‘ಫೈಲ್ಸು-ಪೈಲ್ಸು’ಗಳಿಗೆಲ್ಲ ಪ್ರಶಸ್ತಿ: ಪ್ರಕಾಶ್ ರೈ ವ್ಯಂಗ್ಯ
Prakash Raj: ನಟ ಪ್ರಕಾಶ್ ರೈ ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಲೇ ಬಂದಿದ್ದಾರೆ. ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದ ಪ್ರಕಾಶ್ ರೈ, ಇದೀಗ ಪ್ರಶಸ್ತಿ ಘೋಷಣೆ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ವಿಶೇಷವಾಗಿ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದನ್ನು ವ್ಯಂಗ್ಯ ಮಾಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ನೀಡಿದ್ದನ್ನು ನಟ ಪ್ರಕಾಶ ರೈ ವ್ಯಂಗ್ಯ ಮಾಡಿದ್ದಾರೆ. ಕೇರಳ ರಾಜ್ಯ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಪ್ರಕಾಶ್ ರೈ, ನಿನ್ನೆ (ನವೆಂಬರ್ 03) ಕೇರಳ ರಾಜ್ಯ ಸಿನಿಮಾ ಪ್ರಶಸ್ತಿ ಘೋಷಣೆ ವೇಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ, ಮಮ್ಮುಟಿಗೆ ರಾಷ್ಟ್ರಪ್ರಶಸ್ತಿ ಸಿಗುವ ಸಾಧ್ಯತೆಗಳ ಬಗ್ಗೆ ಹಾಗೂ ‘ಕಾಶ್ಮೀರ್ ಫೈಲ್ಸ್’, ಸಿನಿಮಾಕ್ಕೆ ಪ್ರಶಸ್ತಿ ನೀಡಿರುವುದನ್ನು ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, ‘ಮಮ್ಮುಟಿಗೆ 2024ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಿಗುವ ಬಗ್ಗೆ ಹಾಗೂ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾದ ಅನುಭವದ ಬಗ್ಗೆ ಪ್ರಕಾಶ್ ರೈ ಅವರಿಗೆ ಪ್ರಶ್ನೆ ಕೇಳಲಾಯ್ತು. ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹೊಂದಾಣಿಕೆಯಲ್ಲಿ ನಡೆಯುವ ಪ್ರಶಸ್ತಿ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ನನಗೆ ಕೇರಳ ಚಲನಚಿತ್ರ ಪ್ರಶಸ್ತಿ ಆಯ್ಕೆಯ ವಿಷಯದಲ್ಲಿ ಯಾವುದೇ ಹೇರಿಕೆ, ಒತ್ತಡ ಇರಲಿಲ್ಲ. ಆದರೆ ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಲಿ ‘ಫೈಲ್ಸ್-ಪೈಲ್ಸ್’ಗಳಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಅವರಿಗೆ ಮಮ್ಮುಟಿ ಅಂಥಹಾ ನಟರು ಬೇಕಾಗಿಲ್ಲ’ ಎಂದಿದ್ದಾರೆ.
ಪ್ರಕಾಶ್ ರೈ ಅಧ್ಯಕ್ಷರಾಗಿದ್ದ ಸಮಿತಿಯು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿನ್ನೆ ಘೋಷಿಸಿದ್ದು ‘ಮಂಜ್ಞುಮೆಲ್ ಬಾಯ್ಸ್’ ಮತ್ತು ‘ಬ್ರಹ್ಮಯುಗಂ’ ಸಿನಿಮಾಗಳಿಗೆ ಹೆಚ್ಚು ಪ್ರಶಸ್ತಿಗಳು ಲಭ್ಯವಾಗಿವೆ. ‘ಬ್ರಹ್ಮಯುಗಂ’ ಸಿನಿಮಾದ ಅತ್ಯುತ್ತಮ ನಟನೆಗೆ ಮಮ್ಮುಟಿಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ದೊರಕಿತು. ಇದು ಮಮ್ಮುಟಿಗೆ ದೊರಕುತ್ತಿರುವ ಏಳನೇ ರಾಜ್ಯ ಪ್ರಶಸ್ತಿ. ಮೋಹನ್ಲಾಲ್ ಹಾಗೂ ನಟಿ ಊರ್ವಶಿ ಅವರಿಗೆ ತಲಾ ಆರು ಬಾರಿ ನಟನೆಗೆ ರಾಜ್ಯ ಪ್ರಶಸ್ತಿಗಳು ದೊರಕಿವೆ. ಇದೀಗ ಮಮ್ಮುಟಿ ಈ ಇಬ್ಬರಿಗಿಂತಲೂ ಒಂದು ಬಾರಿ ಹೆಚ್ಚಿಗೆ ಪ್ರಶಸ್ತಿ ಗೆದ್ದಿದ್ದಾರೆ.
