
ಆರ್.ಸಿ. ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿರುವ ‘ಫಾದರ್’ ಸಿನಿಮಾ (Father Movie) ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಈ ಸಿನಿಮಾಗೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಅವರು ನಾಯಕನಾಗಿ ನಟಿಸಿದ್ದಾರೆ. ಜೂನ್ 12ರಂದು ಅವರ ಜನ್ಮದಿನ (Darling Krishna Birthday). ಆ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ‘ಆರ್.ಸಿ. ಸ್ಟುಡಿಯೋಸ್’ ಸಂಸ್ಥೆ ಮತ್ತು ‘ಫಾದರ್’ ಸಿನಿಮಾ ಚಿತ್ರತಂಡದವರು ಡಾರ್ಲಿಂಗ್ ಕೃಷ್ಣ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ‘ಫಾದರ್’ ಚಿತ್ರವು ವೀಕ್ಷಕರನ್ನು ಭಾವುಕ ಪಯಣಕ್ಕೆ ಕರೆದೊಯ್ಯುತ್ತದೆ ಎಂದು ಚಿತ್ರತಂಡ ಹೇಳಿದೆ.
‘ಫಾದರ್’ ಎಂದರೆ ಶಕ್ತಿ. ಅಂಥ ಶಕ್ತಿಯುತ ಪಾತ್ರದ ಹೈಲೆಟ್ ಆಗಿರುವುದು ಪ್ರಕಾಶ್ ರಾಜ್. ಸಿನಿಮಾದ ಕಥೆಯಲ್ಲಿ ಡಾರ್ಲಿಂಗ್ ಕೃಷ್ಣ ಸಹ ಪ್ರಮುಖ ಆಕರ್ಷಣೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಬರುತ್ತಿರುವ ‘ಫಾದರ್’ ಈಗಾಗಲೇ ಒಂದಷ್ಟು ಕಾರಣಗಳಿಂದ ನಿರೀಕ್ಷೆ ಮೂಡಿಸಿದೆ. ‘ಲವ್ ಮಾಕ್ಟೇಲ್’ ಸಿನಿಮಾದ ಜೋಡಿ ‘ಫಾದರ್’ ಚಿತ್ರದಲ್ಲೂ ಒಂದಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಜೊತೆ ಅಮೃತಾ ಅಯ್ಯಂಗಾರ್ ನಟಿಸಿದ್ದಾರೆ.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಆರ್. ಚಂದ್ರು ಅವರಿಗೆ ಭಾವನಾತ್ಮಕ ಕಂಟೆಂಟ್ ಇರುವ ಚಿತ್ರಗಳ ಮೇಲೆ ಹೆಚ್ಚು ಒಲವು. ಚಂದ್ರು ಅವರ ನಿರ್ಮಾಣದ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗ ಇದೆ. ‘ಫಾದರ್’ ಸಿನಿಮಾ ಸಹ ಅಂತಹ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಚಂದ್ರು ನಿರ್ದೇಶಿಸಿದ ಮೊದಲ ಸಿನಿಮಾ ‘ತಾಜ್ ಮಹಲ್’ ಹಿಟ್ ಆಗಿತ್ತು. ಬಳಿಕ ‘ಚಾರ್ ಮಿನಾರ್’ ಕೂಡ ಗೆದ್ದಿತ್ತು. ಹಾಗೆಯೇ ‘ಫಾದರ್’ ಸಿನಿಮಾ ಕೂಡ ಒಂದೊಳ್ಳೆಯ ಚಿತ್ರವಾಗಿ ಹೊರಹೊಮ್ಮುತ್ತೆ ಎಂದು ಚಿತ್ರತಂಡ ಭರವಸೆ ನೀಡಿದೆ.
ಸುದೀಪ್ ಅವರು ‘ಫಾದರ್’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದರು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಬಂದಿದ್ದವು. ಭಾವುಕ ಜೀವಿಯಾದ ತಂದೆಯ ಕಹಾನಿ ಹೇಳುವ ಮೂಲಕ ಅಪ್ಪ ಮತ್ತು ಮಗನ ಬಾಂಧವ್ಯ ಹೇಗಿರುತ್ತೆ ಎಂಬುದನ್ನು ‘ಫಾದರ್’ ಸಿನಿಮಾ ತೋರಿಸಲಿದೆ. ಧರ್ಮಸ್ಥಳ, ಮೈಸೂರು, ಬೆಂಗಳೂರು, ಮಂಗಳೂರು, ವಾರಾಣಸಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ: ಆ ಒಂದು ಘಟನೆಯಿಂದ ಡಾರ್ಲಿಂಗ್ ಕೃಷ್ಣ ಪ್ರೀತಿಗೆ ಓಕೆ ಎಂದಿದ್ದ ಮಿಲನಾ ನಾಗರಾಜ್
ಸುಜ್ಞಾನ್ ಅವರು ‘ಫಾದರ್’ ಸಿನಿಮಾಗೆ ಛಾಯಾಗ್ರಹಣ ಮಾಡಿದ್ದಾರೆ. ನಕುಲ್ ಅಭ್ಯಂಕರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಮುಂಬೈನ ಖ್ಯಾತ ಉದ್ಯಮಿ ಆನಂದ್ ಪಂಡಿತ್ ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಅಲಂಕಾರ್ ಪಾಂಡ್ಯನ್ ಅವರ ಸಹಯೋಗದಲ್ಲಿ ಆರ್.ಸಿ. ಸ್ಟುಡಿಯೋಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ರಾಜ್ ಮೋಹನ್ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.