ಪ್ರತಿಭಟನೆ ಬಳಿಕ ಕಾವೇರಿ ಪರ ‘ಆನ್​ಲೈನ್ ಬೆಂಬಲ’ ವ್ಯಕ್ತಪಡಿಸಲಾರಂಭಿಸಿದ ನಟರು

|

Updated on: Sep 20, 2023 | 4:46 PM

Cauvery Dispute: ಕಾವೇರಿ ವಿವಾದದ ಕುರಿತಾಗಿ ನಟ ದರ್ಶನ್, ಸುದೀಪ್, ಜಗ್ಗೇಶ್ ಹಾಗೂ ಇನ್ನಿತರ ನಟರು ಟ್ವೀಟ್ ಮಾಡಿದ್ದಾರೆ. ಕಾವೇರಿ ಕರ್ನಾಟಕದ ಹಕ್ಕು ಎಂದಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆ ಬಳಿಕ ಕಾವೇರಿ ಪರ ಆನ್​ಲೈನ್ ಬೆಂಬಲ ವ್ಯಕ್ತಪಡಿಸಲಾರಂಭಿಸಿದ ನಟರು
ಸುದೀಪ್-ದರ್ಶನ್
Follow us on

ಕರ್ನಾಟಕ (Karnataka) ಮತ್ತು ತಮಿಳುನಾಡಿನ ನಡುವೆ ಮತ್ತೊಮ್ಮೆ ಕಾವೇರಿ (Cauvery) ವಿವಾದ ತಲೆ ಎತ್ತಿದೆ. ಕಾವೇರಿ ನದಿ ನೀರನ್ನು ಹರಿಸುವಂತೆ ನ್ಯಾಯಾಲಯ ಆದೇಶಿಸಿದೆ. ಈ ಕುರಿತಾಗಿ ಸರ್ಕಾರವು ಸರ್ವಪಕ್ಷ ಸಭೆ ಕರೆದಿದ್ದು, ಚರ್ಚಿಸಿ ನಿರ್ಣಯ ಕೈಗೊಳ್ಳಲಿದೆ. ಈ ನಡುವೆ ಮಂಡ್ಯ, ಮೈಸೂರು ಇನ್ನೂ ಕೆಲವೆಡೆಗಳಲ್ಲಿ ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯ ಮಾಡಿ ಪ್ರತಿಭಟನೆಗಳು ಆರಂಭವಾಗಿವೆ. ಚಿತ್ರರಂಗದವರು ಕಾವೇರಿ ಕುರಿತಾಗಿ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸಿ ಇಂದು (ಸೆಪ್ಟೆಂಬರ್ 20) ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗಿದೆ. ಅದರ ಬೆನ್ನಲ್ಲೆ ಕೆಲವು ನಟರು ಟ್ವೀಟ್ ಮಾಡಿ ‘ಆನ್​ಲೈನ್ ಬೆಂಬಲ’ ವ್ಯಕ್ತಪಡಿಸಿದ್ದಾರೆ.

ಕಾವೇರಿ ವಿವಾದದ ಕುರಿತಾಗಿ ಟ್ವೀಟ್ ಮಾಡಿರುವ ನಟ ಸುದೀಪ್, ”ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ” ಎಂದಿದ್ದಾರೆ.

ನಟ ದರ್ಶನ್ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ”ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ” ಎಂದಿದ್ದಾರೆ.

ಇದನ್ನೂ ಓದಿ:ಕಾವೇರಿ ನೀರು ಸಂಕಷ್ಟ: ದೆಹಲಿ ಸಭೆಯಲ್ಲಿ ಮಹತ್ವದ ತೀರ್ಮಾನ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ಇನ್ನು ನಟ, ರಾಜ್ಯಸಭೆ ಸದಸ್ಯರೂ ಆಗಿರುವ ಜಗ್ಗೇಶ್ ಟ್ವೀಟ್ ಮಾಡಿ, ”ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆಸಲ್ಲಿಸಿ ಕನ್ನಡಿಗರಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷಸಭೆಗೆ ಹಾಜರಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ರವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ. ನಾಳೆ ದೆಹಲಿಯಲ್ಲಿ ಕರ್ನಾಟಕ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ ಅದರಲ್ಲೂ ಭಾಗಿಯಾಗಿ “ಕಾವೇರಿ ನದಿಯ” ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ದರ್ಶನ್, ಸುದೀಪ್ ಅವರುಗಳು ಟ್ವೀಟ್ ಮಾಡಿದ ಹಲವು ನಟ-ನಟಿಯರು ಕಾವೇರಿ ಪರವಾಗಿ ಟ್ವೀಟ್ ಮಾಡಲು ಆರಂಭಿಸಿದ್ದಾರೆ. ಫೈಟರ್ ಸಿನಿಮಾದ ಪ್ರಚಾರದಲ್ಲಿರುವ ನಟ ವಿನೋದ್ ಪ್ರಭಾಕರ್, ಕಾವೇರಿ ಪರವಾಗಿ ಮಾತನಾಡಿದ್ದಾರೆ. ಕಾವೇರಿ ಕರ್ನಾಟಕದ ಹಕ್ಕು ಎಂದಿದ್ದಾರೆ.

ಕಾವೇರಿ ವಿವಾದದ ಕುರಿತು ನ್ಯಾಯಾಲಯ ನೀಡಿರುವ ಆದೇಶ ಪಾಲನೆ ಕುರಿತಾಗಿ ನಿರ್ಣಯ ಕೈಗೊಳ್ಳಲು ಇಂದು (ಸೆಪ್ಟೆಂಬರ್ 20) ದೆಹಲಿಯಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಆದರೆ ಮೈಸೂರು, ಮಂಡ್ಯ ಇನ್ನಿತರೆ ಕಡೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದು, ಸರ್ಕಾರವು ಈಗಾಗಲೇ ತಮಿಳುನಾಡಿಗೆ ನೀರು ಹರಿಸಲು ಆರಂಭ ಮಾಡಿದೆ ಎಂದು ರೈತರು, ಪ್ರತಿಭಟನಾಕಾರರು ಆರೋಪ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