ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್

ಡಾರ್ಲಿಂಗ್ ಕೃಷ್ಣ ನಟನೆಯ, ಶಶಾಂಕ್ ನಿರ್ದೇಶನದ ‘ಬ್ರ್ಯಾಟ್’ ಸಿನಿಮಾಗೆ ಕಿಚ್ಚ ಸುದೀಪ್ ಅವರ ಬೆಂಬಲ ಸಿಕ್ಕಿದೆ. ಮಂಜುನಾಥ್, ಬದ್ರಿನಾಥ್ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ಕಿಚ್ಚ ಸುದೀಪ್ ಅವರು ‘ಬ್ರ್ಯಾಟ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಡಾರ್ಲಿಂಗ್ ಕೃಷ್ಣ ನಟನೆಯ ‘ಬ್ರ್ಯಾಟ್’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಕಿಚ್ಚ ಸುದೀಪ್
Brat Movie Trailer Launch Event

Updated on: Oct 17, 2025 | 7:32 PM

ನಟ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ನಿರ್ದೇಶಕ ಶಶಾಂಕ್ ಅವರದ್ದು ಹಿಟ್ ಕಾಂಬಿನೇಷನ್. ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಿಂದ ಯಶಸ್ಸು ಕಂಡಿದ್ದ ಅವರಿಬ್ಬರು ಈಗ ‘ಬ್ರ್ಯಾಟ್’ ಸಿನಿಮಾ (Brat Kannada Movie) ಮಾಡಿದ್ದಾರೆ. ಈಗಾಗಲೇ ‘ನಾನೇ ನೀನಂತೆ..’ ಹಾಗೂ ‘ಗಂಗಿ ಗಂಗಿ..’ ಹಾಡಿನಿಂದ ಸಖತ್ ಸದ್ದು ಮಾಡಿರುವ ಈ ಸಿನಿಮಾದ ಟ್ರೇಲರ್​ ಈಗ ಬಿಡುಗಡೆ ಮಾಡಲಾಗಿದೆ. ನಟ ಕಿಚ್ಚ ಸುದೀಪ್ (Kichcha Sudeep) ಅವರು ‘ಬ್ರ್ಯಾಟ್’ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಬಳಿಕ ಅವರು ಚಿತ್ರತಂಡದ ಬಗ್ಗೆ ಮಾತನಾಡಿದರು ಹಾಗೂ ಶುಭ ಕೋರಿದರು. ಟ್ರೇಲರ್ ಮೂಲಕ ಸಿನಿಮಾದ ಕಥೆಯ ಬಗ್ಗೆ ಸುಳಿವು ಸಿಕ್ಕಿದೆ.

ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿದ್ದಾರೆ. ‘ಬ್ರ್ಯಾಟ್’ ಎಂಬ ಶೀರ್ಷಿಕೆಗೆ ತಕ್ಕಂತೆಯೇ ಅವರ ಪಾತ್ರ ಇದೆ. ಹೇಗಾದರೂ ಸರಿ, ದುಡ್ಡು ಮಾಡಬೇಕು ಎಂಬ ಗುರಿ ಇಟ್ಟುಕೊಂಡಿರುವ ವ್ಯಕ್ತಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಕೈ ಹಾಕಿದಂತಿದೆ. ಟ್ರೇಲರ್​ ನೋಡಿದ ಬಳಿಕ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಡಬಲ್ ಆಗಿದೆ.

ಟ್ರೇಲರ್ ಬಿಡುಗಡೆ ಮಾಡಿ ಸುದೀಪ್ ಅವರು ಮಾತನಾಡಿದರು. ‘ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾ ಮಾಡಲು ತುಂಬ ಒದ್ದಾಡಿರುತ್ತಾರೆ. ಯಾಕೆಂದರೆ ಬ್ರ್ಯಾಟ್ ಆಗಬೇಕಾದ ಅಂಶ ಡಾರ್ಲಿಂಗ್ ಕೃಷ್ಣ ಅವರಲ್ಲಿ ಇಲ್ಲ. ಅವರನ್ನು ಕ್ಲೀನ್ ಕೃಷ್ಣಪ್ಪ ಅಂತ ನಾವು ಕರೆಯುತ್ತೇವೆ. ಅಂತ ವ್ಯಕ್ತಿಯ ಸಿನಿಮಾಗೆ ಈ ರೀತಿ ಟೈಟಲ್ ಇಡಬೇಕಾದರೆ ತುಂಬ ಧೈರ್ಯ ಬೇಕು. ಸಿಗರೇಟ್ ಇತ್ಯಾದಿ ಕೃಷ್ಣ ಅವರಿಗೆ ಸೂಟ್ ಆಗಲ್ಲ. ಆದರೆ ದುಡ್ಡನ್ನು ಅವರು ನೋಡುವ ರೀತಿ ಹೊಂದಿಕೆ ಆಗುತ್ತದೆ’ ಎಂದರು ಕಿಚ್ಚ ಸುದೀಪ್.

