
ನಟ ದರ್ಶನ್ (Darshan) ‘ಡೆವಿಲ್’ ಸಿನಿಮಾದ ಅಂತಿಮ ಹಂತದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತಯಾರಾಗಿದ್ದಾರೆ. ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಹಾಡಿನ ಚಿತ್ರೀಕರಣ ಪೂರ್ಣವಾದರೆ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಂತಾಗುತ್ತದೆ. ಆದರೆ ‘ಡೆವಿಲ್’ ಸಿನಿಮಾ ಪ್ರಾರಂಭ ಆದಾಗಿನಿಂದಲೂ ಒಂದಲ್ಲ ಒಂದು ಅಡೆ-ತಡೆಗಳು ಅದನ್ನು ಕಾಡುತ್ತಲೇ ಇದೆ. ಈಗ ವಿದೇಶಕ್ಕೆ ತೆರಳಲು ಸಹ ಕೆಲ ಅಡೆ-ತಡೆಗಳು ಚಿತ್ರತಂಡಕ್ಕೆ ಎದುರಾಗಿದ್ದವು. ಹಾಗಾಗಿ ದರ್ಶನ್ ಮತ್ತು ಟೀಂ ತಮ್ಮ ದಿಕ್ಕನ್ನೇ ಬದಲಿಸಿದೆ.
‘ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಯೂರೋಪ್ ದೇಶಗಳಿಗೆ ತೆರಳಲು ಚಿತ್ರತಂಡ ಯೋಜಿಸಿತ್ತು. ಆದರೆ ಇಸ್ರೇಲ್-ಇರಾನ್ ಯುದ್ಧದಿಂದಾಗಿ ಯೂರೂಪಿಯನ್ ದೇಶಗಳ ವೈಮಾನಿಕ ವ್ಯವಸ್ಥೆ ಹದಗೆಟ್ಟಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯೂರೋಪ್ ದೇಶಗಳಿಗೆ ವಿಶೇಷವಾಗಿ ಸ್ವಿಟ್ಜರ್ಲ್ಯಾಂಡ್ಗೆ ಹೋಗುವ ಐಡಿಯಾ ಅನ್ನು ಚಿತ್ರತಂಡ ಕೈಬಿಟ್ಟಿತು ಎನ್ನಲಾಗಿದೆ. ಆದರೆ ಅಸಲಿ ಕಾರಣ ಬೇರೆಯೇ ಇದೆಯಂತೆ. ದರ್ಶನ್ ವಿರುದ್ಧ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವ ಕಾರಣ, ದರ್ಶನ್ ಅವರಿಗೆ ಸ್ವಿಟ್ಜರ್ಲೆಂಡ್ ವೀಸಾ ನಿರಾಕರಿಸಲಾಗಿದೆ. ಹೀಗಾಗಿ ಚಿತ್ರತಂಡ ಬದಲಿ ಆಯ್ಕೆ ಮಾಡಿಕೊಂಡಿದೆ.
ಸ್ವಿಟ್ಜರ್ಲ್ಯಾಂಡ್ಗೆ ಹೋಗಿ ಚಿತ್ರೀಕರಣ ಮಾಡಬೇಕು ಎಂಬುದು ಚಿತ್ರತಂಡದ ಮೂಲ ಯೋಜನೆಯಾಗಿತ್ತು. ದರ್ಶನ್ ಸಹ ಸ್ವಿಟ್ಜರ್ಲೆಂಡ್ಗೆ ಹೋಗಲು ಉತ್ಸುಕರಾಗಿದ್ದರು. ಅವರ ಹಲವಾರು ಸಿನಿಮಾಗಳು ಸ್ವಿಟ್ಜರ್ಲೆಂಡ್ನಲ್ಲಿ ಚಿತ್ರೀಕರಣಗೊಂಡಿವೆ. ಕಳೆದ ತಿಂಗಳೇ ನ್ಯಾಯಾಲಯಕ್ಕೆ ಅರ್ಜಿ ಹಾಕಿ ದರ್ಶನ್ ಅವರು ಯೂರೋಪ್ ದೇಶಗಳಿಗೆ ಹೋಗಲು ಅನುಮತಿ ಪಡೆದುಕೊಂಡಿದ್ದರು. ಆದರೆ ವೀಸಾ ಸಮಸ್ಯೆ ಎದುರಾದ ಕಾರಣ ಆ ಯೋಜನೆಯನ್ನು ಅನಿವಾರ್ಯವಾಗಿ ಚಿತ್ರತಂಡ ಕೈಬಿಟ್ಟಿದೆ.
ಇದನ್ನೂ ಓದಿ:ನಟ ದರ್ಶನ್ ಬಳಿಯೂ ಇತ್ತು ಹಮ್ಮರ್; ಮಾರಿದ್ದು ಏಕೆ?
ಆ ಬಳಿಕ ದುಬೈಗೆ ಹೋಗುವ ನಿರ್ಧಾರ ಮಾಡಲಾಯ್ತು. ಆದರೆ ದುಬೈ ವಿಷಯದಲ್ಲಿಯೂ ಅದೇ ಸಮಸ್ಯೆ ತಲೆದೂರಿದ ಕಾರಣ ಆ ಯೋಜನೆಯನ್ನೂ ಕೈಬಿಡಲಾಗಿದೆಯಂತೆ. ಕೊನೆಗೆ ಹತ್ತಿರವೇ ಇರುವ, ಆರ್ಥಿಕವಾಗಿಯೂ ಹೊರೆ ಆಗದ ಥಾಯ್ಲೆಂಡ್ ಅನ್ನು ಚಿತ್ರತಂಡ ಆಯ್ಕೆ ಮಾಡಿದೆ. ಸುಮಾರು ಐದು ದಿನಗಳ ಚಿತ್ರೀಕರಣವನ್ನು ಥಾಯ್ಲೆಂಡ್ನಲ್ಲಿ ದರ್ಶನ್ ಹಾಗೂ ಸಹನಟರುಗಳು ಮಾಡಲಾಗಿದ್ದಾರೆ. ಅದಾದ ಬಳಿಕ ದರ್ಶನ್, ತಮ್ಮ ಕುಟುಂಬದೊಟ್ಟಿಗೆ ಅಲ್ಲಿಯೇ ಇನ್ನೈದು ದಿನ ವಿಶ್ರಾಂತಿ ಪಡೆದು ಆ ನಂತರ ಭಾರತಕ್ಕೆ ಮರಳಲಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ದರ್ಶನ್, ವಿದೇಶ ಪ್ರಯಾಣಕ್ಕೆ ನ್ಯಾಯಾಲಯದ ಅನುಮತಿ ಪಡೆಯಬೇಕಾಗಿರುವುದು ನಿಯಮ. ಹೀಗಾಗಿ 64 ಸಿಸಿಎಚ್ ಕೋರ್ಟ್ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದರು. ದರ್ಶನ್ ಯೂರೋಪ್ ದೇಶಗಳಿಗೆ ತೆರಳಲು ಜೂನ್ 1 ರಿಂದ 25ರ ವರೆಗೆ ಅನುಮತಿ ನೀಡಲಾಗಿತ್ತು. ಆದರೆ ವೀಸಾ ನಿರಾಕರಣೆ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಈಗ ಥಾಯ್ಲೆಂಡ್ಗೆ ತೆರಳಲು ಮತ್ತೆ ಅನುಮತಿಯನ್ನು ದರ್ಶನ್ ಪಡೆದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:36 pm, Fri, 11 July 25