
ಚಿತ್ರರಂಗದಲ್ಲಿ ಪ್ರಸ್ತುತ ಕಮಲ್ ಹಾಸನ್ (Kamal Haasan) ಕನ್ನಡದ ಬಗ್ಗೆ ನೀಡಿರುವ ಹೇಳಿಕೆಯದ್ದೇ ಸದ್ದು. ಈ ಸದ್ದಿನ ನಡುವೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಪೋಸ್ಟರ್ನಲ್ಲಿ ನಟ ದರ್ಶನ್ ಅಂಬರೀಶ್ ಅವರ ಹಳೆಯ ಸಿನಿಮಾ ಒಂದರ ಬಲು ಜನಪ್ರಿಯ ಪಾತ್ರದ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಬಿಡುಗಡೆ ಮಾಡುವ ಜೊತೆಗೆ ಸಿನಿಮಾದ ಬಗ್ಗೆ ಅಪ್ಡೇಟ್ ಒಂದನ್ನು ಸಹ ಚಿತ್ರತಂಡ ಹಂಚಿಕೊಂಡಿದೆ. ಆ ಮೂಲಕ ಸಿನಿಮಾದ ಬಿಡುಗಡೆ ಸನಿಹ ಆಗುತ್ತಿರುವ ಸುಳಿವನ್ನು ಸಹ ನೀಡಿದೆ.
ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಹಲವು ಅಡೆ-ತಡೆಗಳ ಬಳಿಕ ಚಿತ್ರೀಕರಣವನ್ನು ಮುಂದುವರೆಸಿದ್ದು, ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಸಿನಿಮಾದ ಹೊಸ ಪೋಸ್ಟರ್ ಒಂದು ಇದೀಗ ಬಿಡುಗಡೆ ಮಾಡಲಾಗಿದ್ದು, ನಟ ದರ್ಶನ್, ಅಂಬರೀಶ್ ಅವರ ಬಲು ಜನಪ್ರಿಯ ಕನ್ವರ್ಲಾಲ್ ಪಾತ್ರದ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ವರ್ ಲಾಲ್ ಪಾತ್ರದಲ್ಲಿನ ಅಂಬರೀಶ್ ರೀತಿಯೇ ಹೇರ್ಸ್ಟೈಲ್, ಗಡ್ಡ ಬಿಟ್ಟು, ಜೈಲುಡುಗೆ ಧರಿಸಿ, ಕೈಯಲ್ಲಿ ಸಿಗರೇಟು ಹಿಡಿದು ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ ದರ್ಶನ್.
ನಿನ್ನೆಯಷ್ಟೆ (ಮೇ 31) ಅಂಬರೀಶ್ ಅವರ ಹುಟ್ಟುಹಬ್ಬ ಇತ್ತು. ಇದೇ ಕಾರಣಕ್ಕೆ ಕನ್ವರ್ ಲಾಲ್ ಗೆಟಪ್ನ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಂದಹಾಗೆ ‘ಡೆವಿಲ್’ ಸಿನಿಮಾದ ಮಾತಿನ ಭಾಗ ಸಂಪೂರ್ಣವಾಗಿ ಮುಗಿದಿದೆ, ಮಾತ್ರವಲ್ಲದೆ ಸಿನಿಮಾದ ಪ್ರಾಥಮಿಕ ಸಂಭಾಷಣೆ ರೆಕಾರ್ಡಿಂಗ್ ಅನ್ನು ಸಹ ಚಿತ್ರತಂಡ ಮುಗಿಸಿದೆ. ಇನ್ನು ಕೆಲ ಆಕ್ಷನ್ ದೃಶ್ಯಗಳು ಹಾಗೂ ಒಂದು ಹಾಡಿನ ಚಿತ್ರೀಕರಣ ಮಾತ್ರವೇ ಬಾಕಿ ಇದೆ ಎನ್ನಲಾಗುತ್ತಿದೆ. ಚಿತ್ರೀಕರಣದ ಜೊತೆ-ಜೊತೆಯಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ನಡೆಯುತ್ತಿದ್ದು, ಸಿನಿಮಾ ಅನ್ನು ಆದಷ್ಟು ಬೇಗ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ.
ಇದನ್ನೂ ಓದಿ:ಹುಟ್ಟುಹಬ್ಬದ ದಿನ ಅಂಬಿ ಅಪ್ಪಾಜಿಯ ನೆನೆದ ದರ್ಶನ್
‘ಡೆವಿಲ್’ ಸಿನಿಮಾ ಅನ್ನು ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ‘ಮಿಲನ’ ಸೇರಿದಂತೆ ಹಲವು ಅತ್ಯುತ್ತಮ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ ಪ್ರಕಾಶ್, ‘ಡೆವಿಲ್’ ದರ್ಶನ್ ಜೊತೆಗೆ ಪ್ರಕಾಶ್ ಅವರ ಎರಡನೇ ಸಿನಿಮಾ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಬಹಳ ಸಮಯವಾಗಿದೆ. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿಯೇ ನಟ ದರ್ಶನ್, ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜಾಮೀನಿನ ಮೇಲೆ ಹೊರಬಂದ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸಿದ್ದು, ಚಿತ್ರೀಕರಣ ಮುಗಿಯುವ ಹಂತದಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