ಜೈಲಿಂದಲೇ ಫ್ಯಾನ್ಸ್ ಬಗ್ಗೆ ವಿಚಾರಿಸಿದ ನಟ ದರ್ಶನ್​; ಎಲ್ಲರಿಗೂ ಒಂದು ಮನವಿ

|

Updated on: Jul 10, 2024 | 7:45 PM

ದರ್ಶನ್​ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್​ ಎನ್ನುತ್ತಾರೆ. ಈಗ ಜೈಲಿನಲ್ಲಿ ಇದ್ದರೂ ಕೂಡ ದರ್ಶನ್​ ಅವರು ತಮ್ಮ ಫ್ಯಾನ್ಸ್​ ಬಗ್ಗೆ ವಿಚಾರಿಸಿದ್ದಾರೆ. ಈ ಬಗ್ಗೆ ವಕೀಲರು ಮಾಹಿತಿ ನೀಡಿದ್ದಾರೆ. ‘ದರ್ಶನ್​ ಅವರು ಆರೋಪಿ ಮಾತ್ರ, ಅಪರಾಧಿ ಅಲ್ಲ’ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಜಾಮೀನು ಪಡೆದು ಹೊರಗೆ ಬರಲಿ ಎಂಬುದು ಫ್ಯಾನ್ಸ್​ ಬಯಕೆ.

ಜೈಲಿಂದಲೇ ಫ್ಯಾನ್ಸ್ ಬಗ್ಗೆ ವಿಚಾರಿಸಿದ ನಟ ದರ್ಶನ್​; ಎಲ್ಲರಿಗೂ ಒಂದು ಮನವಿ
ದರ್ಶನ್​
Follow us on

ನಟ ದರ್ಶನ್​ ಅವರು ಈಗ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸೆಲೆಬ್ರಿಟಿಯಾಗಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಅವರು ಈಗ ಜೈಲಿನಲ್ಲಿ ಕಂಬಿ ಎಣಿಸುವಂತಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣವೇ ಇಷ್ಟಕ್ಕೆಲ್ಲ ಕಾರಣ. ದರ್ಶನ್​ ಜೈಲು ಸೇರುತ್ತಿದ್ದಂತೆಯೇ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾದರು. ಕೆಲವರು ಅತಿರೇಕದ ವರ್ತನೆಗಳನ್ನು ತೋರಿಸಿದ್ದು ಕೂಡ ಉಂಟು. ಈಗ ದರ್ಶನ್​ ಅವರು ಜೈಲಿನಿಂದಲೇ ಅಭಿಮಾನಿಗಳ ಬಗ್ಗೆ ವಿಚಾರಿಸಿದ್ದಾರೆ. ವಕೀಲರಾದ ನಾರಾಯಣಸ್ವಾಮಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಇಂದು (ಜುಲೈ 10) ಪರಪ್ಪನ ಅಗ್ರಹಾರದಲ್ಲಿ ವಕೀಲ ನಾರಾಯಣಸ್ವಾಮಿ ಅವರು ದರ್ಶನ್​ ಹಾಗೂ ಪವಿತ್ರಾ ಗೌಡ ಅವರನ್ನು ಭೇಟಿ ಆಗಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ಕೆಲವು ವಿಚಾರ ತಿಳಿಸಿದ್ದಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ವಕೀಲರು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಜಾಮೀನು ಪ್ರಕ್ರಿಯೆಗಳ ಬಗ್ಗೆ ಮಾತುಕತೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಮುಂದಿನ ಕಾನೂನು ಹೋರಾಟದ ಸಾಧ್ಯತೆಗಳ ಬಗ್ಗೆಯೂ ಚರ್ಚೆ ಮಾಡಿದ್ದಾರೆ.

ಈ ಮಾತುಕತೆ ಸಲುವಾಗಿ ವಕೀಲರು ದರ್ಶನ್​ ಅವರನ್ನು ಭೇಟಿ ಆದಾಗ ಅಭಿಮಾನಿಗಳ ವಿಷಯ ಕೂಡ ಪ್ರಸ್ತಾಪ ಆಗಿದೆ. ಜೈಲಿನಲ್ಲಿ ಇರುವ ದರ್ಶನ್​ ಅವರು ಅಭಿಮಾನಿಗಳ ಬಗ್ಗೆ ವಿಚಾರಿಸುವುದನ್ನು ಮರೆತಿಲ್ಲ! ಅಭಿಮಾನಿಗಳು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ದರ್ಶನ್​ ಮನವಿ ಮಾಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ: ದರ್ಶನ್​ಗೆ ಕೊಡಲು ಬಗೆಬಗೆಯ ತಿಂಡಿ ತಂದ ಆಪ್ತರು; ಆದರೆ ಪೊಲೀಸರು ಮಾಡಿದ್ದೇನು?

ದರ್ಶನ್​ ಜೈಲು ಸೇರಿದ ಬಳಿಕ ಒಂದಷ್ಟು ಅಭಿಮಾನಿಗಳು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿದ್ದುಂಟು. ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಅತಿರೇಕದ ವರ್ತನೆ ತೋರಿದ್ದಾರೆ. ಅಲ್ಲದೇ, ಖೈದಿ ನಂಬರ್​ 6106 ವಿಚಾರದಲ್ಲೂ ಕೆಲವು ಅತಿರೇಕಗಳು ಕಾಣಿಸಿವೆ. ಇತ್ತೀಚೆಗೆ ಆಟೋ ಚಾಲಕನೊಬ್ಬ ಇದೇ ಸಂಖ್ಯೆಯನ್ನು ಆಟೋದ ಮೇಲೆ ಹಾಕಿಕೊಂಡು ನಡುರಸ್ತೆಯಲ್ಲಿ ವೀಲ್ಹಿಂಗ್​ ಮಾಡಿದ್ದು ಸುದ್ದಿ ಆಗಿತ್ತು. ದರ್ಶನ್​ ಅವರ ಮನವಿ ಬಳಿಕವಾದರೂ ಇಂಥ ಅಭಿಮಾನಿಗಳು ಬುದ್ಧಿ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.