AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲ್ ವಿವಾದ, ‘ರಾಮಾ ಶಾಮ ಭಾಮ’ ರೀ ರಿಲೀಸ್ ಮಾಡಲ್ಲ ಎಂದ ನಿರ್ಮಾಪಕ

Kamal Haasan: ಕಮಲ್ ಹಾಸನ್ ಕನ್ನಡದ ಬಗ್ಗೆ ನೀಡಿರುವ ಹೇಳಿಕೆಯಿಂದಾಗಿ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳು ಬೆದರಿಕೆ ಹಾಕಿವೆ. ಈ ವಿವಾದದಿಂದಾಗಿ ಕಮಲ್ ಹಾಸನ್ ನಟಿಸಿರುವ ಕನ್ನಡ ಸಿನಿಮಾ ‘ರಾಮ ಶಾಮ ಭಾಮ’ ಸಿನಿಮಾದ ಮರು ಬಿಡುಗಡೆಗೂ ಸಮಸ್ಯೆ ಎದುರಾಗಿದೆ.

ಕಮಲ್ ವಿವಾದ, ‘ರಾಮಾ ಶಾಮ ಭಾಮ’ ರೀ ರಿಲೀಸ್ ಮಾಡಲ್ಲ ಎಂದ ನಿರ್ಮಾಪಕ
Kamal Haasan
ಮಂಜುನಾಥ ಸಿ.
|

Updated on: May 31, 2025 | 6:36 PM

Share

ಕಮಲ್ ಹಾಸನ್ (Kamal Haasan) ಅವರು ಕನ್ನಡ ಭಾಷೆಯ ಉಗಮದ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಕಮಲ್ ಹೇಳಿಕೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ರಾಜ್ಯದ ಕೆಲವೆಡೆ ಪ್ರತಿಭಟನೆ ನಡೆಸಿವೆ. ಕಮಲ್ ನಟನೆಯ ‘ಥಗ್ ಲೈಫ್’ ಸಿನಿಮಾದ ಬಿಡುಗಡೆಗೆ ವಿರೋಧ ವ್ಯಕ್ತವಾಗಿದೆ. ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುವುದಾಗಿ ಕನ್ನಡಪರ ಸಂಘಟನೆಗಳು ಬೆದರಿಕೆ ಹಾಕಿವೆ. ಈ ವಿವಾದದಿಂದಾಗಿ ಕಮಲ್ ಹಾಸನ್ ನಟಿಸಿರುವ ಕನ್ನಡ ಸಿನಿಮಾ ‘ರಾಮ ಶಾಮ ಭಾಮ’ ಸಿನಿಮಾದ ಮರು ಬಿಡುಗಡೆಗೂ ಸಮಸ್ಯೆ ಎದುರಾಗಿದೆ.

ಕಮಲ್ ಹಾಸನ್ ನಟಿಸಿರುವ ಕನ್ನಡ ಸಿನಿಮಾ ‘ರಾಮ ಶಾಮ ಭಾಮ’ ಕನ್ನಡದ ಹಾಸ್ಯ ಸಿನಿಮಾಗಳಲ್ಲಿಯೇ ಅತ್ಯುತ್ತಮ ಎನ್ನಬಹುದಾದ ಸಿನಿಮಾ. ಈ ಸಿನಿಮಾಕ್ಕೆ ಭಾರಿ ದೊಡ್ಡ ಅಭಿಮಾನಿ ವರ್ಗವೇ ಇದೆ. ‘ರಾಮ ಶಾಮ ಭಾಮ’ ಸಿನಿಮಾದ ದೃಶ್ಯಗಳು ಈಗಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಈ ಸಿನಿಮಾ ಅನ್ನು ಮರು ಬಿಡುಗಡೆ ಮಾಡಲು ಸಿನಿಮಾದ ನಿರ್ಮಾಪಕ ಕೆ ಮಂಜು ಅವರು ಯೋಜನೆ ಹಾಕಿದ್ದರಂತೆ. ಆದರೆ ಈಗ ವಿವಾದ ಆಗಿರುವ ಬೆನ್ನಲ್ಲೆ ಸಿನಿಮಾದ ಮರು ಬಿಡುಗಡೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಈ ಕುರಿತು ಟಿವಿ9 ಜೊತೆಗೆ ಮಾತನಾಡಿರುವ ಕೆ ಮಂಜು, ‘ರಾಮ ಶಾಮ ಭಾಮ’ ಸಿನಿಮಾ ಅನ್ನು ಮರು ಬಿಡುಗಡೆ ಮಾಡಲು ಯೋಜನೆ ಹಾಕಿದ್ದೆ. ಸಿನಿಮಾಕ್ಕೆ ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಸಿದ್ದೆ, ಸೌಂಡ್ ಅನ್ನು ಸಹ ಉತ್ತಮಗೊಳಿಸಿದ್ದೆ. ಮರು ಬಿಡುಗಡೆ ಮಾಡಲೆಂದು ಸಿನಿಮಾದ ಮೇಲೆ ಸಾಕಷ್ಟು ಖರ್ಚು ಮಾಡಿದ್ದೆ. ಆದರೆ ಈಗ ಕಮಲ್ ಅವರ ಹೇಳಿಕೆಯ ಕಾರಣಕ್ಕೆ ಮರು ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ:‘ಕಮಲ್ ಹಾಸನ್​ನ ಪ್ರೀತಿಸುತ್ತೇವೆ, ಆದ್ರೆ ಅವರು ಮಾಡಿದ್ದು ತಪ್ಪು’: ವಸಿಷ್ಠ ಸಿಂಹ

