ಬಿ.ಎಂ. ಗಿರಿರಾಜ ನಿರ್ದೇಶನದ ‘ಕಲ್ಯಾಣಿ’ ಟ್ರೇಲರ್ ಬಿಡುಗಡೆ ಮಾಡಿದ ಡಾರ್ಲಿಂಗ್ ಕೃಷ್ಣ

‘ಜಟ್ಟ’, ‘ಮೈತ್ರಿ’ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಬಿ.ಎಂ. ಗಿರಿರಾಜ ಅವರು ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅವರ ಹೊಸ ಸಿನಿಮಾ ‘ಕಲ್ಯಾಣಿ’ ಮೇಲೆ ಭರವಸೆ ಮೂಡಿದೆ. ಕೆಲವು ತಿಂಗಳ ಹಿಂದಷ್ಟೇ ಸಿನಿಮಾದ ಹಾಡುಗಳನ್ನು ಬಿಡುಗಡೆ ಮಾಡಲಾಗಿತ್ತು. ಇತ್ತೀಚೆಗೆ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಬಿ.ಎಂ. ಗಿರಿರಾಜ ನಿರ್ದೇಶನದ ‘ಕಲ್ಯಾಣಿ’ ಟ್ರೇಲರ್ ಬಿಡುಗಡೆ ಮಾಡಿದ ಡಾರ್ಲಿಂಗ್ ಕೃಷ್ಣ
Kalyani Kannada Film Trailer Launch

Updated on: Nov 26, 2026 | 7:30 PM

ಬಿ.ಎಂ. ಗಿರಿರಾಜ ಅವರು ನಿರ್ದೇಶನ ಮಾಡಿರುವ ‘ಕಲ್ಯಾಣಿ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಲೇಖಕ ಬಸವ ರೆಡ್ಡಿ ಬರೆದ ಕಥೆಯನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಗಿರಿರಾಜ ಅವರು ನಿರ್ದೇಶನದ ಜೊತೆಗೆ ಚಿತ್ರಕಥೆ ಬರೆದಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ ಕಾರ್ಯಕಾರಿ ನಿರ್ಮಾಪಕರಾಗಿ 45ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ ಅನುಭವವಿರುವ ಕುಮಾರಸ್ವಾಮಿ ಆರ್. ಅವರು ‘ಆರ್.ಕೆ. ಸಿನಿಮಾಸ್’ ಮೂಲಕ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕಥೆಯ ಬಗ್ಗೆ ಟ್ರೇಲರ್ ಮೂಲಕ ಸುಳಿವು ನೀಡಲಾಗಿದೆ.

ಈ ವೇಳೆ ನಟ ಡಾರ್ಲಿಂಗ್ ಕೃಷ್ಣ ಅವರು ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದರು. ‘ಸಾಮಾನ್ಯವಾಗಿ ಸಿನಿಮಾದಲ್ಲಿರುವ ಒಳ್ಳೆಯ ದೃಶ್ಯಗಳನ್ನು ಕಟ್ ಮಾಡಿ ಟ್ರೇಲರ್ ಮಾಡಿರುತ್ತಾರೆ. ಟ್ರೇಲರ್ ನೋಡಿದವರಿಗೆ ಸಿನಿಮಾದ ಕಥೆ, ಶೈಲಿ ಎಲ್ಲದರ ಬಗ್ಗೆಯೂ ಮಾಹಿತಿ ಸಿಗುತ್ತದೆ. ಆದರೆ ‘ಕಲ್ಯಾಣಿ’ ಸಿನಿಮಾದ ಟ್ರೇಲರ್ ನೋಡಿದಾಗ ಒಳ್ಳೆಯ ದೃಶ್ಯಗಳು ಕಂಡರೂ, ಸಿನಿಮಾದ ಕಥೆ, ಶೈಲಿ ಯಾವುದರ ಬಗ್ಗೆಯೂ ಗೊತ್ತಾಗುವುದಿಲ್ಲ. ಅಷ್ಟು ನಾಜೂಕಾಗಿ ನಿರ್ದೇಶಕರು ಟ್ರೇಲರ್ ಕಟ್ ಮಾಡಿದ್ದಾರೆ. ಟ್ರೇಲರ್ ನೋಡಿದರೆ ಕನ್ನಡಕ್ಕೆ ಇದೊಂದು ವಿಭಿನ್ನ ಸಿನಿಮಾವಾಗುತ್ತದೆ ಎಂಬ ಭರವಸೆ ಮೂಡುತ್ತದೆ’ ಎಂದು ಅವರು ಹೇಳಿದರು.

