
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ (Darshan) ಜೈಲು ಪಾಲಾಗಿದ್ದಾರೆ. ಹಲವು ತಿಂಗಳಿಂದ ಅವರು ಜೈಲಿನಲ್ಲೇ ವಾಸವಿದ್ದಾರೆ. ಇತ್ತೀಚೆಗೆ ಅವರು ಸಹ ಕೈದಿಗಳ ಮೇಲೆ ಹಲ್ಲೆ ಮಾಡಿದ ಬಗ್ಗೆ ಟಿವಿ9 ಕನ್ನಡ ವರದಿ ಮಾಡಿತ್ತು. ಇದಾದ ಬೆನ್ನಲ್ಲೇ ದರ್ಶನ್ ಸಂಬಂಧಿತ ಮತ್ತೊಂದು ಸ್ಟೋಟಕ ಸುದ್ದಿ ಟಿವಿ9ಗೆ ಲಭ್ಯವಾಗಿದೆ. ಇದು ದರ್ಶನ್ ಬಳಿ ಇದ್ದ ಗನ್ ವಿಷಯಕ್ಕೆ ಸಂಬಂಧಿಸಿದ್ದಾಗಿದೆ.
ಕೊಲೆ ಕೇಸ್ ನಲ್ಲಿ ದರ್ಶನ್ ಪರಪ್ಪನ ಅಗ್ರಹಾರ ಜೈಲ್ನಲ್ಲಿ ಇದ್ದಾರೆ. ಸಾಮಾನ್ಯವಾಗಿ ಕೊಲೆ ಕೇಸ್‌ನಲ್ಲಿ ಯಾರಾದರೂ ಆರೋಪಿ ಆದರೆ, ಅವರ ಬಳಿ ಇರೋ ಗನ್ ಲೈಸೆನ್ಸ್ ರದ್ದು ಮಾಡಬೇಕು ಎಂಬುದು ನಿಯಮ. ಈ ನಿಯಮವನ್ನು ಬೆಂಗಳೂರು ಪೊಲೀಸರು ಪಾಲಿಸಿದ್ದಾರೆ. ಕಳೆದ ವರ್ಷ ಡಿ.24ರಂದೇ ದರ್ಶನ್ ಪಿಸ್ತೂಲ್ ಲೈಸೆನ್ಸ್ ರದ್ದು ಮಾಡಲಾಗಿತ್ತು. ಆ ಬಳಿಕ ಈ ವರ್ಷ ಜನವರಿ 22ರಂದು ದರ್ಶನ್ ಅಪಾರ್ಟದ ಮೆಂಟ್ನಲ್ಲಿ .32 ಎಂಎಂ ಪಿಸ್ತೂಲ್ ಸೀಜ್ ಮಾಡಲಾಗಿತ್ತು.
ಪೊಲೀಸರು ಗಂಭೀರವಾಗಿ ಪರಿಗಣಿಸದ ಮತ್ತೊಂದು ವಿಷಯವೂ ಇದೆ. ದರ್ಶನ್ ಬಳಿ ಪಿಸ್ತೂಲ್ ಮಾತ್ರವಲ್ಲ. ಅವರ ಬಳಿ .22 mm ರೈಫಲ್ ಹಾಗೂ ಬುಲೆಟ್ಸ್ ಇದೆ . ಇದನ್ನು ಅವರು ಮೈಸೂರಿನ ಫಾರ್ಮ್ ಹೌಸ್ ಅಥವಾ ಬೆಂಗಳೂರಿನ ಮನೆಯಲ್ಲಿ ಬಚ್ಚಿಟ್ಟಿರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಮೈಸೂರು ಗ್ರಾಮಾಂತರ ಪೊಲೀಸರು ದರ್ಶನ್ಗೆ ಈ ರೈಫಲ್ ಪಡೆಯಲು ಪರವಾನಗಿ ನೀಡಿದ್ದರು. ಸಾಮಾನ್ಯವಾಗಿ ಕೊಲೆ ಆರೋಪಿ ಬಳಿ ಯಾವುದೇ ಹ್ಯಾಂಡ್ ಗನ್ ಇರಬಾರದು. ಆರೋಪಿ ಆಗುತ್ತಿದ್ದಂತೆ ಆ ಗನ್ ಸೀಜ್ ಮಾಡಬೇಕು. ಅದಾಗದಿದ್ದಲ್ಲಿ ಆರೋಪಿಯೇ ಪೊಲೀಸರ ವಶಕ್ಕೆ ಗನ್ನ ನೀಡಬೇಕು.
ಇದನ್ನೂ ಓದಿ: ಅಪ್ಪ-ಅಮ್ಮ ಸತ್ರೂ ಓಕೆ, ದರ್ಶನ್ ಜೈಲಲ್ಲಿರೋದನ್ನ ನೋಡೋಕಾಕ್ತಿಲ್ಲ; ಫ್ಯಾನ್ಸ್ ಅಂಧಾಭಿಮಾನ
ಈ ರೀತಿ ನಿಯಮ ತರಲು ಒಂದು ಕಾರಣವೂ ಇದೆ. ಗನ್ ಬಳಸಿ ಆರೋಪಿ ಸಾಕ್ಷಿಗಳಿಗೆ ಧಮ್ಕಿ ಹಾಕುವುದು ಅಥವಾ ಬೇರೆ ರೀತಿ ಅಪರಾಧ ಚಟುವಟಿಕೆ ಮಾಡುವ ಸಾಧ್ಯತೆ ಇರುತ್ತದೆ. ಆರೋಪಿ ಗನ್ ನೀಡದಿದ್ದರೇ ಅವರ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬಹುದಾಗಿದೆ. ಆದರೆ, ದರ್ಶನ್ ಮೇಲೆ ಕೊಲೆ ಕೇಸ್ ದಾಖಲಾಗಿ ಒಂದೂವರೆ ವರ್ಷ ಕಳೆದರೂ ಮೈಸೂರು ಗ್ರಾಮಾಂತರ ಪೊಲೀಸರು ಈ ರೈಫಲ್ ಸೀಜ್ ಮಾಡಿಲ್ಲ. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಮೂಡುವಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:25 am, Fri, 12 December 25