‘ಆ ಮಾತಿನಿಂದ ದರ್ಶನ್ ಮುಖಭಾವವೇ ಬದಲಾಗಿತ್ತು’; ಚಿಕ್ಕಣ್ಣ ಹೇಳಿಕೆಯಲ್ಲೇನಿದೆ?

| Updated By: ರಾಜೇಶ್ ದುಗ್ಗುಮನೆ

Updated on: Sep 10, 2024 | 11:10 AM

ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್​ಶೀಟ್​ನಲ್ಲಿ ಏನಿದೆ ಎಂಬ ವಿಚಾರ ಹೊರ ಬರುತ್ತಿದೆ. ದರ್ಶನ್ ಸೇರಿದಂತೆ 17 ಜನರು ಕೊಲೆ ಆರೋಪ ಹೊತ್ತಿದ್ದಾರೆ. ಈ ಮಧ್ಯೆ ದರ್ಶನ್, ಪವಿತ್ರಾ ಸೇರಿ ಅನೇಕ ಆಪ್ತರ ಹೇಳಿಕೆಯನ್ನು ಪಡೆಯಲಾಗಿದೆ. ಇದರಲ್ಲಿ ಚಿಕ್ಕಣ್ಣ ಹೇಳಿಕೆಯೂ ಇದೆ.

‘ಆ ಮಾತಿನಿಂದ ದರ್ಶನ್ ಮುಖಭಾವವೇ ಬದಲಾಗಿತ್ತು’; ಚಿಕ್ಕಣ್ಣ ಹೇಳಿಕೆಯಲ್ಲೇನಿದೆ?
ಚಿಕ್ಕಣ್ಣ-ದರ್ಶನ್
Follow us on

ರೇಣುಕಾಸ್ವಾಮಿ ಕೊಲೆಗೆ ಸಂಬಂಧಿಸಿದ ಚಾರ್ಜ್​ಶೀಟ್​ನಲ್ಲಿ ನಟ ಚಿಕ್ಕಣ್ಣನ ಹೇಳಿಕೆಯೂ ಉಲ್ಲೇಖ ಆಗಿದೆ. ಕೊಲೆ ಆರೋಪಿ ದರ್ಶನ್ ಅವರನ್ನು ಚಿಕ್ಕಣ್ಣ ಭೇಟಿ ಮಾಡಿದ್ದರು. ಕೊಲೆ ನಡೆಯುವ ದಿನ ಸ್ಟೋನಿಬ್ರೂಕ್​​ನಲ್ಲಿ ದರ್ಶನ್​ ಹಾಗೂ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಈ ವೇಳೆ ರೆಸ್ಟೋರೆಂಟ್​ನಲ್ಲಿ ನಡೆದಿದ್ದು ಏನು ಎಂಬ ಬಗ್ಗೆ ಚಿಕ್ಕಣ್ಣ ಅವರು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ವಿಚಾರ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ.

‘ಜೂನ್ 8ರಂದು ನಾನು ಎ.ಪಿ ಅರ್ಜುನ್ ಕಚೇರಿಯಲ್ಲಿ ನನ್ನ ಮುಂದಿನ ಚಿತ್ರದ ಬಗ್ಗೆ ಚರ್ಚೆ‌ ಮಾಡುತ್ತಿದ್ದೆ. ಆಗ ನಟ ಯಶಸ್ ಕರೆ ಮಾಡಿ ಮಧ್ಯಾಹ್ನ ಸ್ಟೋನಿಬ್ರೂಕ್​ನಲ್ಲಿ ಊಟದ ವ್ಯವಸ್ಥೆ ಮಾಡಿದ್ದಾರೆ. ನಿನಗೆ ಕರೆ ಮಾಡಿ ತಿಳಿಸುವಂತೆ ಸೂಚಿಸಿದ್ದಾರೆ. ನೇರವಾಗಿ ಸ್ಟೋನಿಬ್ರೂಕ್​ಗೆ ಬನ್ನಿ ಎಂದು ತಿಳಿಸಿದ್ದರು. ನಾನು ಬರಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದೆ. 10 ನಿಮಿಷಗಳ ನಂತರ ದರ್ಶನ್ ಕರೆ ಮಾಡಿ ಬರುವಂತೆ ಹೇಳಿದರು. ನಾನು ಮನೆಗೆ ಬಂದು ಬಟ್ಟೆ ಬದಲಾಯಿಸಿಕೊಂಡು 02:45ಕ್ಕೆ‌‌ ರೆಸ್ಟೋರೆಂಟ್​ಗೆ ಹೋದೆ’ ಎಂದಿದ್ದಾರೆ ಅವರು.

