ಬೇರೆ ಭಾಷೆಗಳಲ್ಲೂ ಬರಲಿದೆ ‘ಬ್ರ್ಯಾಟ್’ ಸಿನಿಮಾ: ಕನ್ನಡದಲ್ಲಿ ಸಿಕ್ತು ಗೆಲುವು

ಡಾರ್ಲಿಂಗ್ ಕೃಷ್ಣ, ಮನಿಷಾ ಕಂದಕೂರ್ ನಟನೆಯ ‘ಬ್ರ್ಯಾಟ್’ ಸಿನಿಮಾ ಗೆದ್ದಿದ್ದು, ಚಿತ್ರತಂಡಕ್ಕೆ ಖುಷಿ ಆಗಿದೆ. ‘ಕೃಷ್ಣ ಲೀಲಾ’ ಖ್ಯಾತಿಯ ನಿರ್ದೇಶಕ ಶಶಾಂಕ್ ಅವರು ‘ಬ್ರ್ಯಾಟ್’ ಮೂಲಕ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಕನ್ನಡದಲ್ಲಿ ಯಶಸ್ಸು ಕಂಡಿದ್ದರಿಂದ ಬೇರೆ ಭಾಷೆಗಳಲ್ಲಿ ಕೂಡ ಈ ಸಿನಿಮಾವನ್ನು ರಿಲೀಸ್ ಮಾಡಲು ತಯಾರಿ ನಡೆದಿದೆ.

ಬೇರೆ ಭಾಷೆಗಳಲ್ಲೂ ಬರಲಿದೆ ‘ಬ್ರ್ಯಾಟ್’ ಸಿನಿಮಾ: ಕನ್ನಡದಲ್ಲಿ ಸಿಕ್ತು ಗೆಲುವು
Brat Movie Team

Updated on: Nov 04, 2025 | 6:31 PM

ಈ ಮೊದಲು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದಿಂದ ಗೆಲುವು ಕಂಡಿದ್ದ ನಟ ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್ (Director Shashank) ಅವರು ಈಗ ಇನ್ನೊಂದು ಯಶಸ್ಸು ಕಂಡಿದ್ದಾರೆ. ಹೌದು, ಈ ಕಾಂಬಿನೇಷನ್​ನಲ್ಲಿ ಬಂದಿರುವ ‘ಬ್ರ್ಯಾಟ್’ ಸಿನಿಮಾ (Brat Movie) ಸಕ್ಸಸ್ ಆಗಿದೆ. ಈ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಮಂಜುನಾಥ್ ಕಂದಕೂರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಡಾರ್ಲಿಂಗ್ ಕೃಷ್ಣ (Darling Krishna) ಅವರಿಗೆ ಜೋಡಿಯಾಗಿ ಮನಿಷಾ ಕುಂದಕೂರ್ ಅಭಿನಯಿಸಿದ್ದಾರೆ. ಅಕ್ಟೋಬರ್ 31ರಂದು ತೆರೆಕಂಡ ಈ ಸಿನಿಮಾಗೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ. ಈ ಸಿನಿಮಾವನ್ನು ಬೇರೆ ಭಾಷೆಗಳಲ್ಲೂ ತೆರೆಗೆ ತರುವ ಸಿದ್ದತೆ ನಡೆಯುತ್ತಿದೆ. ಮೊದಲಿಗೆ ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಶಶಾಂಕ್ ಅವರು ಮಾತನಾಡಿದರು. ‘ನಮ್ಮ‌ ನಿರೀಕ್ಷೆಗೂ ಮೀರಿ ಜನ ಈ ಚಿತ್ರವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಕುರಿತ ಕಥಾಹಂದರ ಇರುವ ಈ ಸಿನಿಮಾ ಯುವಜನತೆಯನ್ನು ಹೆಚ್ಚು ಆಕರ್ಷಿಸುತ್ತದೆ ಅಂದುಕೊಂಡಿದ್ದೆ. ಚಿತ್ರ ಬಿಡುಗಡೆ ಆದ ಮೇಲೆ ಯುವಕರ ಜೊತೆಗೆ ಫ್ಯಾಮಿಲಿ ಆಡಿಯನ್ಸ್ ಕೂಡ ಹೆಚ್ಚು ಬರುತ್ತಿದ್ದಾರೆ. ಕ್ಲಾಸ್ ಅಥವಾ ಮಾಸ್ ಆಡಿಯನ್ಸ್ ಎಂಬ ಭೇದವಿಲ್ಲದೆ ಎಲ್ಲರೂ ಈ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ’ ಎಂದಿದ್ದಾರೆ ಶಶಾಂಕ್.