ಇದನ್ನೂ ಓದಿ:ಸಚಿವ ಎಂಬಿ ಪಾಟೀಲ್ಗೆ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಟಾಂಗ್
‘ಮಂಜ್ಞುಮೆಲ್ ಬಾಯ್ಸ್’ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಗೀತ ರಚನೆ, ಅತ್ಯುತ್ತಮ ಪೋಷಕ ನಟ (ಸೌಬಿನ್), ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಸಿನಿಮಾಟೊಗ್ರಫಿ, ಅತ್ಯುತ್ತಮ ಸೌಂಡ್ ಡಿಸೈನ್, ಅತ್ಯುತ್ತಮ ಸೌಂಡ್ ಮಿಕ್ಸಿಂಗ್, ಅತ್ಯುತ್ತಮ ಕಲರಿಂಗ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದೆ. ಅತ್ಯುತ್ತಮ ನಟಿ ಪ್ರಶಸ್ತಿ ‘ಫೆಮಿನಿಚಿ ಫಾತಿಮಾ’ ಸಿನಿಮಾದ ನಟಿ ಶಾಮಲಾ ಹಮ್ಜಾಗೆ ದೊರೆತಿದೆ.
ಅತ್ಯುತ್ತಮ ಗೀತ ರಚನೆ ವಿಭಾಗದಲ್ಲಿ ವೇದನ್ಗೆ ಪ್ರಶಸ್ತಿ ನೀಡಿರುವುದಕ್ಕೆ ಕೆಲವರು ಆಕ್ಷೇಪ ಎತ್ತಿದ್ದಾರೆ. ವೇದನ್ ಮೇಲೆ ಅತ್ಯಾಚಾರ ಆರೋಪಗಳು ಇವೆ. ಇನ್ನು ಮಕ್ಕಳ ಸಿನಿಮಾಗಳನ್ನು ನಿರ್ಲಕ್ಷ್ಯ ಮಾಡಿರುವುದಕ್ಕೆ ಸಹ ವಿರೋಧ ವ್ಯಕ್ತವಾಗಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಕಾಶ್ ರೈ, ‘ಪ್ರಶಸ್ತಿಗೆ ಸಲ್ಲಿಕೆ ಆಗಿದ್ದ ಮಕ್ಕಳ ಸಿನಿಮಾಗಳ ಗುಣಮಟ್ಟ ಉತ್ತಮವಾಗಿರಲಿಲ್ಲ, ಮಕ್ಕಳ ಪಾತ್ರಗಳು ವಯಸ್ಸಿಗೆ ತಕ್ಕಂತೆ ವರ್ತನೆ ಇರಲಿಲ್ಲ. ಮಕ್ಕಳ ಸಿನಿಮಾಗಳನ್ನು ಇನ್ನಷ್ಟು ಗುಣಮಟ್ಟದಿಂದ ನಿರ್ಮಿಸಬೇಕಿದೆ’ ಎಂದಿದ್ದರು. ಪ್ರಕಾಶ್ ರೈ ಅವರ ಈ ಹೇಳಿಕೆಗೆ ಕೇರಳ ಚಿತ್ರರಂಗದ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:40 pm, Tue, 4 November 25