‘ನನ್ನ ಖಾಸಗಿ ವಾಹನದಲ್ಲಿ ಡ್ರೈವರ್ ಸಿದ್ದು ಜೊತೆಯಲ್ಲಿ ಸ್ಟೋನಿಬ್ರೂಕ್​ಗೆ ಹೋದೆ. ನಾನು ಸಿದ್ದುನನ್ನು ಕಾರಲ್ಲಿ ಬಿಟ್ಟು ಸಫಾರಿ ಎಂಬ ಲಾಂಜ್‌ಗೆ ತೆರಳಿದೆ. ಅಲ್ಲಿ ದರ್ಶನ್, ವಿನಯ್, ಪ್ರದೂಷ್, ಯಶಸ್, ನಾಗರಾಜು ಊಟ ಮಾಡುತ್ತಿದ್ದರು. ​​ನಾನು ಕುಳಿತುಕೊಂಡು ನನ್ನ ಮುಂದಿನ ಚಿತ್ರದ ಬಗ್ಗೆ ಮಾತನಾಡಿದೆ. ನಾನು ಸಹ ಅವರುಗಳೊಂದಿಗೆ ಮಾತನಾಡಿಕೊಂಡು ಊಟ ಮಾಡುತ್ತಿದ್ದೆ. ದರ್ಶನ್ ಬಳಿಗೆ ಬಂದ ಪವನ್ ಕಿವಿಯಲ್ಲಿ ಯಾವುದೋ ವಿಚಾರ ಹೇಳಿದರು. ಆಗ ದರ್ಶನ್ ಮುಖಭಾವ ಬದಲಾವಣೆ ಆಯಿತು. ನಂತರ ದರ್ಶನ್ ಯಾರಿಗೋ ಕರೆ ಮಾಡಿ ಗಂಭೀರವಾಗಿ ಯಾವುದೋ ವಿಚಾರದ ಬಗ್ಗೆ ಚರ್ಚೆ ಮಾಡಿದರು. ನಂತರ ಚಿಕ್ಕಣ್ಣ ನೀನು ಹೊರಡು ನಮಗೆ ಬೇರೆ ಕೆಲಸ ಇದೆ ಎಂದು ದರ್ಶನ್ ತಿಳಿಸಿದರು. ನಂತರ ಎಲ್ಲರೂ ಒಟ್ಟಿಗೆ ಕೆಳಗೆ ಬಂದೆವು.  ನಾನು ಅಲ್ಲಿಂದ ಹೊರಟು ಹೋದೆ’ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದರ್ಶನ್ ಪತ್ನಿ ಜೊತೆ ದುಬೈ ಹೋಗಿದ್ದಕ್ಕೆ ಪವಿತ್ರಾಗೆ ಮುನಿಸು; ಮತ್ತೆ ಮಾತು ಶುರುವಾಗಿದ್ದು ಶೆಡ್​ನಲ್ಲಿ

‘ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ದರ್ಶನ್, ಪ್ರದೋಷ್ ತೆರಳಿದರೆ, ವಿನಯ್ ಹಾಗೂ ನಾಗರಾಜು ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನವಲ್ಲಿ ಅಲ್ಲಿಂದ ಹೋದರು. ಜೂನ್ 10ರಂದು ನನ್ನ ಸ್ನೇಹಿತ ನಾಗೇಂದ್ರ ನನಗೆ ಕರೆ ಮಾಡಿ ದರ್ಶನ್ ಅರೆಸ್ಟ್ ಆಗಿದ್ದಾರೆ ಎಂದರು. ನಾನು ಕೊಲೆಯ ಬಗ್ಗೆ ಮಾಧ್ಯಮಗಳಲ್ಲಿ  ನೋಡಿರುತ್ತೇನೆ. ದರ್ಶನ್ ಹಾಗೂ ನಾನು 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೆವು. ದರ್ಶನ್ ಹಾಗೂ ಪವಿತ್ರಾ ಗೌಡ ಲಿವಿಂಗ್ ರಿಲೇಷನ್‌ನಲ್ಲಿ ಇದ್ದ ಬಗ್ಗೆ ನನಗೆ ತಿಳಿದಿದೆ’ ಎಂದು ಚಿಕ್ಕಣ್ಣ ಹೇಳಿಕೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.