಹ ಈ ಹಾಡು ಮಾಡಿಸುತ್ತಿದೆ. ಮಧ್ಯಮ ವರ್ಗದ ಬವಣೆ ಬಣ್ಣಿಸುವ ‘ಲೆಕ್ಕಾಚಾರ ಮಾಡಿ ಹೇಗೋ ತಿಂಗಳೆಲ್ಲ ಬದುಕೋದು, ನಿದ್ದೆಗೆಟ್ಟು ಕಂಡಾ ಕನಸ ಹಗಲು ಪೂರಾ ಹುಡುಕೋದು’ ಸಾಲು ಸೇರಿದಂತೆ, ಬಡ್ಡಿ ಹೆಸರಲ್ಲಿ ಬಡವರ ರಕ್ತ ಹೀರುವವರ ಕುರಿತು ಸಿಟ್ಟು ಸಹ ಈ ಹಾಡಿನಲ್ಲಿದೆ.

ಇದನ್ನೂ ಓದಿ:ಐತಿಹಾಸಿಕ ಸಿನಿಮಾನಲ್ಲಿ ನಟಿಸಲಿದ್ದಾರೆ ನಟ ಡಾಲಿ ಧನಂಜಯ್

ವಿಡಿಯೋ ಹಾಡು ಇದಾಗಿದ್ದು, ಸಿನಿಮಾದ ಕೆಲವು ತುಣುಕುಗಳನ್ನು ಸಹ ವಿಡಿಯೋನಲ್ಲಿ ಬಳಸಿಕೊಳ್ಳಲಾಗಿದೆ. ಮಧ್ಯಮ ವರ್ಗದ ಸಾಮಾನ್ಯ ಯುವಕನಾಗಿ ಡಾಲಿ ಆಪ್ತವಾಗುತ್ತಾರೆ. ಪುಟ್ಟ ಮನೆ, ಕುಟುಂಬವನ್ನು ಸಾಕುವ ಜವಾಬ್ದಾರಿ, ಅಣ್ಣನ ಕನಸಿಗೆ ಜೊತೆಯಾಗುವ ಸಹೋದರಿ, ಮಗ ಸಾಧಿಸುತ್ತಾನೆಂಬ ಆಸೆಯಲ್ಲಿರುವ ತಾಯಿ ಹೀಗೆ ಒಂದು ಚೊಕ್ಕಟವಾದ ಮಧ್ಯಮ ವರ್ಗದ ಕುಟುಂಬ ಈ ಸಿನಿಮಾದಲ್ಲಿದ್ದು, ಈಗ ಬಿಡುಗಡೆ ಆಗಿರುವ ಹಾಡಿನಲ್ಲಿ ಎಲ್ಲದರ ಝಲಕ್ ತೋರಿಸಲಾಗಿದೆ.

Janatha City - Lyrical | Kotee | Daali Dhananjaya, Moksha Kushal | Vasuki Vaibhav | Sanjith Hegde

ಪ್ರಸ್ತುತ ಬಿಡುಗಡೆ ಆಗಿರುವ ಹಾಡನ್ನು ಸಂಚಿತ್ ಹೆಗ್ಡೆ ಹಾಡಿದ್ದಾರೆ. ಹಾಡಿಗೆ ಸಂಗೀತ ಸಂಯೋಜಿಸಿರುವುದು ವಾಸುಕಿ ವೈಭವ್, ಸಾಹಿತ್ಯವೂ ವಾಸುಕಿ ಅವರದ್ದೇ. ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ತನುಜಾ ವೆಂಕಟೇಶ್ ಇನ್ನೂ ಹಲವರಿದ್ದಾರೆ. ‘ಕೋಟಿ’ ಸಿನಿಮಾವನ್ನು ಪರಮೇಶ್ವರ್ ಗುಂಡ್ಕಲ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಇವರು ಕನ್ನಡ ವಾಹಿನಿಯೊಂದರ ಕ್ರಿಯೇಟಿವ್ ಹೆಡ್ ಆಗಿದ್ದವರು. ಬಿಗ್​ಬಾಸ್ ರಿಯಾಲಿಟಿ ಶೋ ಅನ್ನು ಯಶಸ್ವಿಯಾಗಿಸಿದವರಲ್ಲಿ ಇವರ ಪರಿಶ್ರಮವೂ ಹೆಚ್ಚಿದೆ. ಇದೀಗ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us