ಡಿಡಿಡಿ ಶೀರ್ಷಿಕೆಯಲ್ಲಿ ಹೊಸ ಸಿನಿಮಾ: ‘ಧೈರ್ಯಂ ಧರ್ಮಂ ದೇಶಂ’ ಇದರ ಅರ್ಥ
ಕೆ.ಬಿ. ಮಂಜುನಾಥ್ ನಿರ್ದೇಶನದ ‘ಡಿಡಿಡಿ’ ಸಿನಿಮಾಗೆ ಬೆಂಗಳೂರು, ಮಂಗಳೂರು, ಕೊಳ್ಳೆಗಾಲ ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ. ಚೇತನ್‌ಕುಮಾರ್, ಗಜೇಂದ್ರ, ಸಂಜಯ್, ಲಕ್ಷಿ ದಿನೇಶ್ ಅವರು ಈ ಸಿನಿಮಾದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಎಸ್.ಕೆ. ಮಸ್ತಾನ್ ಷರೀಫ್ ಅವರ ಛಾಯಾಗ್ರಹಣ, ಧನುಷ್ ಎಲ್. ಬೇಡಿ ಅವರ ಸಂಕಲನ ‘ಡಿಡಿಡಿ’ ಸಿನಿಮಾಗಿದೆ.

‘RRR’ ಸಿನಿಮಾದ ಶೀರ್ಷಿಕೆ ಎಲ್ಲರಿಗೂ ಗೊತ್ತು. ಅದೇ ರೀತಿ ಕನ್ನಡದಲ್ಲಿ ಹೊಸ ಸಿನಿಮಾಗೆ ‘DDD’ ಟೈಟಲ್ ಇಡಲಾಗಿದೆ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. ಇತ್ತೀಚೆಗೆ ‘ಡಿಡಿಡಿ’ ಸಿನಿಮಾದ ಟ್ರೇಲರ್ ಹಾಗೂ 4 ಹಾಡುಗಳ ಬಿಡುಗಡೆ ಸಮಾರಂಭ ನಡೆಯಿತು. ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲಾಯಿತು. ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿ ಸಿನಿಮಾದ ಕುರಿತು ಮಾಹಿತಿ ತಿಳಿಸಿದರು. ಕೆ.ಬಿ. ಮಂಜುನಾಥ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಡಿಡಿಡಿ’ ಚಿತ್ರದ ಐದು ಹಾಡುಗಳಿಗೆ ಸೂರಜ್ ಜೋಯಿಸ್ ಅವರು ಸಂಗೀತ ನೀಡಿದ್ದಾರೆ.
ಸಗಟು ತರಕಾರಿ ವ್ಯಾಪಾರ ಮಾಡುತ್ತಿರುವ ಕೆ.ಬಿ. ಮಂಜುನಾಥ್ ಅವರು ‘ಡಿಡಿಡಿ’ ಸಿನಿಮಾಗೆ ನಿರ್ದೇಶನದ ಜೊತೆ ನಿರ್ಮಾಣ ಕೂಡ ಮಾಡಿದ್ದಾರೆ. ಅವರೇ ಕಥೆ ಬರೆದಿದ್ದಾರೆ. ‘ಕೆಬಿಎಂ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಮಹೇಶ್ ಮತ್ತು ಚಂದ್ರಣ್ಣ ಅವರು ಸಹ-ನಿರ್ಮಾಪಕರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಸಿನಿಮಾದ ಬಗ್ಗೆ ಮಾತನಾಡಿದರು.
‘ಇಲ್ಲಿಯವರೆಗೆ 2 ಕಿರುಚಿತ್ರಗಳನ್ನು ಮಾಡಿದ್ದೇನೆ. ಇದು ನನಗೆ ಮೊದಲ ಸಿನಿಮಾ ಅನುಭವ. ಸಾಮಾನ್ಯ ಪ್ರಜೆ ಆದವನು ಧೈರ್ಯ ಮಾಡಬೇಕು. ಅಧಿಕಾರಿಗಳು ಧರ್ಮವನ್ನು ಕಾಯಬೇಕು. ಯೋಧನಾದವನು ದೇಶವನ್ನು ಕಾಪಾಡಬೇಕು. ಇವುಗಳು ಸಮಾಜದ 3 ಅಂಗಗಳಾಗಿದೆ. ಅದಕ್ಕಾಗಿ DDD ಎಂಬ ಶೀರ್ಷಿಕೆ ಇಡಲಾಗಿದೆ’ ಎಂದು ಶೀರ್ಷಿಕೆಯ ಅರ್ಥವನ್ನು ನಿರ್ದೇಶಕ ಮಂಜುನಾಥ್ ವಿವರಿಸಿದರು.

Ddd Movie Team
‘ನಾವುಗಳು ಸಮಾಜವನ್ನು ಹೇಗೆ ನೋಡಿಕೊಳ್ಳಬೇಕು. ಅವಘಡಗಳು ಆದಾಗ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಮಾನವಿಯತೆ, ಪ್ರೀತಿ, ಸಂಬಂಧಗಳ ಬೆಲೆಯನ್ನು 5 ಹಾಡುಗಳ ಮೂಲಕ ತೋರಿಸಲಾಗಿದೆ. ಇದು ಸಾರ್ವತ್ರಿಕ ವಿಷಯ ಆಗಿರುವುದರಿಂದ 5 ಭಾಗಗಳಿಗೆ ಈಗಾಗಲೇ ಚಿತ್ರಕಥೆ ಸಿದ್ದಪಡಿಸಿದ್ದೇನೆ. ಮೊದಲನೇ ಭಾಗ ಇದಾಗಿರುತ್ತದೆ’ ಎಂದು ನಿರ್ದೇಶಕರು ಹೇಳಿದರು.
ಇದನ್ನೂ ಓದಿ: ‘ಫೈಲ್ಸು-ಪೈಲ್ಸು’ಗಳಿಗೆಲ್ಲ ಪ್ರಶಸ್ತಿ: ಪ್ರಕಾಶ್ ರೈ ವ್ಯಂಗ್ಯ
ಈ ಸಿನಿಮಾದಲ್ಲಿ ಅರುಣ್ ವೆಂಕಟರಾಜು ಅವರು ಹೀರೋ ಆಗಿ ನಟಿಸಿದ್ದಾರೆ. ಇದು ಅವರ 2ನೇ ಸಿನಿಮಾ. ಶಿವಮೊಗ್ಗದ ಗಗನ ಮಲ್ನಾಡ್ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ಸ್‌ಪೆಕ್ಟರ್ ಪಾತ್ರದಲ್ಲಿ ರಾಘು ಶಿವಮೊಗ್ಗ ಕಾಣಿಸಿಕೊಂಡಿದ್ದಾರೆ. ಚಾರ್ಲ್ಸ್ ಟೋನಿ, ಸುರೇಶ್ ಬಾಬು, ಡಿ.ವಿ. ನಾಗರಾಜು, ರೋಹಿಣಿ, ಸುರೇಶ್ ಬಾಬು ಮುಂತಾದವರು ‘ಡಿಡಿಡಿ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




