ಬೆಂಗಳೂರು: ಲಾಕ್ಡೌನ್ ಅವಧಿಯಲ್ಲಿ ತೆರೆಕಂಡ ‘ಫ್ರೆಂಚ್ ಬಿರಿಯಾನಿ’ ಬಳಿಕ ಮತ್ತೊಂದು ಚಿತ್ರ ನೀಡಲು ಕಾಮಿಡಿಯನ್ ದಾನಿಶ್ ಸೇಠ್ ಕಾತುರರಾಗಿದ್ದಾರೆ. ಆ ಮೂಲಕ ದಾನಿಶ್, ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಉಡುಗೊರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಷಯ ಹಂಚಿಕೊಂಡಿರುವ ದಾನಿಶ್ ಸೇಠ್, ಹೊಸ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.
‘ಒನ್ ಕಟ್ ಟೂ ಕಟ್’ಗೆ ಮತ್ತೋರ್ವ ಸ್ಟಾಂಡಪ್ ಕಾಮಿಡಿಯನ್ ನಿರ್ದೇಶಕ!
ದಾನಿಶ್ ಸೇಠ್ ಮೂರನೇ ಚಿತ್ರ ‘ಒನ್ ಕಟ್ ಟೂ ಕಟ್’ಗೆ ಮತ್ತೊಬ್ಬ ಸ್ಟಾಂಡಪ್ ಕಾಮಿಡಿಯನ್, ವಂಸಿಧರ್ ಭೋಗರಾಜು ಆಕ್ಷನ್ ಕಟ್ ಹೇಳಲಿದ್ದಾರೆ. ತಮ್ಮ ಎರಡನೇ ಚಿತ್ರ ನಿರ್ಮಿಸಿರುವ ಪುನೀತ್ ರಾಜ್ಕುಮಾರ್ ನಿರ್ಮಾಣ ಸಂಸ್ಥೆ PRK ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವೂ ನಿರ್ಮಾಣವಾಗಲಿದೆ. ಫೆಬ್ರವರಿಯಿಂದ ಚಿತ್ರೀಕರಣ ಆರಂಭವಾಗಲಿರುವ ಬಗ್ಗೆ ಹೇಳಿರುವ ತಂಡ, ಉಳಿದ ವಿವರಗಳನ್ನು ಬಿಟ್ಟುಕೊಟ್ಟಿಲ್ಲ.
ಚಿತ್ರದ ಉಪ ಶೀರ್ಷಿಕೆಯಾಗಿ ’ಆನ್ ಫ್ಲವರ್ ಇಸ್ ಕೇಮ್’ ಎಂದು ಬಟ್ಲರ್ ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಬೋರ್ಡ್ ಎದುರಿನಲ್ಲಿ ನಿಂತಿರುವ ದಾನಿಶ್ ಸೇಠ್, ಫಾರ್ಮಲ್ ಬಟ್ಟೆ ಧರಿಸಿ, ಟೈ ಹಾಕಿ ಕಾಣಿಸಿಕೊಂಡಿದ್ದಾರೆ. ಬೋರ್ಡ್ ಮೇಲೆ 2021 ಎಂದು ಬರೆದಿರುವುದು, ಚಿತ್ರವು ಈ ವರ್ಷವೇ ತೆರೆಕಾಣಲಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.
‘ಗೋಪಿ’ ಅವತಾರದ ವಿಶೇಷತೆ ಏನು?
ದಾನಿಶ್ ಸೇಠ್, ಹತ್ತು ಹಲವು ಪಾತ್ರಗಳನ್ನು ವಿಭಿನ್ನ ಭಾಷೆ ಹಾಗೂ ಸ್ವರಗಳ ಮೂಲಕ ತೋರಿಸಿ ಜನರ ಮನರಂಜಿಸಿದ ಕಾಮಿಡಿಯನ್ ಆಗಿದ್ದಾರೆ. ನೋಗ್ರಾಜ್, ಜಯಾ, ಅಸ್ಗರ್, ನಾಗೇಶ್, ಕುಡ್ಕ ಹೀಗೆ ಹತ್ತಾರು ಪಾತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಇಂಥದ್ದೇ ಒಂದು ಪಾತ್ರ ’ಗೋಪಿ’ಯ ಬಗ್ಗೆ ‘ಒನ್ ಕಟ್ ಟೂ ಕಟ್’ ಚಿತ್ರ ತಯಾರಾಗಲಿದೆ ಎಂದು ದಾನಿಶ್ ಸೇಠ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.
