‘ಗರಡಿ’ ಟ್ರೈಲರ್ ಲಾಂಚ್ ಮಾಡಿ ಯುವಕರಿಗೆ ಸಲಹೆ ಕೊಟ್ಟ ದರ್ಶನ್

|

Updated on: Nov 01, 2023 | 11:24 PM

Garadi movie trailer: ರಾಣೆಬೆನ್ನೂರಿನಲ್ಲಿ ಅದ್ಧೂರಿಯಾಗಿ 'ಗರಡಿ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ನಟ ದರ್ಶನ್, ಸಿನಿಮಾಕ್ಕೆ ಶುಭ ಕೋರುವ ಜೊತೆಗೆ ಯುವಕರಿಗೆ ಸಲಹೆಯೊಂದನ್ನು ನೀಡಿದ್ದಾರೆ.

‘ಗರಡಿ’ ಟ್ರೈಲರ್ ಲಾಂಚ್ ಮಾಡಿ ಯುವಕರಿಗೆ ಸಲಹೆ ಕೊಟ್ಟ ದರ್ಶನ್
ದರ್ಶನ್
Follow us on

ಯೋಗರಾಜ್ ಭಟ್ (Yogaraj Bhatt) ನಿರ್ದೇಶಿಸಿ ಯಶಸ್ ಸೂರ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಗರಡಿ’ ಸಿನಿಮಾದ ಟ್ರೈಲರ್ ಇಂದು (ನವೆಂಬರ್ 1) ರಾಣೆಬೆನ್ನೂರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಅತಿಥಿ ಪಾತ್ರದಲ್ಲಿ ನಟಿಸಿರುವ ದರ್ಶನ್ (Darshan) ಅವರು ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿನಿಮಾ ತಂಡಕ್ಕೆ ಶುಭ ಹಾರೈಸಿದ ನಟ ದರ್ಶನ್ ಜೊತೆಗೆ ಯುವಕರಿಗೆ ಸಲಹೆಯೊಂದನ್ನು ಸಹ ನೀಡಿದರು.

‘ಎಲ್ಲ ಯುವಕರಿಗೆ ಹೇಳುವುದು ಒಂದೇ ಜೀವನದಲ್ಲಿ ತಾಳ್ಮೆ ಇರಬೇಕು. ನಮ್ಮ ಹೀರೋ ಯಶಸ್ ಸೂರ್ಯ ಸಹ ಹಾಗೆಯೇ ಅಂದುಕೊಳ್ಳುತ್ತಿದ್ದರು. ಜೀವನದಲ್ಲಿ ಏನೂ ಆಗುತ್ತಿಲ್ಲ, ಏನೂ ಆಗುತ್ತಿಲ್ಲ ಅಂದುಕೊಳ್ಳುತ್ತಿದ್ದರು. ಆದರೆ ಅವರ ಟೈಮ್ ಬಂದಿರಲಿಲ್ಲ, ಅದಕ್ಕಾಗಿ ಕಾದರು. ಹಾಗೆಯೇ ಯುವಕರು ಸಹ ಸಮಯಕ್ಕಾಗಿ ಕಾಯಬೇಕು, ಅದಕ್ಕೆ ತಾಳ್ಮೆ ಬೇಕು. ತಾಳಿದರೆ ವಯಸ್ಸಾಗುತ್ತದೆ ಎಂದುಕೊಳ್ಳಬಹುದು, ಆದರೆ ಅದು ಹಾಗಾಗುವುದಿಲ್ಲ, ತಾಳ್ಮೆ ಬಹಳ ಮುಖ್ಯ” ಎಂದರು.

”ಯಶಸ್ ಸೂರ್ಯ ಅವರನ್ನು ಬಹಳ ವರ್ಷಗಳಿಂದ ನಾನು ನೋಡುತ್ತಲೇ ಬಂದಿದ್ದೇನೆ. ನನ್ನ ಜೊತೆಗೆ ‘ಚಿಂಗಾರಿ’ ಸಿನಿಮಾದಲ್ಲಿ ಅವರು ನಟಿಸಿದರು. ಅದಾದ ಬಳಿಕ ನನ್ನೊಟ್ಟಿಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರು ತಮ್ಮ ಶ್ರಮ ಬಿಟ್ಟಿರಲಿಲ್ಲ. ಈಗ ಅವರಿಗಾಗಿ ‘ಗರಡಿ’ ಸಿನಿಮಾ ಬಂತು. ಹಾಗೆಯೇ ಪ್ರತಿಯೊಬ್ಬರಿಗೂ ಒಂದೊಂದು ಸಮಯ ಎಂದು ಬಂದೇ ಬರುತ್ತದೆ ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕಷ್ಟೆ’ ಎಂದರು ನಟ ದರ್ಶನ್.

ಇದನ್ನೂ ಓದಿ:‘ಗರಡಿ’ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ ದರ್ಶನ್: ಲೈವ್ ಇಲ್ಲಿ ನೋಡಿ

‘ಗರಡಿ’ ಸಿನಿಮಾದ ನಾಯಕಿ ಸೋನಲ್ ಮೊಂಟಾರೊ ಬಗ್ಗೆ ತಮಾಷೆಯಾಗಿ ಮಾತನಾಡಿದ ದರ್ಶನ್, ”ಸೋನಲ್ ನಮ್ಮ ಜೊತೆಗಿನ ಗೆಳೆಯರ ರೀತಿಯೇ. ನನ್ನ ಗೆಳೆಯರ ಗುಂಪಿನಲ್ಲಿ ಅವರೂ ಒಬ್ಬರು. ಅವರು ಹುಡುಗಿ ಎಂದು ಅನ್ನಿಸುವುದೇ ಇಲ್ಲ, ಹುಡುಗನ ರೀತಿಯೇ ನಮ್ಮೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾರೆ” ಎಂದು ತಮಾಷೆ ಮಾಡಿದರು. ಸೋನಲ್ ಅನ್ನು ‘ಬ್ರೋ’ ಎಂದು ಸಹ ಕರೆದರು.

ನಿರ್ಮಾಪಕ ಬಿಸಿ ಪಾಟೀಲ್ ಬಗ್ಗೆ ಮಾತನಾಡಿದ ದರ್ಶನ್, ”ಬಿಸಿ ಪಾಟೀಲ್​ರನ್ನು ಕಾಕ ಎಂದು ಕರೆಯುತ್ತೇನೆ. ಈಗಾಗಲೇ ದಾವಣಗೆರೆಯಲ್ಲಿ, ಹುಬ್ಬಳ್ಳಿಯಲ್ಲಿ, ಮೈಸೂರಿನಲ್ಲಿ, ಬೆಂಗಳೂರಿನಲ್ಲಿ ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಈ ಬಾರಿ ರಾಣೆಬೆನ್ನೂರಿನಲ್ಲಿ ಮಾಡೋಣ ಎಂದೆ ಕೂಡಲೇ ಒಪ್ಪಿಕೊಂಡರು” ಎಂದರು ದರ್ಶನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