‘ಬಿಡುಗಡೆಯಾದ ದಿನದಿಂದ ನಮ್ಮ ಚಿತ್ರತಂಡ ಹಲವು ಚಿತ್ರಮಂದಿರಗಳಿಗೆ ಭೇಟಿ ನೀಡಿದೆ. ಎಲ್ಲ ಕಡೆಗಳಲ್ಲಿ ಜನರು ಸಿನಿಮಾದ ಪ್ರತಿ ಸನ್ನಿವೇಶವನ್ನು ಎಂಜಾಯ್ ಮಾಡುತ್ತಾ ನೋಡುತ್ತಿದ್ದಾರೆ. ಕೃಷ್ಣ ಅವರ ಕ್ರಿಸ್ಟಿ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಹ ಕಲಾವಿದರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ನಮ್ಮ‌ ಸಿನಿಮಾಗೆ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದಗಳು. ಇನ್ನೂ ಸಿನಿಮಾ ನೋಡದೇ ಇರುವವರು ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಹೋಗಿ ನೋಡಿ‌’ ಎಂದು ಶಶಾಂಕ್ ಅವರು ಹೇಳಿದರು.

ಚಿತ್ರದ ಯಶಸ್ಸಿನ ಬಗ್ಗೆ ಡಾರ್ಲಿಂಗ್ ಕೃಷ್ಣ ಮಾತನಾಡಿದರು. ‘ಸಾಮಾನ್ಯವಾಗಿ ‌ನನ್ನ ಪತ್ನಿ ಇಲ್ಲಿಯವರೆಗೂ ನನ್ನ ಯಾವ ಸಿನಿಮಾ ಲುಕ್ ಬಗ್ಗೆ ಕೂಡ ಮಾತಾಡಿರಲಿಲ್ಲ. ಈ ಸಿನಿಮಾ ನೋಡಿ ಬಹಳ ಚೆನ್ನಾಗಿ ಕಾಣುತ್ತೀರಾ ಅಂತ ಹೇಳಿದರು. ಸ್ನೇಹಿತರು ಮತ್ತು ಅಭಿಮಾನಿಗಳು ಕೂಡ ಈ ಸಿನಿಮಾದಲ್ಲಿನ ನನ್ನ ಹೊಸ ಲುಕ್ ಹಾಗೂ ಕ್ರಿಸ್ಟಿ‌ ಪಾತ್ರದ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿದರು. ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು. ನಿರ್ಮಾಪಕರಿಗೆ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು’ ಎಂದು ಡಾರ್ಲಿಂಗ್ ಕೃಷ್ಣ ಹೇಳಿದರು.

ಇದನ್ನೂ ಓದಿ: ‘ಬ್ರ್ಯಾಟ್’ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಇಮೇಜ್ ಡ್ಯಾಮೇಜ್ ಆಯ್ತಾ?

ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾತನಾಡಿ, ‘ನಮ್ಮ ಡಾಲ್ಫಿನ್ ಎಂಟರ್ಟೈನ್ಮೆಂಟ್‌ ಸಂಸ್ಥೆಗೆ ಉತ್ತಮ ಸಿನಿಮಾ ಕೊಟ್ಟ ಶಶಾಂಕ್ ಅವರಿಗೆ ಮತ್ತು ನಾಯಕ ಕೃಷ್ಣ ಸೇರಿದಂತೆ ಇಡೀ ತಂಡಕ್ಕೆ ಧನ್ಯವಾದಗಳು. ಮುಂದಿನ‌ ದಿನಗಳಲ್ಲಿ‌ ನಮ್ಮ ಸಂಸ್ಥೆಯಿಂದ ಮತ್ತಷ್ಟು ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡುತ್ತೇವೆ‌’ ಎಂದರು. ನಾಯಕಿ ಮನಿಶಾ ಕೂಡ ಸಂತಸ ಹಂಚಿಕೊಂಡರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ, ಸಾಹಸ ನಿರ್ದೇಶಕ ಮಾಸ್ ಮಾದ, ಕಲಾವಿದರಾದ ಡ್ರ್ಯಾಗನ್ ಮಂಜು, ಶ್ರೀವತ್ಸ, ಗಿರಿರಾಜ್, ಶಿವಪ್ರಸಾದ್, ಸಂಚಿತ್ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.