ಕುದುರೆಯಾ? ಹೆಗ್ಗಣವಾ? ಹೊಸ ಸಿನಿಮಾ ಘೋಷಿಸಿದ ಡಾಲಿ ಧನಂಜಯ್
Daali Dhananjay: ಡಾಲಿ ಧನಂಜಯ್ ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡೂವರೆ ವರ್ಷಗಳಾಗಿವೆ. ಆದರೆ ಪ್ರಸ್ತುತ ಅವರು ಐದು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆ ಡಾಲಿ ಧನಂಜಯ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ನಾಯಕನಾಗಿ ಅಲ್ಲ ಬದಲಿಗೆ ನಿರ್ಮಾಪಕನಾಗಿ. ಯಾವುದು ಆ ಸಿನಿಮಾ? ಸಿನಿಮಾದ ಹೆಸರೇನು? ನಾಯಕ-ನಾಯಕಿ ಯಾರು?

ಮದುವೆ ಆದ ಬಳಿಕ ಡಾಲಿ ಧನಂಜಯ್ (Daali Dhananjay) ಕಾಣೆ ಆಗಿದ್ದಾರೆ ಎಂಬುದು ಅಭಿಮಾನಿಗಳ ದೂರು. ಅಸಲಿಗೆ ಡಾಲಿ ಧನಂಜಯ್ ನಾಯಕನಾಗಿ ನಟಿಸಿದ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಪ್ರಸ್ತುತ ಡಾಲಿ ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಅವುಗಳ ಬಿಡುಗಡೆ ದಿನಾಂಕ ಖಾತ್ರಿ ಆಗಿಲ್ಲ. ಇದೆಲ್ಲದರ ನಡುವೆ ಡಾಲಿ ಧನಂಜಯ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಆದರೆ ನಾಯಕನಾಗಿ ಅಲ್ಲ ಬದಲಿಗೆ ನಿರ್ಮಾಪಕನಾಗಿ.
ಡಾಲಿ ಧನಂಜಯ್ ಅವರು ‘ಡಾಲಿ ಪಿಕ್ಚರ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು ಭಿನ್ನ ಕತೆಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿದ್ದಾರೆ. ಡಾಲಿಯ ನಿರ್ಮಾಣ ಸಂಸ್ಥೆಯ ವಿಶೇಷತೆಯೆಂದರೆ ಮಾಸ್, ಮಸಾಲ, ಕಮರ್ಶಿಯಲ್ ಸಿನಿಮಾಗಳ ಬದಲಿಗೆ ಕತೆ ಹೊಂದಿರುವ, ಸಾಮಾನ್ಯ ಪ್ರೇಕ್ಷಕನಿಗೆ ಕನೆಕ್ಟ್ ಆಗುವ ಸಿನಿಮಾಗಳನ್ನಷ್ಟೆ ಅವರು ನಿರ್ಮಿಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಪ್ರತಿಭಾವಂತ ಹೊಸ ನಿರ್ದೇಶಕರುಗಳಿಗೆ, ನಟರುಗಳಿಗೆ ಅವಕಾಶ ಕೊಡುತ್ತಾ ಬರುತ್ತಿದ್ದಾರೆ. ಇದೀಗ ಡಾಲಿ ಪಿಕ್ಚರ್ಸ್ ಕಡೆಯಿಂದ ಹೊಸ ಸಿನಿಮಾ ಘೋಷಿಸಿದ್ದಾರೆ ನಿರ್ಮಾಪಕ ಡಾಲಿ.
ಡಾಲಿ ಧನಂಜಯ್ ಅವರ ಆಪ್ತ ಮಿತ್ರರಲ್ಲಿ ಒಬ್ಬರಾಗಿರು ಮೈಸೂರು ಪೂರ್ಣ ನಾಯಕನಾಗಿ ನಟಿಸಿರುವ ‘ಹೆಗ್ಗಣ ಮುದ್ದು’ ಹೆಸರಿನ ಸಿನಿಮಾವನ್ನು ಘೋಷಿಸಲಾಗಿದ್ದು, ಸಿನಿಮಾದ ಬಿಡುಗಡೆ ಆದಷ್ಟು ಶೀಘ್ರವೇ ಆಗಲಿದೆ ಎಂದಿದ್ದಾರೆ. ಸಿನಿಮಾನಲ್ಲಿ ಮೈಸೂರು ಪೂರ್ಣ ಜೊತೆಗೆ ನಾಯಕಿಯಾಗಿ ಖ್ಯಾತ ಕಲಾವಿದ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ನಟಿಸುತ್ತಿದ್ದಾರೆ. ಈ ಹಿಂದೆ ಶಿವರಾಜ್ ಕುಮಾರ್ ನಟನೆಯ ‘ವೇದ’ ಸಿನಿಮಾನಲ್ಲಿ ನಟಿಸಿ ಅದಿತಿ ಸಾಗರ್ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:ನಾನು ಡಾಲಿ ಧನಂಜಯ್ ಅಭಿಮಾನಿ ಎಂದ ಸಿದ್ಧಾರ್ಥ್, ಕೊಟ್ಟರು ಕಾರಣ
‘ಹೆತ್ತವರಿಗೆ ಹೆಗ್ಗಣ ಮುದ್ದು’ ಗಾದೆಯಿಂದ ಸ್ಪೂರ್ತಿ ಪಡೆದು ಸಿನಿಮಾದ ಹೆಸರನ್ನು ಇರಿಸಲಾಗಿದೆ. ವ್ಯಕ್ತಿ ಕುದುರೆಯೋ ಅಥವಾ ಹೆಗ್ಗಣವೊ ಎಂಬ ಜಿಜ್ಞಾಸೆ ಸಿನಿಮಾದ ಕತೆಯಲ್ಲಿ ಇದೆ. ಸಿನಿಮಾವನ್ನು ಅವಿನಾಶ್ ಬಳೆಕ್ಕಳ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊಟ್ಟ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು ಸಿನಿಮಾದ ಬಿಡುಗಡೆ ಆದಷ್ಟು ಶೀಘ್ರವಾಗಿ ಆಗಲಿದೆ. ಅಂದಹಾಗೆ ಇದು ಡಾಲಿ ನಿರ್ಮಾಣ ಮಾಡುತ್ತಿರುವ ಆರನೇ ಸಿನಿಮಾ ಇದಾಗಿದೆ.
ತಮ್ಮ ನಿರ್ಮಾಣದ ಸಿನಿಮಾಗಳಲ್ಲಿ ಡಾಲಿ ಧನಂಜಯ್ ಅತಿಥಿ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ‘ಹೆಗ್ಗಣ ಮುದ್ದು’ ಸಿನಿಮಾನಲ್ಲಿಯೂ ಡಾಲಿ ನಟಿಸುವ ಸಾಧ್ಯತೆ ಇದೆ. ಇನ್ನು ಡಾಲಿ ಧನಂಜಯ್ ಪ್ರಸ್ತುತ ‘ಜಿಂಗೊ’, ‘ಹಲಗಲಿ’, ‘ಅಣ್ಣ ಫ್ರಂ ಮೆಕ್ಸಿಕೊ’, ‘666 ಆಪರೇಷನ್ ಡ್ರೀಮ್ ಥಿಯೇಟರ್’, ‘ಉತ್ತರಕಾಂಡ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




