ಡಾಲಿಯ ಮತ್ತೊಂದು ಸಿನಿಮಾ ಬಿಡುಗಡೆಗೆ ಸಜ್ಜು, ‘ಜೆಸಿ’ ಇದು ಜೈಲಿನ ಕರಾಳ ಕತೆ
Daali Pictures new movie: ಡಾಲಿ ಧನಂಜಯ್ ಅವರು ನಾಯಕ ನಟನಾಗಿರುವ ಜೊತೆಗೆ ಯಶಸ್ವಿ ನಿರ್ಮಾಪಕರೂ ಹೌದು. ಡಾಲಿ ಪಿಕ್ಚರ್ಸ್ ಮೂಲಕ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ‘ಹೆಗ್ಗಣ ಮುದ್ದು’ ಹೆಸರಿನ ಹೊಸ ಸಿನಿಮಾ ಘೋಷಿಸಿರುವ ಡಾಲಿ, ಇದೀಗ ತಮ್ಮದೇ ನಿರ್ಮಾಣದ ಮತ್ತೊಂದು ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ.

ಡಾಲಿ ಧನಂಜಯ್ (Daali Dhananjay) ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಗುತ್ತಾ ಬಂದಿದೆ. ಡಾಲಿ ಅವರು ಪರ ಭಾಷೆ ಸಿನಿಮಾಗಳಲ್ಲಿ ಅಥವಾ ತಮ್ಮ ಗೆಳೆಯರ ಸಿನಿಮಾಗಳ ಅತಿಥಿ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನಾಯಕನಾಗಿ ಅವರ ಸಿನಿಮಾ ಬರದೇ ಇದ್ದರೂ ಸಹ ಡಾಲಿ ಅವರ ನಿರ್ಮಾಣದ ಸಿನಿಮಾಗಳು ಮಾತ್ರ ಒಂದರ ಹಿಂದೊಂದು ಬಿಡುಗಡೆ ಆಗಲು ಸಜ್ಜಾಗುತ್ತಿವೆ. ಕೆಲ ದಿನಗಳ ಹಿಂದಷ್ಟೆ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಹೆಗ್ಗಣ ಮುದ್ದು’ ಸಿನಿಮಾ ಘೋಷಿಸಲಾಗಿತ್ತು. ಇದೀಗ ಡಾಲಿ ಪಿಕ್ಚರ್ಸ್ ಅವರ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಿಸಲಾಗಿದೆ.
ಡಾಲಿ ಧನಂಜಯ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ಜೆಸಿ: ದಿ ಯೂನಿವರ್ಸಿಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ಅವರುಗಳು ‘ಜೆಸಿ’ ಸಿನಿಮಾನಲ್ಲಿ ನಟಿಸಿದ್ದು, ನಟ ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರುಗಳು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ, ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.
‘ಜೆಸಿ’ ಹೆಸರೇ ಹೇಳುತ್ತಿರುವಂತೆ ಇದು ಜೈಲಿನ ಕತೆ. ಸಹಜವಾಗಿಯೇ ಮಾಸ್ ಸಿನಿಮಾ. ಜೈಲಿನ ಸುತ್ತ ನಡೆಯುವ ಕಥೆ ಆದ್ದರಿಂದ ‘ಜೋಗಿ’ಯ ಸೂಪರ್ ಹಿಟ್ ಜೋಡಿ ಶಿವಣ್ಣ ಮತ್ತು ಪ್ರೇಮ್ ಇಬ್ಬರೂ ಸೇರಿ ಟ್ರೈಲರ್ ರಿಲೀಸ್ ಮಾಡಲು ಡಾಲಿ ಆಹ್ವಾನಿಸಿದ್ದರು. ಚೇತನ್ ಜೈರಾಮ್ ಅವರು ‘ಜೆಸಿ’ ಸಿನಿಮಾ ನಿರ್ದೇಶಿಸಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಜೈಲು ಒಳಗಿನ ಅವ್ಯವಹಾರ, ಕೈದಿಗಳ ದರ್ಬಾರ್, ಕೈದಿಗಳ ಮಾನವೀಯತೆ, ಅಮಾನವೀಯತೆ ಇನ್ನಿತರೆ ಅಂಶಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಫೈಟ್, ಕೊಲೆ, ರಕ್ತ, ಹಿಂಸೆಗಳ ನಡುವೆ ಅಪ್ಪ ಮಗನ ಭಾವನಾತ್ಮಕ ಕಥೆಯನ್ನು ಸಹ ಸಿನಿಮಾನಲ್ಲಿ ಹೇಳಲಾಗಿದೆ.
ಶಿವಣ್ಣ ಕೂಡ ಟ್ರೈಲರ್ ನೋಡಿ ತುಂಬಾ ಖುಷಿ ಪಟ್ಟರು. ಜೈಲ್ ಒಂದು ಪರಿವರ್ತನೆಯ ಜಾಗ, ಜೈಲಿಗೆ ಹೋಗಿ ಬಂದವರು ಅನೇಕರು ಬದಲಾಗುತ್ತಾರೆ ಎಂದರು. ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಕ್ವಾಲಿಟಿಗಳು ಪ್ರಖ್ಯಾತ್ ಅವರಲ್ಲಿ ಇದೆ. ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ, ಜೊತೆಗೆ ನೋಡಲು ಸಖತ್ ಸ್ಮಾರ್ಟ್ ಆಗಿದ್ದಾರೆ, ಲಕ್ ಕೂಡ ಇದೆ ಎಂದು ಪ್ರಖ್ಯಾತ್ ಅವರಿಗೆ ಹಾರೈಸಿದರು.
