ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ದೇಶಾದ್ಯಂತ ಖ್ಯಾತಿ ಗಳಿಸಿದ್ದಾರೆ. ‘ಕಾಂತಾರ’ (Kantara Movie) ಸಿನಿಮಾದಿಂದ ಅವರಿಗೆ ಸಿಕ್ಕ ಯಶಸ್ಸು ತುಂಬ ದೊಡ್ಡದು. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 400 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸಿದ್ದು ಹೆಮ್ಮೆಯ ಸಂಗತಿ. ಇತರೆ ಭಾಷೆಯ ಅನೇಕ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿ ಅವರ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅದರ ಜೊತೆಗೆ ಒಂದಷ್ಟು ಪ್ರಶಸ್ತಿಗಳು ಕೂಡ ಅವರನ್ನು ಅರಸಿ ಬರುತ್ತಿವೆ. ಈಗ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ (Dadasaheb Phalke International Film Festival Award) ಘೋಷಣೆ ಆಗಿದೆ. ಫೆಬ್ರವರಿ 20ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಂಬೈನ ತಾಜ್ ಲ್ಯಾಂಡ್ಸ್ ಎಂಡ್ ಹೋಟೆಲ್ನಲ್ಲಿ ಈ ಸಮಾರಂಭ ನಡೆಯಲಿದೆ.
ಹಲವು ವಿಭಾಗಗಳಲ್ಲಿ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ನೀಡಲಾಗುತ್ತಿದೆ. ರಿಷಬ್ ಶೆಟ್ಟಿ ಅವರು ‘ಅತ್ಯಂತ ಭರವಸೆಯ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಗೌರವ ಸಿಕ್ಕಿರುವುದಕ್ಕೆ ಅಭಿಮಾನಿಗಳು, ಆಪ್ತರು ಹಾಗೂ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ರಿಷಬ್ ಶೆಟ್ಟಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ದಾದಾ ಸಾಹೇಬ್ ಫಾಲ್ಕೆ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ಹೆಸರಿನಲ್ಲಿ ಭಾರತ ಸರ್ಕಾರ ಪ್ರಶಸ್ತಿ ನೀಡುತ್ತದೆ. ಚಿತ್ರರಂಗದಲ್ಲಿ ಜೀವಮಾನ ಸಾಧನೆ ಮಾಡಿದವರಿಗೆ ಆ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಈಗ ರಿಷಬ್ ಶೆಟ್ಟಿ ಅವರಿಗೆ ಬಂದಿರುವ ಪ್ರಶಸ್ತಿಯೇ ಬೇರೆ. ಖಾಸಗಿ ಸಂಸ್ಥೆ ವತಿಯಿಂದ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’ ಕೊಡಲಾಗುತ್ತಿದೆ.
ಇದನ್ನೂ ಓದಿ: Rishab Shetty: ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ; ಪತ್ನಿ ಜತೆಗಿನ ಚಂದದ ಫೋಟೋ ಹಂಚಿಕೊಂಡ ‘ಕಾಂತಾರ’ ಹೀರೋ
‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ಆಗಿದ್ದಾರೆ. ಅವರ ಮುಂದಿನ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಸೃಷ್ಟಿ ಆಗಿದೆ. ‘ಕಾಂತಾರ 2’ ಚಿತ್ರಕ್ಕೆ ಜೂನ್ನಲ್ಲಿ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಇದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿರಲಿದೆ. ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲು ‘ಹೊಂಬಾಳೆ ಫಿಲ್ಮ್ಸ್’ ಸಕಲ ತಯಾರಿ ಮಾಡಿಕೊಂಡಿದೆ.
ರಿಷಬ್ ಶೆಟ್ಟಿ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಹಲವು ವರ್ಷಗಳಿಂದ ಅವರು ಸಕ್ರಿಯರಾಗಿದ್ದಾರೆ. ನಿರ್ದೇಶಕನಾಗಿ ‘ರಿಕಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ರಿಕ್ಕಿ’ ಮುಂತಾದ ಸಿನಿಮಾಗಳನ್ನು ಅವರು ನೀಡಿದ್ದಾರೆ. ‘ಕಾಂತಾರ’ ಚಿತ್ರಕ್ಕೆ ನಿರ್ದೇಶನ ಮಾಡಿ, ಮುಖ್ಯ ಭೂಮಿಕೆ ನಿಭಾಯಿಸಿದ ಅವರು ಇಡೀ ದೇಶದ ಗಮನ ಸೆಳೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:35 pm, Wed, 15 February 23