‘ಬ್ರ್ಯಾಟ್’ ಸಿನಿಮಾ ಟ್ರೇಲರ್:

‘ಅರ್ಜುನ್ ಜನ್ಯ ಇರುವ ಕಡೆ ಸೌಂಡ್ ಇದ್ದೇ ಇರುತ್ತದೆ. ಅಲ್ಲಿ ಗೆಲವು ಇದ್ದೇ ಇರುತ್ತದೆ. ನಿರ್ಮಾಪಕರಿಗೆ ಶುಭ ಕೋರುತ್ತೇನೆ. ನಟಿ ಮನಿಷಾ ಅವರಿಗೆ ಕನ್ನಡ ಚಿತ್ರರಂಗಕ್ಕೆ ಸ್ವಾಗತ ಕೋರುತ್ತೇನೆ’ ಎಂದು ಹೇಳಿದ ಕಿಚ್ಚ ಸುದೀಪ್ ಅವರು ಶಶಾಂಕ್ ಅವರ ಪ್ರತಿಭೆ ಬಗ್ಗೆ ಮಾತನಾಡಿದರು. ‘ಶಶಾಂಕ್ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಇನ್ನೂ ಅವರು ಸಿನಿಮಾ ಮಾಡಿಲ್ಲ. ಇನ್ನಷ್ಟು ಯಶಸ್ಸು ಅವರಿಗೆ ಸಿಗಬೇಕು. ಎಲ್ಲ ಕಲಾವಿದರನ್ನು ತಲೆಯಿಂದ ತೆಗೆದು ನೀವು ಒಂದು ಕಥೆ ಬರೆದು ಸಿನಿಮಾ ಮಾಡಿ. ನಿಮಗೆ ಶುಭವಾಗಲಿ’ ಎಂದು ಕಿಚ್ಚ ಸುದೀಪ್ ಅವರು ಹೇಳಿದರು.

ಇದನ್ನೂ ಓದಿ: ಗಂಗಿ ಗಂಗಿ ಹಾಡಿಗೆ ಡಾರ್ಲಿಂಗ್ ಕೃಷ್ಣ ಮಗಳ ಡ್ಯಾನ್ಸ್ ನೋಡಿ..

ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರು ಮಾತನಾಡಿ, ‘ಪ್ಲ್ಯಾನ್ ಮಾಡಿದ ಪ್ರಕಾರವೇ ಸಿನಿಮಾ ಮಾಡಿದ ಶಶಾಂಕ್ ಅವರಿಗೆ ಧನ್ಯವಾದ ಹೇಳುತ್ತೇನೆ. ಸಿನಿಮಾ ತುಂಬ ಚೆನ್ನಾಗಿ ಮೂಡಿಬಂದಿದೆ. ಸುದೀಪ್ ಅವರು ಉತ್ತಮ ಕ್ರಿಕೆಟರ್. ನಮ್ಮ ಸಿನಿಮಾದಲ್ಲಿ ಕೂಡ ಕ್ರಿಕೆಟ್ ಕಥೆ ಇದೆ. ಅವರು ಬಂದು ನಮ್ಮ ಟ್ರೇಲರ್ ಬಿಡುಗಡೆ ಮಾಡಿದ್ದು ಖುಷಿ ಆಯಿತು’ ಎಂದರು.

ನಿರ್ದೇಶಕ ಶಶಾಂಕ್ ಅವರು ಮಾತನಾಡಿ, ‘ನಮ್ಮ ಪಾಲಿಗೆ ಸುದೀಪ್ ಸರ್ ಲಕ್ಕಿ. ಅವರೇ ಕೌಸಲ್ಯ ಸುಪ್ರಜಾ ರಾಮಾ ಸಿನಿಮಾದ ಟ್ರೇಲರ್ ಲಾಂಚ್ ಮಾಡಿದ್ದರು. ಆ ಚಿತ್ರ ಹಿಟ್ ಆಯಿತು. ಈಗ ಬ್ರ್ಯಾಟ್ ಸಿನಿಮಾ ಅದಕ್ಕಿಂತ 10 ಪಟ್ಟು ದೊಡ್ಡ ಹಿಟ್ ಆಗಲಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಈಗ ಕನ್ನಡ ಟ್ರೇಲರ್ ಬಿಡುಗಡೆ ಆಗಿದೆ. ಸಿನಿಮಾ ಕೂಡ ಮೊದಲು ಕನ್ನಡದಲ್ಲಿ ಬಿಡುಗಡೆ ಆಗಿ ನಂತರ ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲಿದೆ’ ಎಂದು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.