Loading...

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ.ಮ. ಹರೀಶ್, ಹಿರಿಯ ನಿರ್ಮಾಪಕ ಎಂ.ಎನ್. ಕುಮಾರ್, ನಟ ರಾಕೇಶ್ ಅಡಿಗ, ರ್ಯಾಪರ್ ಅಲೋಕ್ ಅವರು ಕೂಡ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ರಂಗಭೂಮಿ ನಟ ಸಾಮ್ರಾಟ್ ಶೆಟ್ಟಿ ಅವರು ‘ಕಲ್ಯಾಣಿ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

Kalyani Official Trailer | B.M Giriraj | Simran Kaur | Saamrat Shetty

ಉತ್ತರ ಭಾರತದ ನಟಿ ಸಿಮ್ರನ್ ಕೌರ್, ರಾಹುಲ್ ಜೇಟ್ಲಿ, ಶಮಂತ್ ರಾವ್, ಯಮುನಾ ಶ್ರೀನಿಧಿ, ಪಿ.ಡಿ. ಸತೀಶ್ ಚಂದ್ರ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ಸೇರಿದಂತೆ ಹಲವು ಕಲಾವಿದರು ‘ಕಲ್ಯಾಣಿ’ ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಟ್ರೇಲರ್ ಬಿಡುಗಡೆ ಬಳಿಕ ನಿರ್ದೇಶಕ ಬಿ.ಎಂ. ಗಿರಿರಾಜ ಅವರು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡರು.

‘ನವಿರಾದ ಒಲವಿನ ಕಥೆಯನ್ನು ಮುನ್ನೆಲೆಯಾಗಿಟ್ಟುಕೊಂಡು ಮಾಡಿದ ಸಿನಿಮಾ ಇದು. ನಂಬಿಕೆ, ಸ್ನೇಹ, ಐಡೆಂಟಿಟಿಯ ವಿಷಯಗಳ ಜೊತೆಗೆ ಸಂಸ್ಕೃತಿಗಳ ಮುಖಾಮುಖಿ ಈ ಸಿನಿಮಾದಲ್ಲಾಗುತ್ತದೆ. ಉತ್ತರ ಭಾರತದ ಹುಡುಗಿ ಹಾಗೂ ದಕ್ಷಿಣ ಭಾರತದ ಹುಡುಗನ ಪಾತ್ರಗಳನ್ನು ಪ್ರಧಾನವಾಗಿ ಇಟ್ಟುಕೊಂಡು ಎರಡು ಸಂಸ್ಕೃತಿಗಳ ಅನಾವರಣವನ್ನು ಈ ಚಿತ್ರದಲ್ಲಿ ಮಾಡುವ ಪ್ರಯತ್ನ ಮಾಡಿದ್ದೇವೆ. ನಾನು ಇಲ್ಲಿಯವರೆಗೆ ಮಾಡಿರುವ ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನವಾಗಿರುವ ಸಿನಿಮಾ ಇದಾಗಿದೆ’ ಎಂದು ಗಿರಿರಾಜ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲು ಸಜ್ಜಾದ ಉಪೇಂದ್ರ; ಶೀಘ್ರದಲ್ಲೇ ಹೊಸ ಸಿನಿಮಾ ಘೋಷಣೆ

ಬಿ.ಜೆ. ಭರತ್ ಅವರು ‘ಕಲ್ಯಾಣಿ’ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಪ್ರಶಾಂತ ಸಾಗರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ ಮಾಡಿದ್ದಾರೆ. ಭಟ್ಕಳ, ಬೆಂಗಳೂರು ಸುತ್ತಮುತ್ತ ಬಹುತೇಕ ಶೂಟಿಂಗ್ ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us