‘ನನಗೆ ಹಣ ಮುಖ್ಯ ಅಲ್ಲ ಭಾಷೆ ಮುಖ್ಯ. ಕಮಲ್ ಹಾಸನ್ ಅವರು ಬಹಳ ದೊಡ್ಡ ನಟ. ಅವರ ಬಗ್ಗೆ ಕನ್ನಡಿಗರಿಗೆ ಬಹಳ ಪ್ರೀತಿ, ಗೌರವ ಇದೆ. ಆದರೆ ಈಗ ಅವರು ಆಡಿರುವ ಮಾತಿನಿಂದ ನೋವಾಗಿದೆ. ಪ್ರೀತಿಯಿಂದ ಆಡಿದ್ದೀನಿ ಎಂದು ಅವರು ಹೇಳಿದ್ದಾರೆ. ಹಾಗೆಯೇ ಅದೇ ಪ್ರೀತಿಯಿಂದ ಅವರು ಕ್ಷಮೆ ಕೇಳಿಬಿಟ್ಟರೆ, ಇನ್ನೂ ದೊಡ್ಡವರಾಗುತ್ತಾರೆ. ಸಿನಿಮಾ ಮರು ಬಿಡುಗಡೆ ಮಾಡಿ ಹಣ ಮಾಡಬೇಕು ಎಂಬುದೇನು ಇಲ್ಲ. ಕನ್ನಡಿಗರಿಗೆ ಸ್ವಾಭಿಮಾನ ಬಹಳ ಮುಖ್ಯವಾದುದು, ಕ್ಷಮೆ ಕೇಳುವವರೆಗೆ ನಾವು ಸಿನಿಮಾ ಬಿಡುಗಡೆ ಮಾಡಲ್ಲ’ ಎಂದಿದ್ದಾರೆ.

ಕನ್ನಡ ಭಾಷೆ ಸಂಸ್ಕೃತ ಭಾಷೆಯಿಂದ ಉಗಮವಾಗಿದೆ ಎಂದು ಕಮಲ್ ಹಾಸನ್ ಅವರು ಇತ್ತೀಚೆಗೆ ಹೇಳಿದ್ದರು. ಆ ಮೂಲಕ ತಮಿಳು ಕನ್ನಡಕ್ಕಿಂತಲೂ ಶ್ರೇಷ್ಠ ಎಂಬರ್ಥದ ಮಾತುಗಳನ್ನು ಅವರು ಆಡಿದ್ದರು. ಕಮಲ್ ಅವರ ಈ ಹೇಳಿಕೆಯನ್ನು ಕನ್ನಡದ ಅನೇಕ ನಟ-ನಟಿಯರು ಖಂಡಿಸಿದ್ದಾರೆ. ಕಮಲ್ ಅವರು ಕ್ಷಮೆ ಕೇಳಿಯೇ ತೀರಬೇಕು ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