ಇದನ್ನೂ ಓದಿ:‘ಡಾಲಿ ಪಿಕ್ಚರ್ಸ್’ ಮೂಲಕ ಹೊಸ ಸುದ್ದಿ ನೀಡಿದ ಡಾಲಿ ಧನಂಜಯ್
ಜೆಸಿ ದಿ ಯೂನರ್ಸಿಟಿ ಟ್ರೈಲರ್ ಅನ್ನು ನಿರ್ದೇಶಕ ಪ್ರೇಮ್ ಮತ್ತು ಶಿವಣ್ಣ ಇಬ್ಬರು ಮೆಚ್ಚಿಕೊಂಡಿದ್ದಾಗಿ ಹೇಳಿದ್ದಾರೆ. ಶಿವಣ್ಣನ ಜೋತೆಗೆ ‘ಜೋಗಿ’ ಸಿನಿಮಾದ ಶೂಟಿಂಗ್ ಅನುಭವನ್ನು ಬಿಚ್ಚಿಟ್ಟ ಪ್ರೇಮ್, ‘ಯಾರಿಗೂ ಜೈಲಿನ ಅನುಭವ ಬೇಡ, ಅಲ್ಲಿ ದುಡ್ಡು ಇರೋನಿಗೆ ಮಾತ್ರ ಬೆಲೆ, ಎಷ್ಟೋ ಜನರಿಗೆ ಬೇಲ್ ಸಿಕ್ಕಿದ್ರು ಬಿಡಿಸಿಕೊಳ್ಳಲು ಆಗಲ್ಲ ಅಂತ ಸ್ಥಿತಿಯಲ್ಲಿದ್ದಾರೆ’ ಎಂದು ಪ್ರೇಮ್ ಜೈಲಿನ ಬಗ್ಗೆ ಹೇಳಿದರು. ಜೊತೆಗೆ ಯುವ ನಟರುಗಳಿಗೆ ಕೆಲವು ಸಲಹೆಗಳನ್ನು ಸಹ ನೀಡಿದರು.
ಟ್ರೈಲರ್ ರಿಲೀಸ್ ಮಾಡಿಕೊಟ್ಟ ಶಿವಣ್ಣ ಮತ್ತು ಜೋಗಿ ಪ್ರೇಮ್ ಅವರಿಗೆ ಡಾಲಿ ಧನ್ಯವಾದ ತಿಳಿಸಿದರು. ಚಿತ್ರರಂಗದಲ್ಲಿ ಒಬ್ಬ ಅಣ್ಣನ ಹಾಗೆ ಸಹಾಯಕ್ಕೆ ನಿಂತ ವ್ಯಕ್ತಿ ಶಿವಣ್ಣ. ನನ್ನ ಮೊದಲ ನಿರ್ಮಾಣದ ಸಿನಿಮಾದಿಂದ ಇಲ್ಲಿಯ ವರೆಗೂ ತುಂಬಾ ಸಹಾಯ ಮಾಡಿದ್ದಾರೆ ಎಂದು ಶಿವಣ್ಣನ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಹೀರೋ ಪ್ರಖ್ಯಾತ್ ಮಾತನಾಡಿ, ದುಡ್ಡು ಇರೋರೆಲ್ಲ ಹೀರೋ ಆಗಲು ಸಾಧ್ಯಿಲ್ಲ. ಜನ ಒಪ್ಕೊಬೇಕು, ಸರಸ್ವತಿ ಆಶೀರ್ವಾದ ಇರಬೇಕು. ಸೂಪರ್ ಸ್ಟಾರ್ ಮಕ್ಕಳುಗು ಫೇಲ್ ಆಗಿರೋದು ಇದೆ. ಬಡವರ ಮಕ್ಕಳು ಸೂಪರ್ ಸ್ಟಾರ್ ಆಗಿರುವ ಉದಾಹರಣೆಯೂ ಇದೆ. ದುಡ್ಡು ಇದ್ರೆ ಎಲಕ್ಷನ್ ಗೆಲ್ಲಬಹುದು ಆದರೆ ಸಿನಿಮಾ ಗೆಲ್ಲಿಸೋದು ಕಷ್ಟ’ ಎಂದರು. ಇನ್ನೂ ನಾಯಕಿ ಭಾವನಾ ರೆಡ್ಡಿ ಮಾತನಾಡಿ, ಹೊಸಬರಿಗೆ ಅವಕಾಶ ನೀಡುತ್ತಿರುವ ಡಾಲಿ ಧನಂಜಯ ಅವರಿಗೆ ಧನ್ಯವಾದ ತಿಳಿಸಿದರು. ಎಲ್ಲರೂ ಸಿನಿಮಾ ನೋಡಿ ಎಂದು ಕೇಳಕೊಂಡರು. ಸಿನಿಮಾ ಫೆಬ್ರವರಿ 6ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Sat, 17 January 26