ಗೋಪಿ ಎಂಬುದು ಒಂದು ಫಿಕ್ಷನಲ್ ಪಾತ್ರವಾಗಿದ್ದು. ಅರ್ಧಂಬರ್ಧ ಇಂಗ್ಲಿಷ್ ಬರುವ, ಬಟ್ಲರ್ ಇಂಗ್ಲಿಷ್ ಆದರೂ ಸರಿ, ಅದನ್ನೇ ಮಾತಾಡುವ ಮುಗ್ಧ ಅಥವಾ ಪೆದ್ದುತನ ತೋರಿಸುವ ಪಾತ್ರವಾಗಿದೆ. ಮೊದಲ ಸಿನಿಮಾ ’ಹಂಬಲ್ ಪೊಲಿಟಿಷಿಯನ್ ನೋಗ್ರಾಜ್’ನಲ್ಲಿ ನೋಗ್ರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಾನಿಶ್, ಎರಡನೇ ಚಿತ್ರ ‘ಫ್ರೆಂಚ್ ಬಿರಿಯಾನಿ’ಯಲ್ಲಿ ಅಸ್ಗರ್ ಆಗಿ ಮಿಂಚಿದ್ದರು.
ದಾನಿಶ್ ಸೇಠ್ ತಮ್ಮ ಪಾತ್ರಗಳಿಗಷ್ಟೇ ಸೀಮಿತರಾಗುತ್ತಾರಾ?
ಈ ಹಿಂದಿನ ಎರಡೂ ಸಿನಿಮಾಗಳಲ್ಲಿ ತಮ್ಮದೇ ಪಾತ್ರಗಳ ಮೂಲಕ ಮಿಂಚಿದ್ದ ನಟ, ಮೂರನೇ ಚಿತ್ರದಲ್ಲೂ ‘ಗೋಪಿ’ಯಾಗಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಈ ಪ್ರಶ್ನೆಯನ್ನು ಹುಟ್ಟುಹಾಕಿದೆ. ದಾನಿಶ್ ಸೇಠ್, ತಾವು ಸೃಷ್ಟಿಸಿದ ಪಾತ್ರಗಳಿಗಷ್ಟೇ ಸೀಮಿತವಾಗುತ್ತಾರಾ ಎಂದು ಕೇಳುವಂತೆ ಮಾಡಿದೆ.
ಈ ಪಾತ್ರಗಳು ಮೆಟ್ರೋ ಸಿಟಿಯ ಪ್ರೇಕ್ಷಕ ವರ್ಗಕ್ಕೆ ಬಹುಬೇಗ ಅರ್ಥವಾಗುತ್ತವೆ. ಇದನ್ನು ಧನಾತ್ಮಕ ಅಂಶವಾಗಿ ಪರಿಗಣಿಸಬಹುದು. ಆದರೆ, ದಾನಿಶ್ ಸೇಠ್ ಹ್ಯೂಮರ್ ಅರ್ಥವಾಗುವ ಸಾಮರ್ಥ್ಯ ಇರದ, ಇಂಗ್ಲಿಷ್ ಬಾರದ, ಸಾಮಾಜಿಕ ಜಾಲತಾಣದ ಮೂಲಕ ದಾನಿಶ್ ಸೇಠ್ ತಿಳಿದಿರದ ದೊಡ್ಡ ವರ್ಗದ ಪ್ರೇಕ್ಷಕ ಸಮೂಹಕ್ಕೆ ಈ ಬಗೆಯ ಸಿನಿಮಾಗಳು ತಲುಪಲಿವೆಯಾ ಎಂಬ ಗೊಂದಲಗಳೂ ಜೊತೆಗಿರುವ ಬಗ್ಗೆ ಯೋಚಿಸಬೇಕಿದೆ. ಕಳೆದೆರಡು ಸಿನಿಮಾಗಳನ್ನು OTT ಮೂಲಕ ತೆರೆಕಾಣಿಸಿದ PRK ಪ್ರೊಡಕ್ಷನ್ಸ್ (ಅದರಲ್ಲಿ ಫ್ರೆಂಚ್ ಬಿರಿಯಾನಿಯೂ ಒಂದು) ಈ ಸಿನಿಮಾವನ್ನು ಯಾವ ವಿಧಾನದಲ್ಲಿ ಜನರ ಮುಂದೆ ತರಲಿದೆ ಎಂಬ ಕುತೂಹಲವೂ ಸಿನಿರಸಿಕರಲ್ಲಿ ಮೂಡಿದೆ.
2021 a new movie is came! @PRK_Productions is here to entertain you with an Gopi. Directed by @VamBho this is definitely going to be an absolute freak out film ok! Filming starts in February#PRK #PRKProductions #PRKAudio #PuneethRajkumar #OneCutTwoCut @AvinashiAds pic.twitter.com/8tmQ42lZCC
— Danish Sait (@DanishSait) January 1, 2021
Published On - 2:55 pm, Tue, 5 January 21